Advertisement
ಶಾಲೆ ಪ್ರಾರಂಭವಾದಾಗ ಇಲ್ಲಿ ಇದ್ದದ್ದು 33 ಮಕ್ಕಳು. ಪ್ರಸ್ತುತ 51 ಮಕ್ಕಳಿದ್ದಾರೆ. ಮೂಲಭೂತ ಶಿಕ್ಷಣದ ಜತೆಗೆ ಕ್ರೀಡೆ, ಸ್ಪೀಚ್ ಥೆರಪಿ, ಫಿಸಿಯೋಥೆರಪಿ, ಯೋಗ, ಕಂಪ್ಯೂಟರ್, ವೃತ್ತಿ ತರಬೇತಿ ಹೀಗೆ ಭಿನ್ನ ಸಾಮರ್ಥ್ಯದ ಮಕ್ಕಳ ಪರಿಪೂರ್ಣ ವಿಕಾಸಕ್ಕೆ ಅಗತ್ಯವಿರುವ ಎಲ್ಲ ಬಗೆಯ ಶಿಕ್ಷಣವನ್ನೂ ಇಲ್ಲಿ ನೀಡಲಾಗುತ್ತಿದೆ. 6 ಮಂದಿ ಶಿಕ್ಷಕರು, ಇಬ್ಬರು ಶಿಕ್ಷಕೇತರರು ಕಾರ್ಯನಿರ್ವಹಿಸುತ್ತಿದ್ದಾರೆ.
ಅರಮನೆ ಬಾಗಿಲು ರಸ್ತೆಯ ಬದಿಯಲ್ಲಿ ಸುಮಾರು 3,500 ಚದರಡಿಗೂ ಅಧಿಕ ವಿಸ್ತಾರವಾದ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಈ ಶಾಲೆಯಲ್ಲಿ 15 ಕೊಠಡಿಗಳಿವೆ. ಪ್ರೈಮರಿ, ಸೆಕಂಡರಿ, ಪೂರ್ವ ವೃತ್ತಿ ತರಬೇತಿ, ವೃತ್ತಿ ತರಬೇತಿ (ಎ, ಬಿ) ವಿಭಾಗಗಳಿವೆ. ಪ್ರೈಮರಿ ವಿಭಾಗದಲ್ಲಿ ದೈನಂದಿನ ಅಭ್ಯಾಸಗಳೊಂದಿಗೆ ಇತರ ಶಿಕ್ಷಣ, ಸೆಕಂಡರಿ ವಿಭಾಗದಲ್ಲಿ ಸಾಮಾನ್ಯ ನಡವಳಿಕೆ, ಏಕಾಗ್ರತೆ ಸಹಿತ ವಿವಿಧ ಶಿಕ್ಷಣ ಸೇರಿದಂತೆ, ಪೂರ್ವ ವೃತ್ತಿ ತರಬೇತಿಯಲ್ಲಿ ವಿವಿಧ ಕೌಶಲಾಭಿವೃದ್ಧಿ ಕಾರ್ಯಕಲಾಪಗಳು ಇವೆ. 18 ವರ್ಷ ಮೇಲ್ಪಟ್ಟವರಿಗೆ ಕಂಪ್ಯೂಟರ್ ಶಿಕ್ಷಣ, ವಿವಿಧ ಪೇಪರ್ ಕ್ರಾಫ್ಟ್ ತರಬೇತಿ ನೀಡಲಾಗುತ್ತಿದೆ. ಸ್ಪೀಚ್‌ಥೆರಪಿಗಾಗಿ ಮಂಗಳೂರಿನಿಂದ ತಜ್ಞರು ಬಂದು ಒಬ್ಬೊಬ್ಬ ವಿದ್ಯಾರ್ಥಿಗೂ ಮುಕ್ಕಾಲು ತಾಸು ಹೊತ್ತು ಚಿಕಿತ್ಸೆ ನೀಡುತ್ತಿದ್ದಾರೆ. ಹೊರಾಂಗಣದಲ್ಲಿ ಓಟ, ಕ್ರಿಕೆಟ್, ವಾಲಿಬಾಲ್, ಶಾಟ್‌ಪುಟ್, ಟೆನಿಸ್‌ಬಾಲ್/ ಸಾಫ್ಟ್ ಬಾಲ್, ತ್ರೋ ಮಾತ್ರವಲ್ಲ ಚೆಸ್, ಕೇರಂ, ಫಝಲ್ಸ್ ಮತ್ತು ಇತರ ಸಲಕರಣೆ ಸಹಿತ ಒಳಾಂಗಣ ಕ್ರೀಡೆಗಳಲ್ಲೂ ಮಕ್ಕಳನ್ನು ತೊಡಗಿಸಲಾಗುತ್ತಿದೆ.
