Advertisement

ನಗರಸಭೆಯಲ್ಲಿ ಕಾಂಗ್ರೆಸ್‌ ಆಡಳಿತ ಸಂಪೂರ್ಣ ವೈಫ‌ಲ್ಯ: ರಘುಪತಿ ಭಟ್‌

06:05 AM Aug 30, 2018 | Team Udayavani |

ಉಡುಪಿ: ನಗರಸಭೆಯ ಐದು ವರ್ಷಗಳ ಕಾಂಗ್ರೆಸ್‌ ಆಡಳಿತವು ಜನರ ಕುಂದು-ಕೊರತೆ  ಈಡೇರಿಸುವಲ್ಲಿ ಸಂಪೂರ್ಣ ವಿಫ‌ಲವಾಗಿದೆ ಎಂದು ಕುಂಜಿಬೆಟ್ಟಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಶಾಸಕ ಕೆ. ರಘುಪತಿ ಭಟ್‌ ಆರೋಪಿಸಿದರು.

Advertisement

ಬಿಜೆಪಿ ಆಡಳಿತದಲ್ಲಿದ್ದ ಗುತ್ತಿಗೆದಾರರನ್ನು ರದ್ದು ಮಾಡಿ ಭ್ರಷ್ಟಾಚಾರ ನಡೆಸುವ ದೃಷ್ಟಿಯಿಂದ ಶಿವಮೊಗ್ಗದ ಗುತ್ತಿಗೆದಾರರಿಗೆ ದಾರಿದೀಪ ನಿರ್ವಹಣೆಯ ಗುತ್ತಿಗೆ ನೀಡಿ ಉಡುಪಿಗೆ ಕಾಂಗ್ರೆಸ್‌ ಕತ್ತಲೆ ಭಾಗ್ಯ ನೀಡಿದೆ. 2013ರ ತನಕ ದಿನದ 24 ಗಂಟೆಯೂ ಕುಡಿಯುವ ನೀರಿಗೆ ತತ್ವಾರವಿರಲಿಲ್ಲ. ಆದರೆ ಕಾಂಗ್ರೆಸ್‌ ಆಡಳಿತದಲ್ಲಿ ಕೃತಕ ನೀರಿನ ಅಭಾವ ಸೃಷ್ಟಿಸಿ ಟ್ಯಾಂಕರ್‌ ದಂಧೆಯಿಂದಾಗಿ ದಿನದಲ್ಲಿ ಕನಿಷ್ಠ ಐದು ಗಂಟೆಯೂ ನೀರು ಕೊಡದೆ ಜನತೆಗೆ ವಂಚಿಸಲಾಗಿದೆ. ಅಲ್ಪಸಂಖ್ಯಾಕ ನಾಗರಿಕ ಬಂಧುವನ್ನು ಕರೆಸಿ ಕಾಂಗ್ರೆಸ್‌ ನಗರಸಭೆ ಸದಸ್ಯರು ಅವರ ಮೇಲೆ ಹಲ್ಲೆ ನಡೆಸಿರುವುದು ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿ  ಸೂಚಿಸುತ್ತದೆ ಎಂದವರು ದೂರಿದರು.

2016ರಲ್ಲಿ ಕಾಂಗ್ರೆಸ್‌ ತನ್ನ ಹಿಂಬಾಲಕರಿಂದ ಮುಂಗಡ ಕಾಮಗಾರಿ ನಡೆಸಿ ಮತ್ತೆ ಟೆಂಡರ್‌ ಕರೆದಿರುವುದು ಸಂಶಯಾಸ್ಪದವಾಗಿದೆ. ಈ ಬಗ್ಗೆ ಬಿಜೆಪಿ ಸ್ಥಳ ಪರಿಶೀಲಿಸಿದಾಗ ಕೆಲವು ಕಾಮಗಾರಿಗಳು ಮಾಡದೇ ಬಿಲ್ಲು ಪಾವತಿಸಿರುವುದು ಸಾಬೀತಾಗಿದೆ. ಕಡಿಮೆಯಿದ್ದ ಉದ್ಯಮ ಪರವಾನಿಗೆ ಶುಲ್ಕವನ್ನು ಕಾಂಗ್ರೆಸ್‌ ಆಡಳಿತ ಬಂದ ಕೂಡಲೇ ಅವೈಜ್ಞಾನಿಕ ರೀತಿಯಲ್ಲಿ ಮುನ್ಸಿಪಲ್‌ ಕಾಯ್ದೆಗೆ ವಿರುದ್ಧವಾಗಿ ಏಕಾಏಕಿ ಚ.ಅಡಿಯ ಆಧಾರದಲ್ಲಿ ಏರಿಸಿ ದೇಶದಲ್ಲಿಯೇ ಇಲ್ಲದ ಶುಲ್ಕ ವಿಧಿಸಿ ಜನರನ್ನು ಸುಲಿಗೆ ಮಾಡಿದೆ ಎಂದು ಶಾಸಕರು ಆರೋಪಿಸಿದರು. 

ಕುಂಜಿಬೆಟ್ಟು ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಗಿರೀಶ್‌ ಅಂಚನ್‌, ಕಡಿಯಾಳಿ ವಾರ್ಡಿನ ಅಭ್ಯರ್ಥಿ ಗೀತಾ ದೇವರಾಯ್‌ ಶೇಟ್‌, ಮಾಜಿ ನಗರಸಭೆ ಸದಸ್ಯ ಮೋಹನ್‌ ಉಪಾಧ್ಯ, ರಮೇಶ್‌ ಬೈಲಕೆರೆ, ಮಂಜುನಾಥ್‌ ಹೆಬ್ಟಾರ್‌, ಸತೀಶ್‌ ಭಾಗವತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next