Advertisement

ಬಾಕಿಯಿರುವ ಕೃಷಿ ಗಣತಿ ಪೂರ್ಣಗೊಳಿಸಿ

02:29 PM Nov 29, 2022 | Team Udayavani |

ರಾಮನಗರ: ಪ್ರಕೃತಿಯಲ್ಲಿ ಉಂಟಾಗುವ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾದಾಗ, ವಿಮೆ ಪರಿಹಾರವನ್ನು ನೀಡಲು ಹಾಗೂ ಒಟ್ಟಾರೆ ಕೃಷಿ ಉತ್ಪಾದನೆಯನ್ನು ಅಂದಾಜಿಸಲು ಕೈಗೊಳ್ಳುವ ಪ್ರಯೋಗಗಳೆ ಬೆಳೆ ಕಟಾವು ಪ್ರಯೋಗಗಳು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬೆಳೆ ವಿಮಾ ಯೋಜನೆಯ ಜಿಲ್ಲಾ ಮಟ್ಟದ ಸಮಸ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಮುಖ ಆಹಾರ ಮತ್ತು ಆಹಾರೇತರ ಬೆಳೆಗಳ ಪ್ರತಿ ಹೆಕ್ಟೆರ್‌ನ ಸರಾಸರಿ ಇಳುವರಿಯನ್ನು ಹಾಗೂ ಉತ್ಪಾದನೆಯನ್ನು ಅಂದಾಜಿಸುವುದು. ರೂಢಿಯಲ್ಲಿರುವ ಕೃಷಿ ಪದ್ಧತಿ, ಕೀಟ ಮತ್ತು ರೋಗಬಾಧೆಗಳ ಬಗ್ಗೆ ಉಪಯುಕ್ತ ಪೂರಕ ಮಾಹಿತಿ ಸಂಗ್ರಹಣೆ ಮಾಡುವುದು. ಬೆಳೆ ನಷ್ಟವನ್ನು ಅಂದಾಜಿಸಿ, ಬೆಳೆ ವಿಮೆಯನ್ನು ಇತ್ಯರ್ಥಪಡಿಸಲು, ಮೇವಿನ ಪ್ರಮಾಣ ಅಂದಾಜಿಸಲು, ಭೂ ಕಂದಾಯ ಮನ್ನಾ ಮಾಡಲು ಹಾಗೂ ಕೃಷಿ ಪ್ರಶಸ್ತಿ ನೀಡುವುದು ಬೆಳೆ ವಿಮಾ ಯೋಜನೆಯ ಉದ್ದೇಶವಾಗಿದೆ ಎಂದರು.

ಅಧಿಕಾರಿ, ಸಿಬ್ಬಂದಿಗೆ ತರಬೇತಿ: ಈ ಯೋಜನೆಯಲ್ಲಿ ಪ್ರತಿ ವರ್ಷ ಋತುವಾರು ಬೆಳೆ ವಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ಹೋಬಳಿವಾರು ಬೆಳೆ ಕಟಾವು ಪ್ರಯೋಗಗಳನ್ನು ಯೋಜಿಸುವುದು. ಹೋಬಳಿ ಮಟ್ಟದಲ್ಲಿ 125 ಹೆಕ್ಟೆರ್‌ ಹಾಗೂ ಗ್ರಾಪಂ ಮಟ್ಟದಲ್ಲಿ 50 ಹೆಕ್ಟೆರ್‌ ವಿಸ್ತೀರ್ಣವಿರುವ ಬೆಳೆಗಳಿಗೆ ಕೃಷಿ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗುವುದು. ಮೂಲ ಕಾರ್ಯಕರ್ತರು ಹಾಗೂ ಮೇಲ್ವಿಚಾರಣಾ ಅಧಿಕಾರಿ, ಸಿಬ್ಬಂದಿಗೆ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುವುದು. ಬೆಳೆವಾರು ಇಳುವರಿಯ ಅಂದಾಜು ಮತ್ತು ವಿವಿಧ ಮಾಹಿತಿಯ ವಿಶ್ಲೇಷಣೆ ಸೇರಿದಂತೆ ಇತರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಿ: ನಮೂನೆ-1 ಪ್ರಾರಂಭಿಕ ಹಂತವಾಗಿದ್ದು, ಕಟಾವು ಪ್ರಯೋಗಗಳನ್ನು ಕೈಗೊಳ್ಳಲಾಗುವ ಗ್ರಾಮ, ರೈತನ ಹೆಸರು, ಸರ್ವೆ ನಂಬರ್‌ ಹಾಗೂ ಬೆಳೆ ಜೊತೆಗೆ ರೈತನ ಛಾಯಾಚಿತ್ರವನ್ನು ಸೆರೆಯಿಡಿದು ಅಪ್ಲೋಡ್‌ ಮಾಡಲಾಗುವುದು. ನಮೂನೆ-2ರಲ್ಲಿ ಬೆಳೆಯು ಕಟಾವಿಗೆ ಬಂದಾಗ ಅನಿಯತ ಸಂಖ್ಯೆಗಳ ಆಧಾರದ ಮೇಲೆ ಗುರುತಿಸಿ, ಕಟಾವು ಮಾಡಿ ಬಂದಂತಹ ಇಳುವರಿ ಮತ್ತು ಉಪ ಉತ್ಪನ್ನವನ್ನು ಮೊಬೈಲ್‌ ಆ್ಯಪ್‌ ನಲ್ಲಿ ದಾಖಲಿಸುವುದು, ಬೆಳೆ ಕಟಾವು ಪ್ರಯೋಗಗಳ ಹಂತಗಳಾಗಿದೆ ಎಂದರು.

ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ಪಂಚಾ ಯತ್‌ ರಾಜ್‌ ಇಲಾಖೆಗಳಲ್ಲಿ 2022-23ನೇ ಸಾಲಿನ ಮುಂಗಾರು ಋತುವಿನ ನಮೂನೆ 1ರಲ್ಲಿ ತಾಲೂಕುಗಳು ಸೇರಿದಂತೆ ಒಟ್ಟು ನಿಯೋಜಿಸಿದ ಪ್ರಯೋಗಗಳು 2022, ಮುಕ್ತಾಯಗೊಂಡ ಪ್ರಯೋಗಗಳು 1403, ಬಾಕಿ ಪ್ರಯೋಗಗಳು 619 ಆಗಿದೆ. ನಮೂನೆ 2ರಲ್ಲಿ ಮುಕ್ತಾಯಗೊಂಡ ಪ್ರಯೋಗಗಳು 301 ಮತ್ತು ಬಾಕಿ ಪ್ರಯೋಗಳು 1102 ಆಗಿದ್ದು, ಬಾಕಿಯಿರುವ ಪ್ರಯೋಗಗಳನ್ನು ಮುಕ್ತಾಯಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಪ್ರಯೋಗ ಗಳನ್ನು ನಮೂನೆ-1ರಲ್ಲಿ ಮುಕ್ತಾಯಗೊಂಡರೆ ಮಾತ್ರ ನಮೂನೆ-2ರಲ್ಲಿ ಪ್ರಾರಂಭಿಸಲಾಗುವುದು. ಮುಕ್ತಾಯ ಗೊಳ್ಳದಿದ್ದರೆ ನಮೂನೆ-2ನ್ನು ತೆರೆಯಲಾಗುವುದಿಲ್ಲ ಎಂದರು.

Advertisement

ಅಧ್ಯಯನಗಳಿಗೆ ಪೂರಕ: ವಾರ್ಷಿಕವಾಗಿ ಮುಂಗಾರು, ಬೇಸಿಗೆ ಋತುಗಳು ಮುಕ್ತಾಯವಾದ ತರುವಾಯ ಬೆಳೆ ವಿಸ್ತೀರ್ಣ ಮಾಹಿತಿಯನ್ನು ಗ್ರಾಪಂ, ಹೋಬಳಿವಾರು, ತಾಲೂಕುವಾರು ಹಾಗೂ ಜಿಲ್ಲಾವಾರು ತಯಾರಿಸಲಾಗುವುದು. ವಿವಿಧ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆಯ ವಿವರಗಳನ್ನು ಒದಗಿಸುವುದು. ಒಟ್ಟು ರಾಜ್ಯ ಆಂತರಿಕ ಉತ್ಪನ್ನ, ರಾಜ್ಯಾದಾಯ, ತಲಾದಾಯ ಮತ್ತು ಬೆಳವಣಿಗೆಯ ಪ್ರಮಾಣವನ್ನು ಕಂಡು ಹಿಡಿಯಲು ಕೃಷಿ ಬೆಳೆಯಲ್ಲಿನ ಏರು-ಪೇರು ತಿಳಿಯುವುದು ಹಾಗೂ ಸರ್ಕಾರದ ನೀತಿ ನಿರೂಪಣೆ, ಯೋಜನೆ ತಯಾರಿ, ಶೈಕ್ಷಣಿಕ ಅಧ್ಯಯನಗಳಿಗೆ ಪೂರಕವಾಗಿದೆ ಎಂದು ತಿಳಿಸಿದರು.

