Advertisement

ಆಯುಕ್ತರ ವಿರುದ್ಧ ಸರ್ಕಾರಕ್ಕೆ ದೂರು

07:55 AM Apr 29, 2020 | mahesh |

ಬೆಂಗಳೂರು: ಕೋವಿಡ್ ದ ತುರ್ತು ಪರಿಸ್ಥಿತಿಯಲ್ಲೂ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹಾಗೂ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರ ಮುಸುಕಿನ ಗುದ್ದಾಟ ಬೀದಿಗೆ ಬಂದಿದ್ದು , ಈಗ ಚೆಂಡು ಸರ್ಕಾರದ ಅಂಗಳ ತಲುಪಿದೆ. ಬಿಬಿಎಂಪಿ ಆಯುಕ್ತರು ಆಡಳಿತಾತ್ಮಕ ವಿವರಗಳನ್ನು, ಕೋವಿಡ್, ವಾರ್‌ ರೂಂಗಳಿಗೆ ಸಂಬಂಧಿಸಿದ ಮಾಹಿತಿ ನೀಡುತ್ತಿಲ್ಲ ಎಂದು ಮೇಯರ್‌ ಎಂ. ಗೌತಮ್‌ಕುಮಾರ್‌ ಈ ಹಿಂದೆ ಎರಡು ಬಾರಿ ಆಯುಕ್ತರಿಗೆ ಪತ್ರ ಬರೆದಿದ್ದರು. ಆದಾಗ್ಯೂ ಆಯುಕ್ತರೊಂದಿಗೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಈ ಬಾರಿ ನೇರವಾಗಿ ಆಯುಕ್ತರ ಮೇಲೆ ಸರ್ಕಾರಕ್ಕೆ ದೂರಿತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

Advertisement

ಈ ಸಂಬಂಧ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್ ಅವರಿಗೆ ಪತ್ರ ಬರೆದಿರುವ ನಗರಾಭಿವೃದಿಟಛಿ ಇಲಾಖೆಯ ಅಧೀನ ಕಾರ್ಯದರ್ಶಿ ಎನ್‌.ಕೆ. ಲಕ್ಷ್ಮೀ ಸಾಗರ್‌, ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದು, ಕೋವಿಡ್ ಸೋಂಕು ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ, ನಿರಾಶ್ರಿತರು, ಕಟ್ಟಡ ನಿರ್ಮಾಣ ಕಾರ್ಮಿಕರು, ಕೂಲಿ
ಕಾರ್ಮಿಕರಿಗೆ ಆಹಾರ ಹಾಗೂ ಆಹಾರದ ಕಿಟ್‌ ವಿತರಣೆ ಹಾಗೂ ಉಚಿತ ಹಾಲಿನ ಪ್ಯಾಕೆಟ್‌ ನೀಡಿರುವುದು ಸೇರಿದಂತೆ ಎಲ್ಲ ಬೆಳವಣಿಗೆಗಳನ್ನು ಮೇಯರ್‌, ಉಪಮೇಯರ್‌, ಶಾಸಕರು, ಸಂಸದರು ಹಾಗೂ ಎಲ್ಲ ಪಾಲಿಕೆ ಸದಸ್ಯರಿಗೆ ಸಂಬಂಧಪಟ್ಟ ಅಧಿಕಾರಿಗಳಿಂದಲೇ ಮಾಹಿತಿ ನೀಡುವಂತೆ ಏ. 9ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಮತ್ತು ಆಯುಕ್ತರಾಗಲಿ ಯಾರಿಗೂ ಈ ಸಂಬಂಧ ಮಾಹಿತಿ ನೀಡಿಲ್ಲ. ಹೀಗಾಗಿ, ಕೂಡಲೇ ಎಲ್ಲ ಮಾಹಿತಿಯನ್ನು ನೀಡುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಈ ವಿಚಾರದಲ್ಲಿ ಮೇಯರ್‌ ಅವರಿಗೆ ಈ ಬಾರಿ ಸರ್ವಪಕ್ಷದ ಸದಸ್ಯರು ಕೂಡ ಸಾಥ್‌ ನೀಡಿದ್ದಾರೆ.

