Advertisement

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

09:31 PM Mar 10, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಣೆ ವೇಳೆ ಪಟ್ಟಣಗಳ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ‌ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುವ ವೇಳೆ ಕೊಳ್ಳೇಗಾಲ, ಚಾಮರಾಜನಗರ ಸೇರಿದಂತೆ ಇತರೆ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಕೆಲವೆಡೆ ಒಳಚರಂಡಿ, ಸಿಗ್ನಲ್‌ ಲೈಟ್‌ ಸೇರಿದಂತೆ ಕೆಲವು ಕಾಮಗಾರಿ ಪೂರ್ಣಗೊಳಿಸಿಲ್ಲ.

ಇದರಿಂದ ಪಟ್ಟಣದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸವಾದಂತಿಲ್ಲ. ಹೀಗಾಗಿ ನಗರಸಭೆ ಮುಖ್ಯಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ಬಾಕಿ ಉಳಿದಿರುವ ಕಾಮಗಾರಿಯ ಸಂಪೂರ್ಣ ವಿವರ ಒದಗಿಸುವಂತೆ ತಿಳಿಸಿದರು.

ಅಂದಾಜು ಪಟ್ಟಿ ಸಿದ್ಧಪಡಿಸಿ: ನಗರ, ಪಟ್ಟಣ ಸೇರಿದಂತೆ ಹೆದ್ದಾರಿ ಹಾದುಹೋಗಿರುವ ಮಾರ್ಗಗಳಲ್ಲಿ ಜಂಕ್ಷನ್‌ ಕೇಂದ್ರಗಳು ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗಬೇಕಿದೆ. ವಿದ್ಯುತ್‌ ದೀಪಗಳ ಅಳವಡಿಕೆ, ಸಂಚಾರ ಫ‌ಲಕಗಳು, ಸೂಚನಾ ದೀಪಗಳು ಸಮರ್ಪಕವಾಗಿ ಕಾರ್ಯಚಾರಣೆಯಾಗಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ. ರಸ್ತೆ ಪಕ್ಕದಲ್ಲಿ ನಿಯಮಾನುಸಾರ ಕಲ್ಪಿಸಬೇಕಿರುವ ಸೌಲಭ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಬಾಕಿ ಉಳಿದಿರುವ ಕಾಮಗಾರಿ ಸಂಬಂಧ ಅಂದಾಜು ಪಟ್ಟಿ ಸಿದ್ಧಪಡಿಸಬೇಕು ಎಂದರು.

ಕಾಲಮಿತಿಯೊಳಗೆ ಮುಗಿಸಿ: ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಹೆದ್ದಾರಿ ಕಾಮಗಾರಿಯನ್ನು ಕಾಲಮಿತಿಯೊಳಗೆ ಮುಗಿಸಬೇಕು. ಸೂಚಿಸಲಾಗಿರುವ ಗಡುವಿನೊಳಗೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಅನೂಕೂಲ ಕಲ್ಪಿಸಬೇಕು. ಯೋಜನೆಯಲ್ಲಿ ವಿಧಿಸಲಾಗಿರುವ ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾಗಿರಬೇಕು. ರಸ್ತೆ ಕೆಲಸವು ಅತ್ಯಂತ ಪ್ರಮುಖವಾಗಿರುವದರಿಂದ ಆದ್ಯತೆ ಮೇರೆಗೆ ಯೋಜನೆ ಪೂರ್ಣವಾಗಬೇಕು ಎಂದು ನಿರ್ದೇಶನ ನೀಡಿದರು.

Advertisement

ಹೆದ್ದಾರಿ ಕಾಮಗಾರಿ ಪೂರ್ಣ ಸಂಬಂಧ ಅಡಚಣೆಗಳಿದಲ್ಲಿ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ಹೆದ್ದಾರಿ ಸ್ಥಳಗಳಲ್ಲಿ ಪರಿಹಾರ ಕಾರ್ಯಗಳು ಬಾಕಿ ಇದ್ದಲ್ಲಿ ಈ ಸಂಬಂಧ ಅಗತ್ಯ ಪ್ರಕ್ರಿಯೆ ತುರ್ತಾಗಿ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು ಎದುರಾಗಿರುವ ತೊಡಕಿನ ಬಗ್ಗೆ ಚರ್ಚಿಸಿ ಕಾಮಗಾರಿ ಸಂಪೂರ್ಣಗೊಳಿಸಲು ಅವಶ್ಯಕ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ನಿಖೀತಾ ಎಂ.ಚಿನ್ನಸ್ವಾಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕ ಶ್ರೀಧರ್‌, ವಿಶೇಷ ಭೂ ಸ್ವಾಧೀನಾಧಿಕಾರಿ ರಾಜೇಂದ್ರ ಪ್ರಸಾದ್‌, ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸುರೇಶ್‌ ಕುಮಾರ್‌, ತಹಶೀಲ್ದಾರ್‌ ಕೆ.ಕುನಾಲ್‌, ನಗರಸಭೆ ಆಯುಕ್ತ ರಾಜಣ್ಣ, ನಾಗಶೆಟ್ಟಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next