Advertisement

ಹೊಸಪೇಟೆ-ಗುತ್ತಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ

01:56 PM Apr 04, 2022 | Team Udayavani |

ಬಳ್ಳಾರಿ: ಕೇಂದ್ರ ಸರ್ಕಾರದ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ರಾಜ್ಯದ ಸಂಸದರ ಸಭೆಯಲ್ಲಿ ಭಾಗವಹಿಸಿದ್ದ ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಯಶ್ವಂತ್‌ರಾಜ್‌ ನಾಗಿರೆಡ್ಡಿ ಹಲವು ಬೇಡಿಕೆಗಳನ್ನು ಪ್ರಸ್ತಾಪಿಸಿ ಈಡೇರಿಸುವಂತೆ ಮನವಿ ಮಾಡಿದ್ದಾರೆ.

Advertisement

ರಾಜ್ಯದ ಸಂಸದರಾದ ಜಿ.ಎಂ.ಸಿದ್ದೇಶ್ವರ್‌, ಶಿವಕುಮಾರ್‌ ಉದಾಸಿ, ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಅಣ್ಣಾ ಸಾಹೇಬ್‌ ಶಂಕರ್‌ ಜೊಲ್ಲೆ, ಕೆ.ಸಿ.ರಾಮ ಮೂರ್ತಿ, ಪಿ.ಸಿ.ಗದ್ದಿಗೌಡರ್‌ ಇನ್ನಿತರೆ ರಾಜ್ಯದ ಸಂಸದರು ಮತ್ತು ಸಚಿವರು ಉಪಸ್ಥಿತರಿದ್ದ ಸಭೆಯಲ್ಲಿ ಯಶ್ವಂತ್‌ರಾಜ್‌ ಅವರು, ನಗರದ ಸುಧಾ ಕ್ರಾಸ್‌ ಬಳಿ ಫ್ಲ ಓವರ್‌ ನಿರ್ಮಾಣ ಮಾಡುವುದು, ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್‌ ಮತ್ತು ಎಸ್ಕ್ಲೇಟರ್‌ ಅಳವಡಿಸಲು ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸರ್ಕಾರದ ಕ್ರಮಗಳನ್ನು ಬೇಗನೆ ಪೂರೈಸಿ ಜನತೆಗೆ ಲಿಫ್ಟ್‌ ಮತ್ತು ಎಸ್ಕೆಲೇಟರ್‌ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಬಳ್ಳಾರಿ ಬೆಂಗಳೂರು ನಡುವೆ ಇಂಟರ್‌ಸಿಟಿ ರೈಲನ್ನು ಆರಂಭಿಸಬೇಕು.

ಹೊಸಪೇಟೆ-ಗುತ್ತಿ ನಡುವಿನ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರೈಸಬೇಕು. 2010 ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 900 ಎಕರೆ ರೈತರ ಭೂಮಿ ವಶಪಡಿಸಿಕೊಂಡು ಹನ್ನೆರೆಡು ವರ್ಷಗಳು ಕಳೆದರೂ ನಿರ್ಮಾಣವಾಗದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೂಡಲೇ ಚಾಲನೆ ನೀಡಬೇಕು. ತೋರಣಗಲ್ಲು-ಬಳ್ಳಾರಿ ಮಧ್ಯದಲ್ಲಿ ಎಂಎಂಟಿಸಿ ಮತ್ತು ಮಿತ್ತಲ್‌ ಗ್ರೂಪ್‌ಗೆ ನೀಡಿರುವ ನೂರಾರು ಎಕರೆ ಭೂಮಿಯಲ್ಲಿ ತ್ವರಿತವಾಗಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು, ಇಲ್ಲದೇ ಹೋದರೆ ರೈತರ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು ಎಂದವರು ಮನವಿ ಮಾಡಿದ್ದಾರೆ.

ಇತ್ತೀಚಿನ ಕೇಂದ್ರದ ಆಯವ್ಯಯದಲ್ಲಿ ರಫ್ತು ಗೆ ಹೆಚ್ಚು ಒತ್ತು ನೀಡಲಾಗಿದ್ದು, ಇದರಿಂದಾಗಿ ರಾಜ್ಯದ ಮತ್ತು ದೇಶದ ಉದ್ಯಮಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಅದರ ಬದಲಾಗಿ ನಮ್ಮಲ್ಲಿಯೇ ಸಿದ್ಧವಸ್ತುಗಳನ್ನು ತಯಾರು ಮಾಡಿ ರಫ್ತು ಮಾಡಿದರೆ ನಮ್ಮ ಉದ್ಯಮಿಗಳಿಗೆ ಸಹಕಾರವಾಗುತ್ತದೆ ಅಲ್ಲದೇ ನಮ್ಮ ದೇಶದ ಬೊಕ್ಕಸಕ್ಕೂ ಹೆಚ್ಚಿನ ಆರ್ಥಿಕ ಹರಿವು ಬರುತ್ತದೆ ಎಂದು ಇನ್ನಿತರೆ ವಿಷಯಗಳನ್ನು ಸಭೆಯಲ್ಲಿ ಮಂಡಿಸಿ ತ್ವರಿತವಾಗಿ ಇತ್ಯರ್ಥ ಪಡಿಸುವಂತೆ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next