ಹಾಸನ: ಜಿಲ್ಲೆಗೆ ಹೊಸ ಉಸ್ತುವಾರಿ ಸಚಿವ ರಾಗಿ ಗೋಪಾಲಯ್ಯ ಬಂದಿದ್ದಾರೆ. ಅವರು ಜಿಲ್ಲೆಗೆ ಹೊಸದಾಗಿ ಏನನ್ನೂ ಮಾಡೋದು ಬೇಡ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಹಾಸನ ಜಿಲ್ಲೆಗೆ ಮಂಜೂರಾಗಿ ರುವ ಯೋಜನೆಗಳನ್ನು ಅನುಷ್ಠಾನ ಮಾಡಿ ದರೆ ಸಾಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್. ಡಿ.ರೇವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಗೆ ಏನೇನು ಆಗಬೇಕೆಂಬ ಪಟ್ಟಿ ಯನ್ನು ಉಸ್ತುವಾರಿ ಸಚಿವರಿಗೆ ಕೊಡುತ್ತೇವೆ. ನೀರಾವರಿ, ಲೋಕೋಪಯೋಗಿ, ನಗರ ನೀರು ಸರಬರಾಜು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಂಜೂರು ಮಾಡಿದ್ದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು. ಕಳೆದ 10 ತಿಂಗಳಿನಿಂದ ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಆಗಿಲ್ಲ ಎಂದು ದೂರಿದರು.
ನಾನು ಉಸ್ತುವಾರಿ ಸಚಿವನಾಗಿದ್ದಾಗ ರಸ್ತೆ, ಎಂಜಿನಿಯರಿಂಗ್ ಕಾಲೇಜು ಅಭಿವೃದ್ಧಿ ಸೇರಿ ದಂತೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೆ. ಹಾಸನಕ್ಕೆ ಮಂಜೂರಾ ಗಿದ್ದ ಯಾವ ಅನುದಾನವನ್ನು ಹೊಳೆ ನರಸೀಪುರಕ್ಕೆ ತೆಗೆದುಕೊಂಡು ಹೋಗಿದ್ದೇ ನೆಂದು ಹೇಳಲಿ ಎಂದು ಶಾಸಕ ಪ್ರೀತಂ ಗೌಡರ ಆರೋಪಕ್ಕೆ ತಿರುಗೇಟು ನೀಡಿದರು.
ಹಾಸನದ ಡೇರಿ ಸರ್ಕಲ್‌ನಿಂದ ಸಾಲಗಾಮೆ ರಸ್ತೆವರೆಗೆ ಹಾಸನದ ವರ್ತುಲ ರಸ್ತೆ ನಿರ್ಮಾಣಕ್ಕೆ ಸ್ವಯಂ ಪ್ರೇರಿತವಾಗಿ ಭೂಮಿ ಬಿಟ್ಟುಕೊಟ್ಟಿದ್ದ ರೈತರಿಗೆ ಸರ್ಕಾರ ಕೂಡಲೇ ಪರಿಹಾರ ನೀಡಲಿ ಎಂದು ರೇವಣ್ಣ ಅವರು ಒತ್ತಾಯಿಸಿದರು. ಜಿಪಂ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್, ಪಕ್ಷದ ಮುಖಂಡ ಅಗಿಲೆ ಯೋಗೀಶ್ ಅವರೂ ಸುದ್ದಿಗೋಷ್ಠಿಯಲ್ಲಿದ್ದರು.
ರೈತರಿಗೆ ಕೇವಲ 100 ರೂ. ಸಬ್ಸಿಡಿ!: ಹಾಸನ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದ್ದರೂ ಕೃಷಿಗೆ ಪೂರಕವಾದ ಸಹಾಯ ಧನ ಹಾಗೂ ಪರಿಹಾರವನ್ನು ಸರ್ಕಾರ ನೀಡುತ್ತಿಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಮೆಕ್ಕೆ ಜೋಳದ ಬೆಳೆಗಾರರಿಗೆ ಸರ್ಕಾರ ಭಿಕ್ಷೆ ನೀಡಿದಂತೆ ಕೇವಲ 100 ರೂ. ಸಹಾಯಧನ ನೀಡುತ್ತಿದ್ದು, ಇದು ರೈತರಿಗೆ ಅಪಮಾನ ಮಾಡಿದಂತಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ 97 ಸಾವಿರ ಹೆಕ್ಟೇರ್‌ನಲ್ಲಿ ಒಂದು ಲಕ್ಷ ರೈತ ಕುಟುಂಬಗಳು ಮೆಕ್ಕೆ ಜೋಳ ಬೆಳೆದಿವೆ.
ಇವರಿಗೆ 5 ಸಾವಿರ ರೂ. ಪರಿಹಾರದಂತೆ ಜಿಲ್ಲೆಗೆ 50 ಕೋಟಿ ರೂ. ಪರಿಹಾರ ಬಿಡುಗಡೆಯಾಗಬೇಕು. ತೆಂಗಿನ ಕಾಯಿ, ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕು. ಲಾಕ್‌ಡೌನ್‌ನಿಂದ ನಷ್ಟಕ್ಕೊಳಗಾದ ರೈತರು, ಬೀದಿ ಬದಿ ವ್ಯಾಪಾರಿಗಳು, ಅಗಸರು, ಸವಿತಾ ಸಮಾಜದವರು, ಅಸಂಘಟಿತ ಕಾರ್ಮಿಕರಿಗೆ ತಕ್ಷಣ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಯಾನಿಟೈಸರ್ ಸ್ಟಾಂಡ್ ಕಿತ್ತೆಸೆಯಿರಿ: ಹಾಸನದ ಸರ್ಕಾರಿ ಕಚೇರಿಗಳ ಪ್ರವೇಶ ದ್ವಾರದಲ್ಲಿ ಶಾಸಕ ಪ್ರೀತಂ ಜೆ.ಗೌಡ ಅವರು ದೊಡ್ಡ ಭಾವಚಿತ್ರದೊಂದಿಗೆ ಸಣ್ಣ ಬಾಟಲಿಯಲ್ಲಿ ಸ್ಯಾನಿಟೈಸರ್ ಇಟ್ಟು ಪ್ರಚಾರ ಪಡೆಯುತ್ತಿರುವುದನ್ನು ತಕ್ಷಣ ಕಿತ್ತೆಸೆಯಲು ಜಿಲ್ಲಾಧಿಕಾರಿ, ಜಿಪಂ ಸಿಇಒ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇನ್ನೆರೆಡು ದಿನಗಳಲ್ಲಿ ಜೆಡಿಎಸ್ ಕಾರ್ಯಕರ್ತರೇ ಕಿತ್ತೆಸೆಯಲಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಎಚ್ಚರಿಸಿದರು. ಶಾಸಕರು, ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯ ನಿರ್ಮಾಣಗಳಿಗೆ ಶಾಸಕರು, ಸಂಸದರ ಹೆಸರು ಮತ್ತು ಭಾವಚಿತ್ರಗಳನ್ನು ಹಾಕಕೂಡದು ಎಂದು ಒತ್ತಾಯಿಸಿದರು.