Related Articles
2017- 18ರ ಸಾಲಿನಲ್ಲಿ ಜಿಲ್ಲಾ, ಅಂತರ್ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಈ ಶಾಲೆಯ 15 ಮಂದಿ 61 ಪದಕ ಗಳಿಸಿದ್ದಾರೆ. ಸ್ಪೆಶಲ್ ಒಲಿಂಪಿಕ್ಸ್ ಭಾರತ್ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ವಿಶೇಷ ಸಾಧನೆ ತೋರಿದ್ದಾರೆ. ಇಬ್ಬರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿ ಮಂಗಳೂರು ವಿ.ವಿ. ಮಟ್ಟದಲ್ಲಿ ನಡೆದ ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ 15 ಮಕ್ಕಳು ಪಾಲ್ಗೊಂಡು 9 ಚಿನ್ನ, 8 ಬೆಳ್ಳಿ, 8 ಕಂಚು ಹೀಗೆ 25 ಪದಕಗಳೊಂದಿಗೆ ಪಥ ಸಂಚಲನದಲ್ಲಿ ರನ್ನರ್ ಅಪ್ ಗೌರವ ಗಳಿಸಿದ್ದಾರೆ. 2018ರ ಖೇಲೋ ಇಂಡಿಯಾ ಸ್ಪೆಶಲ್ ಒಲಿಂಪಿಕ್ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 9 ಚಿನ್ನ, 8 ಬೆಳ್ಳಿ , 11 ಕಂಚು ಹೀಗೆ ಒಟ್ಟು 28 ಪದಕಗಳನ್ನು ಗೆದ್ದಿದ್ದಾರೆ. 2018ರ ಕರಾವಳಿ ಉತ್ಸವದಲ್ಲಿ ಬೋಚಿ ಸ್ಪರ್ಧೆಯಲ್ಲಿ ಬಾಲಕಿಯರ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಫೆ. 4ರಿಂದ 7ರವರೆಗೆ ಸ್ಪೆಶಲ್ ಒಲಂಪಿಕ್ ಭುವನೇಶ್ವರದಲ್ಲಿ ನಡೆದ ಮಹಿಳೆಯರ, ನ್ಯಾಷನಲ್ ಯೂನಿಫೀಲ್ಡ್ ಫುಟ್‌ಬಾಲ್ ಟೂರ್ನಮೆಂಟ್‌ನಲ್ಲಿ ಈ ಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯತಂಡವನ್ನು ಪ್ರತಿನಿಧಿಸಿ, ತೃತೀಯ ಬಹುಮಾನ ಗಳಿಸಿಕೊಟ್ಟಿದ್ದಾರೆ.