ಮೇಯರ್‌ ಸರಣಿ ಪತ್ರ: “ಬಿಬಿಎಂಪಿಯಿಂದ ತೆಗೆದುಕೊಳ್ಳುವ
ನಿರ್ಧಾರಗಳು ಮತ್ತು ಹೊಸ ಯೋಜನೆಗಳ ಬಗ್ಗೆ ಹಾಗೂ ಕೋರ್ಟ್‌ ತೀರ್ಪು ಅದಕ್ಕೆ ನೀಡುವ ಮಾಹಿತಿಗಳನ್ನು ನನ್ನ ಗಮನಕ್ಕೆ ತರುತ್ತಿಲ್ಲ. ಇದರಿಂದ ಮಾಧ್ಯಮಗಳ ಮುಂದೆ ಉತ್ತರ ನೀಡಲು ನನಗೆ ಮುಜುಗರವಾಗುತ್ತಿದೆ. ಹೀಗಾಗಿ, ಎಲ್ಲ ನಿರ್ಧಾರಗಳನ್ನು ನನ್ನ ಗಮನಕ್ಕೆ ತರಬೇಕು’ ಎಂದು ನಿರ್ದೇಶನ ನೀಡಿ ಎಲ್ಲ ವಿಭಾಗದ ಮುಖ್ಯ ಅಧಿಕಾರಿಗಳಿಗೆ
ಹಾಗೂ ಬಿಬಿಎಂಪಿ ಆಯುಕ್ತರಿಗೂ ಸೇರಿ ಪತ್ರ ಬರೆದಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಮತ್ತೂಮ್ಮೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೊನಾ ಸಂಬಂಧಿಸಿದ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಕೋವಿಡ್ ಪ್ರಕರಣಗಳು, ವಾರ್‌ರೂಮ್‌ ಸ್ಥಾಪನೆ ಹಾಗೂ ಕ್ವಾರಂಟೈನ್‌ ಮಾಹಿತಿಗಳನ್ನು ನೀಡುತ್ತಿಲ್ಲ ಎಂದು ನೇರವಾಗಿ ಆರೋಪಿಸಿಯೇ ಪತ್ರ ಬರೆದಿದ್ದರು. ಈ ಬೆಳವಣಿಗೆಗಳ ನಂತರ ಈಗ ಸರ್ಕಾರದ ಮೊರೆಹೋಗಿದ್ದು, ಅಲ್ಲಿಂದ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ಕ್ರಿಮಿನಲ್‌ ಕೇಸ್‌; ಎಚ್ಚರಿಕೆ
ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು ನಮಗೆ ಯಾವ ವಿಚಾರದಲ್ಲೂ ಸಹಕಾರ ನೀಡುತ್ತಿಲ್ಲ. ಯಾವುದಾದರೂ ಮನವಿ ಮಾಡಿದರೆ “ಇದು ಸಾಧ್ಯವಿಲ್ಲ’ ಎಂದು ಒಕ್ಕಣಿ ಬರೆದು ಕಳುಹಿಸುತ್ತಾರೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಚಿತವಾಗಿ ನೀಡುತ್ತಿರುವ ಹಾಲು, ವಲಸಿಗರಿಗೆ ಕಿಟ್‌ ಎಲ್ಲೆಲ್ಲಿ ಎಷ್ಟು ನೀಡಲಾಗಿದೆ. ಇದನ್ನು ಯಾವ ಮಾನದಂಡದ ಮೇಲೆ ನೀಡಲಾಗುತ್ತಿದೆ ಎನ್ನುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಮಾಹಿತಿ ನೀಡಿಲ್ಲ. ಅಲ್ಲದೆ, ಆಯುಕ್ತರು ನ್ಯಾಯಾಲಯಕ್ಕೆ ನೀಡಿದ ತಪ್ಪು ಮಾಹಿತಿಯಿಂದ ನಮಗೆ ಕೋರ್ಟ್‌ನಿಂದ ಎರಡನೇ
ಬಾರಿ ನೋಟಿಸ್‌ ಬಂದಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ದೂರಿದ್ದಾರೆ. ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಕರಣದಲ್ಲಿ ನಾವು ಸಭೆ ನಡೆಸಿರುವುದಾಗಿ ಆಯುಕ್ತರು ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ, ಕೋರ್ಟ್‌ ನಮಗೆ ನೋಟಿಸ್‌ ನೀಡಿದೆ. ಸಭೆ ನಡೆಸುವಂತೆ ಮನವಿ ಮಾಡಿದರೆ, ವಿವರಣೆ ನೀಡದೆಯೇ ಇದು ಸಾಧ್ಯವಿಲ್ಲ ಎನ್ನುತ್ತಾರೆ. ಇದರರ್ಥ ಏನು ಎಂದು ಪ್ರಶ್ನಿಸಿದರು. ಕೋವಿಡ್ ತುರ್ತು ಸಂದರ್ಭದಲ್ಲಿ ನಮ್ಮ ವಾರ್ಡ್‌ ಸಮಸ್ಯೆಗಳನ್ನು ಯಾರಿಗೆ ಹೇಳಿಕೊಳ್ಳಬೇಕು ಎಂದು ತಿಳಿಯುತ್ತಿಲ್ಲ. ವಾರ್‌ ರೂಮ್‌ನಿಂದ ನಮಗೆ ಮಾಹಿತಿ ಸಿಗುತ್ತಿಲ್ಲ ಎಂದು ಬಿಬಿಎಂಪಿಯ ವಿರೋಧ ಪಕ್ಷದ
ನಾಯಕ ಅಬ್ದುಲ್‌ವಾಜಿದ್‌ ಆರೋಪಿಸಿದ್ದಾರೆ.

ಮೇಯರ್‌ ಹಾಗೂ ಎಲ್ಲರಿಗೂ ಎಲ್ಲ ಮಾಹಿತಿ ನೀಡಲಾಗುತ್ತಿದೆ. ಮಾಹಿತಿ ನೀಡಲು ಪಾಲಿಕೆಯ ಕೌನ್ಸಿಲ್‌ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿದೆ. ನನ್ನ ನೇರ ಸ್ವಭಾವ ಕೆಲವರಿಗೆ ಇಷ್ಟವಾಗದೆ ಇರಬಹುದು. ನನಗೆ ಸುತ್ತಿಬಳಸಿ ಹೇಳುವುದು ಬರುವುದಿಲ್ಲ. ಆದಾಗ್ಯೂ ಮಾಹಿತಿ ನೀಡುವ ವಿಚಾರದಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುವುದು.
ಬಿ.ಎಚ್‌. ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next