Advertisement

ರಸ್ತೆ ಕಳಪೆಯಾದ್ರೆ ಲೋಕಾಯುಕ್ತಕ್ಕೆದೂರು

11:04 AM Jul 13, 2018 | Team Udayavani |

ಕಲಬುರಗಿ: ರಸ್ತೆ ನಿರ್ಮಾಣ ಕಾರ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಕಳಪೆ ಕಾಮಗಾರಿ ಕುರಿತಾಗಿ ಲೋಕಾಯುಕ್ತಗೆ ದೂರು ಕೊಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿಯ 2017-18 ಹಾಗೂ 2018-19ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ಧಾರಿ ನಿರ್ಮಾಣ ಹಾಗೂ ಸಿಆರ್‌ಎಫ್‌ ಯೋಜನೆ ಅಡಿ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ ಎನ್ನುವುದು ಕಂಡು ಬಂದಿದೆ. ಆದ್ದರಿಂದ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಧಕ್ಕೆಯಾದರೆ  ಕಾಯುಕ್ತಕ್ಕೆ ದೂರು ಕೊಡಬೇಕಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಭಾಗ ಸೇರಿದಂತೆ ಇತರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಇ-ಮೇಲ್‌ ಹಾಕಿ: ಕಲಬುರಗಿ ವಿಭಾಗದಲ್ಲಿ ಯಾವ ರಸ್ತೆಗಳು ಯಾವ ಹಂತದಲ್ಲಿವೆ, ಎಷ್ಟು ಅನುದಾನ ಬೇಕು, ಡಿಪಿಆರ್‌ ಹಂತದಲ್ಲಿರುವ ಕಾಮಗಾರಿಗಳು ಯಾವ್ಯಾವು? ಎನ್ನುವುದು ಸೇರಿದಂತೆ ಒಟ್ಟಾರೆ ಕಾಮಗಾರಿಗಳ ಸಮಗ್ರ ವಸ್ತುಚಿತ್ರಣ ಕುರಿತಾಗಿ ತಮಗೆ ಇ-ಮೇಲ್‌ ಹಾಕಿ. ಅದನ್ನೆಲ್ಲ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು. ಆದರೆ ಅಧಿಕಾರಿಗಳು ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯತೋರಿದರೆ ಸಹಿಸುವುದಿಲ್ಲ. ಮುಂದಿನ ಸಭೆಗೆ ರಸ್ತೆಗಳ ಚಿತ್ರ ಸಮೇತ ಸಭೆಗೆ ವಿವರಣೆ ನೀಡುವ ತಯಾರಿಯೊಂದಿಗೆ ಬನ್ನಿ ಎಂದು ಸೂಚಿಸಿದರು.

ರೈಲ್ವೆ ಇಲಾಖೆ ಕಾಮಗಾರಿ: ಕಲಬುರಗಿಯಲ್ಲಿನ ಮದರ ತೇರೆಸಾ ಕಾಲೇಜು, ಅಫಜಲಪುರ ರಸ್ತೆಯ ರೈಲ್ವೆ ಮೇಲ್ಸೆತುವೆ, ಸೊಲ್ಲಾಪುರ-ವಾಡಿ ನಡುವಿನ ಡಬ್ಲಿಂಗ್‌ ಕಾಮಗಾರಿ ಸೇರಿದಂತೆ ಇತರ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಖರ್ಗೆ, ಲೋಕೋಪಯೋಗಿ ಇಲಾಖೆ
ರೈಲ್ವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಈಗ ತುರ್ತಾಗಿ ಮುಗಿಸಿ ಕೊಡಬೇಕು ಎಂದರು.

ಪ್ರಚಾರ ಯಾವ ಪುರುಷಾರ್ಥಕ್ಕೆ: ಕಲಬುರಗಿ ಜಿಲ್ಲೆಯಲ್ಲಿ ಕಳೆದ ವರ್ಷದ 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 81612 ರೈತರು ಬೆಳೆವಿಮೆ ಮಾಡಿಸಿ 8.78 ಕೋಟಿ ರೂ. ಪ್ರಿಮಿಯಂ ತುಂಬಿಸಿದ್ದಾರೆ. ಆದರೆ ಜಿಲ್ಲೆಗೆ ಕೇವಲ 3 ಲಕ್ಷ ರೂ. ಬೆಳೆವಿಮೆ ಮಂಜೂರಾಗಿರುವುದು ಯಾವ ಲೆಕ್ಕ ಎಂದು ಅಧಿಕಾರಿಗಳು ನೀಡಿದ ಮಾಹಿತಿಗೆ ಪ್ರಶ್ನಿಸಿದರಲ್ಲದೇ ಪ್ರಧಾನಮಂತ್ರಿ ಫಸಲು ಬೀಮಾ (ವಿಮಾ) ಯೋಜನೆ ಎಂಬುದಾಗಿ ದೊಡ್ಡದಾಗಿ ಪ್ರಚಾರ ಮಾಡುತ್ತಾರೆ. ಆದರೆ ಇದನ್ನು ನೋಡಿದರೆ ಕಾರ್ಪೋರೆಟ್‌ ಕಂಪನಿಗಳಿಗೆ ಲಾಭ ಮಾಡಿ ಕೊಡುವ ಉದ್ದೇಶವಿದೆ ಎಂಬುದು ಸ್ಪಷ್ಟವಾಗುತ್ತದೆ.  81 ಸಾವಿರ ರೈತರಲ್ಲಿ ಕೇವಲ 143 ರೈತರಿಗೆ ವಿಮೆ ಬಂದಿರುವುದು ತಾರತಮ್ಯದ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

30 ತಿಂಗಳಲ್ಲಿ ಕಟ್ಟಡ ಕಟ್ಟಿದ್ದೇವೆ-ನೀರು
ಕೊಡಲು ಆಗೋದಿಲ್ಲವೇ?: ಕಲಬುರಗಿಯಲ್ಲಿ ಇಎಸ್‌ಐ ಆಸ್ಪತ್ರೆಯ ಬೃಹದಾಕಾರದ ಕಟ್ಟಡವನ್ನು 30 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ. ಆದರೆ ನಿಮಗೆ ನೀರು ಹಾಗೂ ಸಮರ್ಪಕ ವಿದ್ಯುತ್‌ ಕೊಡಲಿಕ್ಕಾಗುವುದಿಲ್ಲವೇ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. 

