ಚನ್ನಪಟ್ಟಣ: ಹೊಂಗನೂರು ಗ್ರಾಮದ ಸರ್ಕಾರಿ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಅಭಿವೃದ್ಧಿಪಡಿಸಿ, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಕಾಂಪೌಂಡ್ ನಡಿಯಲ್ಲಿ ಶಿಕ್ಷಣ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.
ತಾಲೂಕಿನ ಹೊಂಗನೂರು ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾ ಡಿದರು. ಹೊಂಗನೂರು ಸರ್ಕಾರಿ ಶಾಲೆ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯಿಂದ ಸಂಪೂರ್ಣ ನೆರವು ನೀಡುವುದಾಗಿ ಅವರು ತಿಳಿಸಿದರು.
ಮಾದರಿ ಶಾಲೆಯಾಗಿ ಅಭಿವೃದ್ಧಿ: ಹೊಂಗನೂರು ಗ್ರಾಮದಲ್ಲಿ ಒಂದನೇ ತರಗತಿಯಿಂದ 10ನೇ ತರಗತಿ ವರೆಗೆ ನಡೆಯುತ್ತಿರುವ ಸರ್ಕಾರಿ ಶಾಲೆ ಸುಮಾರು ನಾಲ್ಕು ಎಕರೆ ವಿಸ್ತೀರ್ಣದಲ್ಲಿದೆ. ಉತ್ತಮ ಸ್ಥಳಾವಕಾಶ ವೂ ಇದೆ. ಸಿಬ್ಬಂದಿ ಸೇರಿದಂತೆ ಎಲ್ಲಾರೀತಿಯ ಸೌಲಭ್ಯಗಳನ್ನು ಈ ಶಾಲೆ ಒಳಗೊಂಡಿದೆ. ಸ್ಮಾರ್ಟ್ ಕ್ಲಾಸ್ ಸೇರಿದಂತೆ ಆಧುನಿಕ ಸೌಲಭ್ಯ ಅಳವಡಿಸಿಕೊಂಡು ಮಾದರಿ ಶಾಲೆಯಾಗಿ ಅಭಿವೃದ್ಧಿ ಪಡಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗೆ ಅಗತ್ಯವಿರುವ ಕಾಂಪೌಂಡ್, ಆಟದ ಮೈದಾನ ಅಭಿವೃದ್ಧಿ, ತರಕಾರಿ ಕೈತೋಟ ಮೊದಲಾದವುಗಳಿಗೆ ನರೇಗಾ ಯೋಜನೆಯನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಗ್ರಾಪಂ ಜತೆಗೆ ಚರ್ಚಿಸಿ ಸೌಲಭ್ಯ ಪಡೆದುಕೊಳ್ಳಬೇಕು. ಹೆಚ್ಚುವರಿಯಾಗಿ ಶಿಕ್ಷಣ ಇಲಾಖೆಯಿಂದ ನೀಡಬೇಕಾದ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಲೆ ಅಭಿವೃದ್ಧಿಗೆ ನೆರವು: ಕಣ್ವ ಡಯಾಗ್ನೊàಸ್ಟಿಕ್ ಸೆಂಟರ್‌ನ ಮುಖ್ಯಸ್ಥ, ಡಾ.ವೆಂಕಟಪ್ಪ ಮಾತನಾಡಿ, ನಾನು ಓದಿದ ಸರ್ಕಾರಿ ಶಾಲೆ ಸಮಗ್ರವಾಗಿಅಭಿವೃದ್ಧಿ ಪಡಿಸುವುದಕ್ಕೆ ಸಂಪೂರ್ಣ ನೆರವು ನೀಡುತ್ತೇನೆ. ಶಿಕ್ಷಣ ಇಲಾಖೆಯಿಂದ ಶಾಲೆ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀಲ ನಕ್ಷೆಯನ್ನು ಸಿದ್ಧಪಡಿಸಿಕೊಡಿ ಎಂದರು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಸಂಪೂರ್ಣ ಶಿಥಿಲಗೊಂಡಿರುವ ಹಳೆ ಶಾಲೆಯನ್ನು ಪುನರ್ ನಿರ್ಮಾಣಗೊಳಿಸಿ ಎಲ್‌ಕೆಜಿ ಮತ್ತು ಯುಕೆಜಿಯನ್ನು ಆರಂಭಿಸಲು ನೆರವು ನೀಡಲಾಗುತ್ತದೆ ಎಂದರು.
ಡಾ.ವಿ.ವೆಂಕಟಪ್ಪ ಅವರು ತಮ್ಮೂರಿನ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿಸಲು ಅಗತ್ಯವಿರುವ ಕಟ್ಟಡ, ಪೀಠೊಪಕರಣ, ಪ್ರಯೋಗಾಲ ಸೇರಿ ದಂತೆ ಶಾಲೆಗೆ ಅಗತ್ಯವಿರುವ ಸಂಪೂರ್ಣ ಮೂಲ ಸೌಕರ್ಯ ಕಲ್ಪಿಸುವುದಾಗಿ ಶಿಕ್ಷಣ ಸಚಿವರಿಗೆ ಪ್ರಸ್ಥಾವನೆ ಸಲ್ಲಿಸಿದ್ದರು. ಈ ಹಿನ್ನೆಲೆ ಶಿಕ್ಷಣ ಸಚಿವರು, ದಾನಿಗಳ ಜತೆಗೂಡಿ ಶಾಲೆಯಲ್ಲಿ ಸಭೆ ನಡೆಸಿ, ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪುರೇಷೆಗಳ ಬಗ್ಗೆ ಚರ್ಚಿಸಿದರು.
ಉರ್ದು ಶಾಲೆ ಅಭಿವೃದ್ಧಿಪಡಿಸಿ: ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಗ್ರಾಪಂ ಅಧ್ಯಕ್ಷೆ ರೇಖಾ, ಗ್ರಾಮದ ಉರ್ದು ಶಾಲೆಯನ್ನು ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು. ಸ್ಥಳೀಯ ಮುಖಂಡರು ಗ್ರಾಮದಲ್ಲಿ ಪಿಯುಸಿ ತರಗತಿಯನ್ನು ಆರಂಭಿಸುವಂತೆ ಕೋರಿದರು. ಡಿಡಿಪಿಐ ಸೋಮಶೇಖರಯ್ಯ, ಬಿಇಒ ನಾಗರಾಜು, ಹೊಂಗನೂರು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕುಸುಮ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶ್ರೀನಿವಾಸ್, ಶಿಕ್ಷಣ ಸಂಯೋಜಕ ಗಂಗಾಧರಮೂರ್ತಿ, ಡಿ.ರಾಜಶೇಖರ್, ಗ್ರಾಮದ ಮುಖಂಡರಾದ ವರದರಾಜು, ಅನಂತ ಕೃಷ್ಣರಾಜೇಅರಸು ಉಪಸ್ಥಿತರಿದ್ದರು.