Advertisement

ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ

03:31 PM Apr 17, 2022 | Team Udayavani |

ಚಿತ್ರದುರ್ಗ: ನೂತನ ರೈಲು ಮಾರ್ಗದ ಭೂ ಸ್ವಾಧೀನಕ್ಕೆ ವಿವಿಧ ಇಲಾಖೆ ಅಧಿಕಾರಿಗಳ ತಂಡ ರಚಿಸಿ, ಜಂಟಿ ಸರ್ವೇ ನಡೆಸಿ ಮೊದಲ ಹಂತದ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಅಪರ ಕಾರ್ಯದರ್ಶಿ ಅನಿಲ್‌ಕುಮಾರ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ದಾವಣಗೆರೆ-ಚಿತ್ರದುರ್ಗ- ತುಮಕೂರು ನೂತನ ರೈಲ್ವೆ ಮಾರ್ಗದ ಭೂಸ್ವಾ ಧೀನ ಸ್ಥಿತಿಗತಿ ಕುರಿತು ಸಭೆಯಲ್ಲಿ ಮಾತನಾಡಿದರು. ಕಂದಾಯ, ಭೂಮಾಪನ, ರೈಲ್ವೆ, ಲೋಕೋಪಯೋಗಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ರಚಿಸಿ, ಮೇ ತಿಂಗಳ ಮಧ್ಯದ ವೇಳೆಗೆ ಮೊದಲ ಹಂತದ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಮೇ ಅಂತ್ಯದ ವೇಳೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ. ತ್ವರಿತವಾಗಿ ಭೂ ಸ್ವಾಧೀನ ಪ್ರಕ್ರಿಯೆ ಆಗಬೇಕು. ಅಧಿಸೂಚನೆ ಹೊರಡಿಸಿದ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಂಡು ಸಂತ್ರಸ್ಥರಿಗೆ ಪರಿಹಾರ ವಿತರಿಸಬೇಕು. ಭೂಸ್ವಾಧೀನಕ್ಕೆ ಅಗತ್ಯವಿರುವ 200 ಕೋಟಿ ರೂ. ಪರಿಹಾರ ಧನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಇದಾದ ನಂತರ ಹಿರಿಯೂರು ತಾಲೂಕಿನಲ್ಲಿ 461.6 ಎಕರೆ ಜಮೀನಿನ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಒಂದು ವಾರದಲ್ಲಿ ಭೂಮಿ ವಶಕ್ಕೆ ಪಡೆದು ಪರಭಾರೆ ಮಾಡಲಾಗುವುದು. ಚಿತ್ರದುರ್ಗ ತಾಲೂಕಿನಲ್ಲಿ 243.29 ಎಕರೆ ಜಮೀನನ್ನು ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ರೈಲ್ವೆ ಇಲಾಖೆಯಿಂದ ಹೆಚ್ಚುವರಿ ಭೂಮಿಯನ್ನು ಕೇಳಿದ್ದರಿಂದ, ಎರಡನೇ ಹಂತದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಜೂನ್‌ ಅಂತ್ಯಕ್ಕೆ ಎರಡನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಿರಿಯೂರು ತಾಲೂಕಿಗೆ 77 ಕೋಟಿ ರೂಪಾಯಿ ಪರಿಹಾರ ಧನ ಬಿಡುಗಡೆಯಾಗಿದ್ದು, ಸುಮಾರು 49 ಕೋಟಿ ಪರಿಹಾರ ವಿತರಿಸಲಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ 183 ಎಕರೆ ಭೂಮಿ ಸ್ವಾಧೀನಕ್ಕೆ ಪರಿಹಾರಧನ ನಿಗದಿಪಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಶ್ರೀಧರ್‌, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎನ್‌. ಸತೀಶ್‌ ಬಾಬು, ಭೂದಾಖಲೆ ಇಲಾಖೆ ಉಪನಿರ್ದೇಶಕ ರಾಮಾಂಜನೇಯ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next