ಪ್ರಗತಿ ಮೌಲ್ಯಮಾಪನಕ್ಕಾಗಿ ಗಣತಿ: ಹೊಸ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಮತ್ತು ಅವುಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಅಗತ್ಯವಿರುವ ತಾಲೂಕು, ಗ್ರಾಮ ಮಟ್ಟದ ದತ್ತಾಂಶವನ್ನು ಒದಗಿಸುವುದು. ಸಾಗುವಳಿ ಹಿಡುವಳಿಗಳ ಸಂಖ್ಯೆ ಮತ್ತು ವಿಸ್ತೀರ್ಣ, ಭೂ ಬಳಕೆ, ಬೆಳೆ ವಿಧಾನ ಇತ್ಯಾದಿಗಳ ಆಧಾರದ ಮೇಲೆ ಕೃಷಿ ಕ್ಷೇತ್ರದ ರಚನೆ ಮತ್ತು ಗುಣಲಕ್ಷಣಗಳನ್ನು ವಿವರಿಸಲು ಹಾಗೂ ಭವಿಷ್ಯದ ಕೃಷಿ ಸಮೀಕ್ಷೆಗಳನ್ನು ಕೈಗೊಳ್ಳಲು ಸಾಗುವಳಿ ಹಿಡುವಳಿಗಳ ಅಂಕಿ-ಅಂಶಗಳ ಚೌಕಟ್ಟನ್ನು ಒದಗಿಸುವುದು ಕೃಷಿ ಗಣತಿಯ ಉದ್ದೇಶವಾಗಿದೆ ಎಂದರು.

2021-22ರ ಕೃಷಿ ಗಣತಿಯ ಪ್ರಮುಖ ಲಕ್ಷಣಗಳಲ್ಲಿ ದತ್ತಾಂಶ ಸಂಗ್ರಹಣೆ ಸಮಯದಲ್ಲಿ ವಿವಿಧ ಮಾಪಕಗಳಾದ ಹೆಕ್ಟೆರ್‌, ಎಕರೆ-ಗುಂಟಾ, ವಿವಿಧ ಪ್ರದೇಶದ ವಿಸ್ತೀರ್ಣ ಘಟಕಗಳನ್ನು ಪರಿಗಣಿಸುವುದು. ಎಲ್‌ಜಿಡಿ ಮಾಸ್ಟರ್‌ಗಳೊಂದಿಗೆ ಕೃಷಿ ಗಣತಿ ಜಿಲ್ಲೆ, ತಾಲೂಕು ಮತ್ತು ಹಳ್ಳಿಗಳ ನಡುವೆ ಮ್ಯಾಪಿಂಗ್‌ ಮಾಡುವುದು ಎಂದರು. ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಂದರ್‌, ಜಿಪಂ ಯೋಜನಾ ನಿರ್ದೇಶಕಿ ಅನಿತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಡುವಳಿದಾರರ ಗಾತ್ರದ ವರ್ಗವಾರು ದತ್ತಾಂಶವನ್ನು ಕಲೆ ಹಾಕಲು ಇರುವ ಏಕೈಕ ಮಾರ್ಗ ಕೃಷಿ ಗಣತಿ. ದತ್ತಾಂಶ ತಾಲೂಕು, ಗ್ರಾಮ ಮಟ್ಟದವರೆಗೆ ಲಭ್ಯವಿರುತ್ತದೆ. ದತ್ತಾಂಶವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಬಳಕೆದಾರರು ಉಪಯೋಗಿಸುತ್ತಾರೆ. – ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next