Advertisement

ಕಾಲಮಿತಿಯೊಳಗೆ ಕಟ್ಟಡ ಪೂರ್ಣಗೊಳಿಸಿ

05:36 PM Apr 05, 2022 | Team Udayavani |

ಹಾವೇರಿ: ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಟ್ಟಡ ಕಾಮಗಾರಿಯನ್ನು ಡಿಸೆಂಬರ್‌ -2022ರ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಿ, ಜನವರಿ 2023ರಿಂದ ಶೈಕ್ಷಣಿಕ ಚಟುವಟಿಕೆಗಳು ನೂತನ ಕಟ್ಟಡದಲ್ಲೇ ಆರಂಭಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಕಟ್ಟಡ ಪೂರ್ಣಗೊಳಿಸಿ ಎಂದು ಕಟ್ಟಡ ಗುತ್ತಿಗೆದಾರ ಕಂಪನಿಯ ಮುಖ್ಯಸ್ಥರಿಗೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ತಾಕೀತು ಮಾಡಿದರು.

Advertisement

ಸೋಮವಾರ ಹಾವೇರಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ನಿರೀಕ್ಷಿತ ಪ್ರಮಾಣದಲ್ಲಿ ಕಾಮಗಾರಿ ನಡೆಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಚುನಾವಣೆ ಪೂರ್ವದಲ್ಲೇ ಜನವರಿ-2023ರಲ್ಲಿ ಕಟ್ಟಡ ಕಾಮಗಾರಿ ಉದ್ಘಾಟಿಸಲಾಗುವುದು. ಈ ನಿಟ್ಟಿನಲ್ಲಿ ವೇಗದಲ್ಲಿ ಕಾಮಗಾರಿ ಕೈಗೊಂಡು ಸಂಪರ್ಕ ರಸ್ತೆ, ಕುಡಿಯುವ ನೀರು, ಆಡಳಿತ ಬ್ಲಾಕ್‌, ಬೋಧಕ, ಬೋಧಕೇತರ ಸಿಬ್ಬಂದಿ ವಸತಿ ಗೃಹ, ವಿದ್ಯಾರ್ಥಿ ನಿಲಯ ಕಟ್ಟಡ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಹಾವೇರಿ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಪ್ರಗತಿ ಕುರಿತಂತೆ ಸಭೆ ನಡೆಸಿ ತೀವ್ರ ಅಸಮಾಧಾನಗೊಂಡಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಕಾಮಗಾರಿ ಪ್ರಗತಿಯಾಗಿಲ್ಲ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದು ಎಲ್ಲರಿಗೂ ಅಪಮಾನದ ಸಂಗತಿ. ಕಾಮಗಾರಿಯನ್ನು ಪರಿಶೀಲಿಸಲಾಗಿ ಶೇ.30ರಷ್ಟು ಮಾತ್ರ ಕಾಮಗಾರಿಗೊಳ್ಳಲಾಗಿದೆ. ಇನ್ನೂ ಶೇ.70ರಷ್ಟು ಕೆಲಸ ಬಾಕಿ ಇದೆ. ಮುಂದಿನ ದಿನಗಳಲ್ಲಿ ಟೈಮ್‌ಬಾಂಡ್‌ ಹಾಕಿಕೊಂಡು ಬ್ಲಾಕ್‌ ವಾರು ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ. ಕಾಲಕಾಲಕ್ಕೆ ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಪರಿಶೀಲನೆಗೆ ಜಿಲ್ಲಾ ಹಾಗೂ ರಾಜ್ಯಮಟ್ಟದ ಇಂಜಿನಿಯರ್‌ಗಳನ್ನು ನೇಮಕ ಮಾಡಲಾಗುವುದು ಎಂದು ಕೆ.ಬಿ.ಆರ್‌. ಗುತ್ತಿಗೆದಾರ ಕಂಪನಿಯ ಕೆ. ಬಾಬುರಾವ್‌ ಅವರಿಗೆ ಸೂಚನೆ ನೀಡಿದರು.

