Advertisement

ಶೈಕ್ಷಣಿಕ ಬ್ಲಾಕ್‌ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

05:59 PM Jun 16, 2022 | Team Udayavani |

ಚಿಕ್ಕಬಳ್ಳಾಪುರ: ತಾಲೂಕಿನ ಅರೂರು ಗ್ರಾಮದ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶೈಕ್ಷಣಿಕ ಬ್ಲಾಕ್‌, ವಿದ್ಯಾರ್ಥಿನಿಯರ ವಸತಿ ನಿಲಯ, ಬೋಧನಾ ಸಿಬ್ಬಂದಿಯ ಬ್ಲಾಕ್‌ ಗಳ ಕಟ್ಟಡಗಳ ಕಾಮಗಾರಿಯನ್ನು ಜುಲೈ ಮಾಹೆಯೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಆರ್‌.ಲತಾ ಅವರು ಸಂಬಂಧಪಟ್ಟ ಯೋಜನಾ ಅಭಿಯಂತರರಿಗೆ ಸೂಚಿಸಿದರು.

Advertisement

ಅವರು ಬುಧವಾರ ಅರೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಾಮಗಾರಿಯ ಪ್ರಗತಿಯನ್ನು ಮಾಹೆವಾರು ಪರಿಶೀಲನೆ ಮಾಡಿದರು. ಕಟ್ಟಡ ಕಾಮಗಾರಿ ನಡೆಯುತ್ತಿರುವ ಎಲ್ಲಾ ಬ್ಲಾಕ್‌ ಗಳಿಗೆ ಖುದ್ದು ಜಿಲ್ಲಾಧಿಕಾರಿಯವರೇ ಭೇಟಿ ನೀಡಿ ಅಭಿಯಂತರರ ಮಾಹಿತಿ ಹಾಗೂ ಕಟ್ಟದ ಭೌತಿಕ ಪ್ರಗತಿಯನ್ನು ಪರಿಶೀಲಿಸಿದರು.

ಈ ವೇಳೆ ನಿರ್ಮಾಣ ಹಂತದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಪುಸ್ತಕ ಸೇರಿದಂತೆ ಇತರೆ ವಸ್ತುಗಳನ್ನು ಇಟ್ಟುಕೊಳ್ಳಲು ನಿರ್ಮಾಣ ಮಾಡಿರುವ ಕಬೋರ್ಡ್‌ಗಳನ್ನು ವೀಕ್ಷಿಸಿ ಗುಣಮಟ್ಟವನ್ನು ಪರಿಶೀಲಿಸಿದರು.

ನಂತರ ಅಭಿಯಂತರರೊಂದಿಗೆ ಸಭೆ ನಡೆಸಿ ಮಾತನಾಡುತ್ತಾ, ಮುಂದಿನ ಆಗಸ್ಟ್‌ ತಿಂಗಳಿನಿಂದ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪಾಠ ಪ್ರವಚನ ಕೊಠಡಿಗಳು, ವಸತಿ ನಿಲಯ ಹಾಗೂ ಬೋಧನಾ ಸಿಬ್ಬಂದಿಗೆ ಒಂದು ಬ್ಲಾಕ್‌ ನ ಕಾಮಗಾರಿಯನ್ನು ಜುಲೈ
ಮಾಹೆಯೊಳಗೆ ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಿ ಅವರ ಶೈಕ್ಷಣಿಕ ಚಟುವಟಿಕೆ ಇಲ್ಲಿಯೇ ಆರಂಭಿಸುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಯೋಜನಾ ಅಭಿಯಂತರರಿಗೆ ತಿಳಿಸಿದರು.

ಶೇ 69.44 ರಷ್ಟು ಕಾಮಗಾರಿ ಪೂರ್ಣ: ಶೈಕ್ಷಣಿಕ ಬ್ಲಾಕ್‌ನ ಶೇ. 96 ರಚನಾತ್ಮಕ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯಾರ್ಥಿನಿಯರ ವಸತಿ ನಿಲಯ ಹಾಗೂ ಬೋಧನಾ ಸಿಬ್ಬಂದಿಯ ಬ್ಲಾಕ್‌ ನ ರಚನಾತ್ಮಕ ಕಾಮಗಾರಿಗಳು ಶೇ. 99 ಪೂರ್ಣಗೊಂಡಿದೆ. ವಿದ್ಯುತ್‌ ಕಾಮಗಾರಿ ನಡೆಯುತ್ತಿದ್ದು, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. ಪ್ಲಾಸ್ಟರಿಂಗ್‌, ವಿದ್ಯುತ್‌ ಕಾಮಗಾರಿ, ಪ್ಲಂಬಿಂಗ್‌ ಕಾರ್ಯ ಸೇರಿದಂತೆ ಒಟ್ಟಾರೆ ಈವರೆಗೆ ಶೇ 66.44ರಷ್ಟು ಕಾಮಗಾರಿ
ಪೂರ್ಣಗೊಂಡಿದ್ದು, ಡಿಸೆಂಬರ್‌ ಅಂತ್ಯದೊಳಗೆ ಉಳಿದ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

Advertisement

ಕಾಮಗಾರಿ ವಿಳಂಬವಾಗದಿರಲು ಇನ್ನಷ್ಟು ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಕಾಮಗಾರಿಗೆ ವೇಗ ನೀಡಬೇಕು ಜಿಲ್ಲಾಧಿಕಾರಿಗಳು ಖಡಕ್‌ ಸೂಚನೆ ನೀಡಿದರು. ಕಾರ್ಯಪಾಲಕ ಅಭಿಯಂತರರಾದ ಗೌರಿ ಶಂಕರ್‌, ಸಂತೋಷ್‌ ಕುಮಾರ್‌, ದೀಪಕ್‌, ಆನಂದ ಬಾಡಗಿ, ವ್ಯವಸ್ಥಾಪಕ ನಿರ್ದೇಶಕ ಚಂದ್ರೇಗೌಡ, ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಕುಮಾರ್‌, ಕಾರ್ಯನಿರ್ವಾಹಕ ಎಂಜಿನಿಯರ್‌
ಉಮೇಶ್‌, ಆರೋಗ್ಯ ಇಲಾಖೆಯ ನೋಡಲ್‌ ಅಧಿಕಾರಿ ಡಾ.ವಿಜಯಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next