ಕೇಂದ್ರ ಸರ್ಕಾರ ಈ ಇಎಸ್‌ಐ ಆಸ್ಪತ್ರೆ ಬಗ್ಗೆ ಆಸಕ್ತಿ ಹೊಂದಿಲ್ಲ. ಜತೆಗೆ ನೀವೂ ನೀರು-ವಿದ್ಯುತ್‌ ಕೊಡ್ತಾ ಇಲ್ಲ. ಹೀಗಾಗಿ ರೋಗಿಗಳು ಸಾಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಮಹಾಪೌರ ಶರಣಕುಮಾರ ಮೋದಿ, ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ, ಪಾಲಿಕೆ ಆಯುಕ್ತ ರಘು ನಂದನಮೂರ್ತಿ ಮುಂತಾದವರಿದ್ದರು.

ವಿಮಾನ ಹಾರುವುದು ಯಾವಾಗ?
ನೀರು ಪೂರೈಕೆ, ವಿದ್ಯುತ್‌ ಕಾಮಗಾರಿ ಹಾಗೂ ಸುತ್ತುಗೋಡೆ ಸೇರಿದಂತೆ ಇತರ ಕಾಮಗಾರಿಗಳು ಇನ್ನೂ ಬಾಕಿ ಇರುವಾಗ ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣ ಪೂರ್ಣಗೊಂಡಿದೆ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ. ವಿಮಾನ ನಿಲ್ದಾಣವೇ ಪೂರ್ಣಗೊಳ್ಳದಿರುವಾಗ ವಿಮಾನ ಅದ್ಹೇಗೆ ಹಾರಾಟ ಶುರುವಾಗುತ್ತೇ? ಎಂದು ಸಂಸದ ಖರ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. 

ಕಾಮಗಾರಿ ಬಾಕಿ ಇದ್ದರೂ ಪ್ರಾಯೋಗಿಕ ವಿಮಾನ ಹಾರಾಟ ಮಾಡಬಹುದು ಎನ್ನುತ್ತೀರಿ. ಆದರೆ ವಾಸ್ತವಾಗಿ 7.76
ಕೋಟಿ ರೂ. ವಿದ್ಯುತ್‌ ಕಾಮಗಾರಿ, 3.43 ಕೋಟಿ ರೂ. ಮೊತ್ತದ ಕುಡಿಯುವ ನೀರಿನ ಕಾಮಗಾರಿ, 11 ಕೋಟಿ ರೂ. ಮೊತ್ತದ ಇತರ ಕಾಮಗಾರಿಗಳಾಗಬೇಕಿದೆ. ಆಗಸ್ಟ್‌ 15ರೊಳಗೆ ವಿಮಾನ ಹಾರಾಟ ಶುರುವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದಾಗುವುದಿಲ್ಲ. ಪ್ರಾಯೋಗಿಕ ವಿಮಾನದ ಬದಲು ನಿಲ್ದಾಣ ಪೂರ್ಣಗೊಳಿಸಲು ಆದ್ಯತೆ ಮೇರೆಗೆ ಜತೆಗೆ ಉಡಾನ ಯೋಜನೆ ಅಡಿ ವಿಮಾನ ಹಾರಾಟ ಶುರುವಾಗುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಿ ಎಂದು ತಾಕೀತು ಮಾಡಿದರು.

ಗುತ್ತಿಗೆದಾರರು ನವೆಂಬರ್‌ ವರೆಗೆ ಕಾಮಗಾರಿ ಅವಧಿಯಿದೆ ಎಂಬುದಾಗಿ ಹೇಳುತ್ತಿದ್ದಾರೆ ಎಂದು  ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮುಕ್ತಾರ ಹೇಳಿದರು. ಇದೇ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗಿದೆ ಎಂದರು. ಇದಕ್ಕೆ ಖರ್ಗೆ ಅವರು, ನೀವೆಲ್ಲ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ನಾನು ಅನುಮತಿ ಕೊಡಿಸುತ್ತೇನೆ ಎಂದು ಹೇಳಿದರು.

ಈ ನಡುವೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, ನೆರೆಯ ತೆಲಂಗಾಣದ ಹೈದ್ರಾಬಾದ ವಿಮಾನ
ನಿಲ್ದಾಣವನ್ನು ನಿರ್ವಹಣೆಗೆ ಪಡೆದಿರುವ ಜಿಎಂಆರ್‌ ಕಂಪನಿಯು ತನ್ನ ಅಧೀನದ ಹೈದ್ರಾಬಾದ್‌ ನಲ್ಲಿರುವ ವಿಮಾನ ತರಬೇತಿ ಸಂಸ್ಥೆ (ಏಷಿಯಾ ಪೆಸಿಫಿಕ್ ಫ್ಲೈಟ್ ಟ್ರೇನಿಂಗ್‌ ಸೆಂಟರ್‌ )ಯು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಪರೀಕ್ಷಾರ್ಥದ ವಿಮಾನ ಹಾರಾಟ ನಡೆಸಲು ಉತ್ಸುಕತೆ ಹೊಂದಲಾಗಿ ಅರ್ಜಿ ಸಹ ಸಲ್ಲಿಸಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next