Advertisement
ಮಂಗಳೂರಿನ ;ಸಂದೇಶ’ ಏರ್ಪಡಿಸಿದ ರಾಜ್ಯಮಟ್ಟದ ಸಾಂಸ್ಕೃತಿಕ ಕಲೋತ್ಸವದಲ್ಲಿ ಛದ್ಮವೇಷದಲ್ಲಿ ಪ್ರಥಮ, ಜಾನಪದ ನೃತ್ಯದಲ್ಲಿ ದ್ವಿತೀಯ, ಜಿಲ್ಲೆ ಮತ್ತು ಅಂತರ್ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ , ಪಡೆದಿದ್ದಾರೆ. ಸುರತ್ಕಲ್ ಲಯನ್ಸ್ ಕ್ಲಬ್ ನಡೆಸಿದ “ಸ್ಫೂರ್ತಿ- 2017′ ವಿಶೇಷ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ. ವಿವಿಧ ಸಂಸ್ಥೆಗಳು ನಡೆಸುವ ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆಯ ಸಂದರ್ಭದಲ್ಲಿ ಈ ಶಾಲೆಯ ಮಕ್ಕಳೂ ಸಾಂಸ್ಕೃತಿಕ ಕಲಾಪಗಳಲ್ಲಿ ಮಿಂಚಿದ್ದಾರೆ. “ಪರಿಸರ ಮಾಲಿನ್ಯ’ಕುರಿತಾದ ಪ್ರಹಸನ ಬಹಳಷ್ಟು ಕಡೆ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಭಿನ್ನ ಸಾಮರ್ಥ್ಯದ ಮಕ್ಕಳ ನೋವನ್ನು ಸ್ವತಃ ಅನುಭವಿಸಿರುವ ಪ್ರಕಾಶ್ ಜೆ. ಶೆಟ್ಟಿಗಾರ್ ಅವರು ಸಮಾನ ಮನಸ್ಕ ಟ್ರಸ್ಟಿಗಳ ಮಾರ್ಗದರ್ಶನ, ಸಹಕಾರದೊಂದಿಗೆ ಸಂಘ ಸಂಸ್ಥೆಗಳು, ದಾನಿಗಳ ಸಹಾಯದಿಂದ ಸಂಪೂರ್ಣ ಉಚಿತವಾಗಿ ಶಾಲೆಯನ್ನು ನಡೆಸುತ್ತಿದ್ದಾರೆ. ತಿಂಗಳೊಂದರ ಸರಾಸರಿ 1 ಲಕ್ಷ ರೂ. ವೆಚ್ಚವಾಗುತ್ತಿದ್ದು, ಅದಕ್ಕಾಗಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ದಾನಿಗಳು ನೀಡುವ ಕೊಡುಗೆಗಳಿಗೆ 12(ಎ) ಮತ್ತು 80 ಜಿ ಅನ್ವಯ ತೆರಿಗೆ ವಿನಾಯಿತಿ ಸೌಲಭ್ಯವಿದೆ. ಆಸಕ್ತರು ವಸ್ತು ರೂಪದಲ್ಲಿ ಅಥವಾ ಆರ್ಥಿಕವಾಗಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಮೂಡುಬಿದಿರೆ ಶಾಖೆಯಲ್ಲಿರುವ ಉಳಿತಾಯ ಖಾತೆ ಸಂಖ್ಯೆ- 36556587667 (ಐಎಫ್‌ಎಸ್‌ಸಿ: ಎಸ್ ಬಿಐಎನ್ 0005623) ಮೂಲಕ ರಿಜ್ಯುವನೇಟ್ ಚೈಲ್ಡ್ ಫೌಂಡೇಶನ್ ಮೂಡುಬಿದಿರೆ ಈ ಖಾತೆಗೆ ಸಂದಾಯ ಮಾಡಬಹುದಾಗಿದೆ.
ಎರಡು ವಾಹನ, ಮನೆಯಿಂದಲೇ ಅಡುಗೆ ಮಕ್ಕಳಿಗಾಗಿ ಎರಡು ವಾಹನಗಳಿವೆ. ಒಂದರಲ್ಲಿ ಆಡಳಿತ ಟ್ರಸ್ಟಿ ಪ್ರಕಾಶ್ ಜೆ. ಶೆಟ್ಟಿಗಾರರೇ ಚಾಲಕ. ಬೆಳಗ್ಗೆ 7.30ರಿಂದ 9.45ರ ವರೆಗೆ, ಅಪರಾಹ್ನ 3.30ರಿಂದ 6.15ರ ತನಕ ಉಚಿತ ವಾಹನ ಸೇವೆ ನೀಡಲಾಗುತ್ತಿದೆ. ಪ್ರಕಾಶ್ ಶೆಟ್ಟಿಗಾರ್ ಅವರ ಪತ್ನಿ ಉಷಾಲತಾ ಅವರೇ ತಮ್ಮ ಮನೆಯಲ್ಲಿ ಮಕ್ಕಳಿಗಾಗಿ ಅಡುಗೆ ಸಿದ್ಧಪಡಿಸುತ್ತಾರೆ. ಹೀಗಾಗಿ ಅವರಿಗೆ ಮಕ್ಕಳು ಕೂಡ ಪ್ರೀತಿ, ಗೌರವ ತೋರಿಸುತ್ತಿದ್ದಾರೆ. ವಿಶೇಷ ವರದಿ