ವೈದ್ಯಕೀಯ ಕಾಲೇಜು ಆರಂಭಕ್ಕೆ ಅಗತ್ಯವಾದ ಹಣಕಾಸಿನ ವ್ಯವಸ್ಥೆ, ಬೋಧಕ ಮತ್ತು ಬೋಧಕೇತರ ನೇಮಕಾತಿ ಪ್ರಕ್ರಿಯೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ಅನುಮತಿ ವಿವಿಧ ಪ್ರಸ್ತಾವನೆಗಳಿಗೆ ಮಂಜೂರಾತಿ ಸೇರಿದಂತೆ ಉನ್ನತ ಮಟ್ಟದಲ್ಲಿ ಬೆಂಗಳೂರಿನಲ್ಲಿ ನಾವು ವ್ಯವಸ್ಥೆ ಮಾಡುತ್ತೇವೆ. ಜಿಲ್ಲಾಮಟ್ಟದಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಭೂಸ್ವಾ ಧೀನ ಪ್ರಕ್ರಿಯೆಯನ್ನು ಜಿಲ್ಲಾಧಿ ಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಮಾತನಾಡಿ, ಕಟ್ಟಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಕುಡಿಯುವ ನೀರಿನ ಪೂರೈಕೆ ಪ್ರಸ್ತಾವನೆ ಹಾಗೂ ಭೂಸ್ವಾ ಧೀನ ಪ್ರಸ್ತಾವನೆಗಳನ್ನು ತ್ವರಿತವಾಗಿ ಸಲ್ಲಿಸಬೇಕು ಎಂದು ಸೂಚಿಸಿದರು.

Advertisement

ಶಾಸಕ ನೆಹರು ಓಲೇಕಾರ ಹಾಗೂ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಭೂಸ್ವಾಧೀನ ಪ್ರಕ್ರಿಯೆ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಕಾಮಗಾರಿಗಳಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿ ನೀಡಿದರು.

ವೈದ್ಯಕೀಯ ಕಾಲೇಜಿನ ವಿಶೇಷಾಧಿಕಾರಿ ಅರವಿಂದ ಮುಳಗುಂದ ಮಾತನಾಡಿ, ಎನ್‌ಎಂಸಿ ಪ್ರಕಾರ 150 ವಿದ್ಯಾರ್ಥಿಗಳ ಪ್ರವೇಶ ಅನುಕೂಲ ಕಲ್ಪಿಸಲು ತಾತ್ಕಾಲಿಕವಾಗಿ ವೈದ್ಯಕೀಯ ಪ್ರಥಮ ವರ್ಷದ ತರಗತಿ ಆರಂಭಕ್ಕೆ ದೇವಗಿರಿ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜಿನ ಪ್ರತ್ಯೇಕ ಬ್ಲಾಕ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನೇಮಕಾತಿ ಕುರಿತಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಕೆ. ಮಂಜಪ್ಪ, ಗುತ್ತಿಗೆದಾರ ಕಂಪನಿಯ ಮುಖ್ಯಸ್ಥ ಕೆ.ಬಾಬುರಾವ್‌, ವೈದ್ಯಕೀಯ ಕಾಲೇಜಿನ ವಿಶೇಷಾಧಿಕಾರಿ ಅರವಿಂದ ಮುಳಗುಂದ, ಇಂಜಿನಿಯರ್‌ಗಳಾದ ಕೆ. ಸುರೇಶ, ಶಶಿಧರ ವಾಲಿ, ವಿವಿಧ ಅಧಿಕಾರಿಗಳು ಇದ್ದರು.

