ನಂಜನಗೂಡು: ಕಳೆದ 15 ವರ್ಷಗಳಿಂದಲೂ ನೆನಗುದಿಗೆ ಬಿದ್ದಿರುವ ನಗರದ ನಾಗಮ್ಮ ಶಾಲೆಯ ಆವರಣದಲ್ಲಿ ಗಾಂಧಿ ಭವನ ಕಟ್ಟಡವನ್ನು ಪೂರ್ಣಗೊಳಿಸಿ ಮುಂದಿನ ಸ್ವಾತತ್ರೊತ್ಸವದ ವೇಳೆಗೆ ಲೋಕಾರ್ಪಣೆಗೆ ಸಿದ್ಧಗೊಳಿಸಬೇಕು ಎಂದು ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.
ಇಲ್ಲಿನ ಸಾರ್ವಜನಿಕ ವಾಚನಾಲಯದ ಮೇಲ್ಛಾವಣಿ ಕುಸಿದ ಬಿದ್ದ ಹಿನ್ನೆಲೆಯಲ್ಲಿ ಆಗಮಿಸಿದ್ದ ವೇಳೆ, ಗಾಂಧಿ ಭವನದ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಗಾಂಧಿ ಭವನ ಕಾಮಗಾರಿ ಪೂರ್ಣಗೊಳಿಸಿ ಅಲ್ಲಿಗೆ ವಾಚನಾಲಯ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. 15 ವರ್ಷಗಳಾದರೂ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಶೀಘ್ರ ಪೂರ್ಣಗೊಳಿಸಿ: ಪ್ರಸ್ತುತ ಕಟ್ಟಡ ನಿರ್ಮಾಣ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿರುವ ಮೈಸೂರು ನಗರಾಭಿವೃದ್ಧಿ ತಾಂತ್ರಿಕ ಅಧಿಕಾರಿಗಳಾದ ಪ್ರಭಾಕರ್ ಹಾಗೂ ಭಾಸ್ಕರ್ ಜತೆ ಮಾತನಾಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಭವನದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಮೂಡಾದಲ್ಲಿ ಹಣದ ಕೊರತೆ ಕಂಡುಬಂದಲ್ಲಿ ಸಂಸದರ ನಿಧಿಯಿಂದ ನೀಡುವುದಾಗಿ ತಿಳಿಸಿದರು.
ಅನುದಾನಕ್ಕೆ ಬೇಡಿಕೆ: ಗ್ರಂಥಾಲಯದ ಜಿಲ್ಲಾ ಉಪ ನಿರ್ದೇಶಕ ಮುಂಜುನಾಥ, ಗಾಂಧಿ ಭವನ ಮತ್ತು ವಾಚನಾಲಯದ ಪೀಠೊಪಕರಣಗಳಿಗೆ ತಲಾ 50 ಲಕ್ಷ ರೂ. ಅನುದಾನ ಬೇಕೆಂಬ ಬೇಡಿಕೆ ಸಂಸದರ ಮುಂದಿಟ್ಟರು. ಸದ್ಯಕ್ಕೆ 10 ಲಕ್ಷ ರೂ. ನಾನೇ ಭರಿಸುತ್ತೇನೆ. ಉಳಿದದ್ದನ್ನು ಜಿಲ್ಲಾಧಿಕಾರಿಗಳ ಮುಖಾಂತರ ಅನುದಾನಕ್ಕೆ ಪ್ರಯತ್ನಿಸುವಂತೆ ಸಲಹೆ ನೀಡಿದರು.
ಅಧಯಕ್ಷ ಗಾದಿ ರೇಸಿನಲ್ಲಿಲ್ಲ: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರೇಸಿನಲ್ಲಿದ್ದೀರಂತೆ ಎಂಬ ಪತ್ರಕರ್ತರ ಪ್ರಶ್ನೆಗೆ ರಾಜ್ಯದಲ್ಲಿ ಈಗಾಗಳೇ ಉಪಮುಖ್ಯಮಂತ್ರಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಮ್ಮ ಸಮುದಾಯಕ್ಕೆ ಸಿಕ್ಕಿದೆ.
ಆದಿಜಾಂಬವರಿಗೆ ಹಾಗೂ ಕುರುಬ ಸಮುದಾಯಕ್ಕೆ ಈಗ ಇನ್ನಷ್ಟು ಅಧಿಕಾರ ನೀಡಬೇಕಾದ ಅಗತ್ಯವಿದೆ. ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೆ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ತಮ್ಮ ಮೇಲಿದ್ದು ಅದನ್ನು ಪೂರೈಸಬೇಕಿದೆ ಎಂದು ಹೇಳಿದರು.
3 ದಿನದಲ್ಲಿ ಕಾಮಗಾರಿ ಆರಂಭ: ಕಳೆದ ಒಂದು ವರ್ಷದ ಹಿಂದೆಯೇ ಆಧುನಿಕರಣಗೊಳ್ಳಬೇಕಾದ ನಗರದ ರಾಷ್ಟ್ರಪತಿ ರಸ್ತೆಯ ಕೊಳವೆಗಳನ್ನು ಬದಲಾಯಿಸಲು 90 ಲಕ್ಷ ರೂ. ಮಂಜೂರಾಗಿದೆ. ಇನ್ನು ಮೂರು ದಿನಗಳಲ್ಲಿ ಆ ರಸ್ತೆ ಕಾಮಗಾರಿ ಪುನರಾರಂಭಗೊಳ್ಳಲಿದೆ ಎಂದು ತಿಳಿಸಿದರು.