ವಿಶೇಷ ಅಧಿಕಾರಿ ನೇಮಕ: ವೈದ್ಯಕೀಯ ಕಾಲೇಜಿನ ಕಾಮಗಾರಿಗಳ ತ್ವರಿತ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಅಗತ್ಯವಾದ ಸಲಹೆ, ಸಹಕಾರ, ಸಮನ್ವಯ ಕಾರ್ಯಕ್ಕಾಗಿ ವಿಶೇಷ ಅಧಿಕಾರಿಯಾಗಿ ರಾಜ್ಯ ಸರ್ಕಾರದಿಂದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್‌ ರೋಷನ್‌ ಅವರು ನೇಮಕ ಮಾಡಲಾಗುವುದು. ಶೀಘ್ರದಲ್ಲೇ ಖಾಯಂ ಆಗಿ ಹಾವೇರಿ ವೈದ್ಯಕೀಯ ಕಾಲೇಜ್‌ಗೆ ನಿರ್ದೇಶಕರನ್ನು ನೇಮಕ ಮಾಡಲಾಗುವುದು. ಉಳಿದಂತೆ ಪ್ರತಿ 15 ದಿನಕ್ಕೊಮ್ಮೆ ಹಾವೇರಿಗೆ ಭೇಟಿ ನೀಡಿ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಲು ಕರ್ನಾಟಕ ಆರೋಗ್ಯ ಸೇವೆಗಳ ಇಲಾಖಾ ಮುಖ್ಯ ಇಂಜಿನಿಯರ್‌ ಕೆ. ಮಂಜಪ್ಪ ಅವರ ನೇತೃತ್ವದ ತಾಂತ್ರಿಕ ತಂಡ ಹಾಗೂ ಪ್ರತಿದಿನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳ ದೈನಂದಿನ ಪರಿಶೀಲನೆಯನ್ನು ಸ್ಥಳೀಯ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್‌ ಕೆ.ಬಿ. ಸುರೇಶ ನೇತೃತ್ವದ ತಾಂತ್ರಿಕ ತಂಡ ಪರಿಶೀಲನೆ ನಡೆಸಲು ಸೂಚನೆ ನೀಡಿದರು.

ಕುಡಿಯುವ ನೀರಿನ ಕ್ರಿಯಾ ಯೋಜನೆ ಪ್ರಸ್ತಾವನೆ ಸಲ್ಲಿಸಿ:  ಪ್ರಮುಖವಾಗಿ ವೈದ್ಯಕೀಯ ಕಾಲೇಜು, ಇಂಜಿನಿಯರ್‌ ಕಾಲೇಜು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಪೂರೈಕೆಯಾಗುವಂತೆ ಪ್ರತ್ಯೇಕವಾಗಿ ರೂಪಿಸಲಾದ 40 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕ್ರಿಯಾ ಯೋಜನೆಯನ್ನು ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.

ಮುಂದಿನ ಎರಡು ತಿಂಗಳೊಳಗಾಗಿ ವೈದ್ಯಕೀಯ ಕಾಲೇಜಿನ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ವೈದ್ಯಕೀಯ ಕಾಲೇಜಿಗೆ ಅಗತ್ಯವಾದ ಬಲಬದಿಯ ಮೂರು ಎಕರೆ ಹಾಗೂ ಎಡಬದಿಯ ಎರಡು ಎಕರೆ ಜಮೀನ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸರ್ಕಾರಕ್ಕೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಸಿಎಂ ಶೀಘ್ರ ಉನ್ನತ ಮಟ್ಟದ ಸಭೆ:

ಹಾವೇರಿ: 86ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಕುರಿತು ಸಿಎಂ ಅವರು ಶೀಘ್ರದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ನಿರ್ದಿಷ್ಟ ದಿನಾಂಕ ನಿಗದಿ ಮಾಡಲಿದ್ದಾರೆ ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮೇಳನ ವ್ಯವಸ್ಥಿತವಾಗಿ ನಡೆಯಬೇಕು. ಸಮ್ಮೇಳನಕ್ಕೆ ಈ ಹಿಂದೆ ಯಾವತ್ತೂ ನೀಡದಷ್ಟು ಅನುದಾನವನ್ನು ಸಿಎಂ ನೀಡಿದ್ದಾರೆ. ಬಜೆಟ್‌ನಲ್ಲಿ 20 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇಲ್ಲಿರುವ ಕೊರತೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದಕ್ಕಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಸಮ್ಮೇಳನವನ್ನು ಅದ್ಧೂರಿಯಾಗಿ, ಅಚ್ಚುಕಟ್ಟಾಗಿ ಮಾಡುತ್ತೇವೆ. ಅದಕ್ಕಾಗಿ ಸಿಎಂ ಬೊಮ್ಮಾಯಿ ಅವರು ಶೀಘ್ರ ಸಭೆ ನಡೆಸಲಿದ್ದಾರೆ. ಸಭೆಯಲ್ಲೇ ನಿರ್ದಿಷ್ಟ ದಿನಾಂಕ ನಿಗದಿ ಮಾಡುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next