ಬೆಂಗಳೂರು: ಬಿಜೆಪಿಯ ಹತ್ತು ಶಾಸಕರನ್ನು ಅಮಾನತುಗೊಳಿಸಿರುವ ಸ್ಪೀಕರ್ ನಡೆಯ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಹೋರಾಟದ ಸ್ವರೂಪವನ್ನು ಬದಲಾಯಿಸಿವೆ. ಶುಕ್ರ ವಾರ ಕಲಾಪದಿಂದ ದೂರ ಉಳಿದು ಪ್ರತಿ ಭ ಟನೆ ವ್ಯಕ್ತಪಡಿಸಿವೆ. ಜತೆಗೆ ರಾಜ್ಯಪಾಲರನ್ನು ಜಂಟಿಯಾಗಿ ಭೇಟಿ ಮಾಡಿ ಸ್ಪೀಕರ್ ವಿರುದ್ಧ ದೂರು ನೀಡಿವೆ. ವಿಪಕ್ಷಗಳು ಕಲಾಪ ಬಹಿಷ್ಕರಿಸಿದ ಪರಿಣಾಮವಾಗಿ ಇದೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ವಿಪಕ್ಷಗಳ ಸಾಲಿನ ಖಾಲಿ ಕುರ್ಚಿಗಳನ್ನು ನೋಡಿ ಉತ್ತರಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಮೊದಲ ಅಧಿವೇಶನದಲ್ಲೇ ಇಂಥ ವಿಕೋಪದ ಪರಿಸ್ಥಿತಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಇರಿಸು-ಮುರುಸು ಉಂಟು ಮಾಡಿದೆ. ಅಲ್ಲದೆ ಅವರು ಸ್ವಯಂಪ್ರೇರಣೆಯಿಂದ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಹೀಗಾಗಿ ವಿವಾದ ಈಗ ರಾಜ್ಯಪಾಲರ ಅಂಗಳಕ್ಕೆ ವರ್ಗಾವಣೆಗೊಂಡಂತಾಗಿದೆ.
ಬಿಜೆಪಿ ಪ್ರತಿಭಟನೆ
ಗುರುವಾರ ಬೆಳಗ್ಗೆ ಬಿಜೆಪಿ ಕಚೇರಿ ಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆ ಸಿದ ಬಿಜೆಪಿ ಶಾಸಕರು ಉಭಯ ಸದನಗಳ ಕಲಾಪವನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡರು. ಬಳಿಕ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಅನಂತರ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯಪಾಲ ರನ್ನು ಭೇಟಿ ಮಾಡಿ ದೂರು ನೀಡಿದರು. ಬಿಜೆಪಿ ನಿಯೋಗದ ಜತೆಗೆ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕೂಡ ಸೇರಿಕೊಂಡಿತು. ಇದಕ್ಕೆ ಮೊದಲು ತನ್ನ ಶಾಸಕಾಂಗ ಪಕ್ಷದ ಸಭೆ ನಡೆಸಿದ ಜೆಡಿಎಸ್, ಬಿಜೆಪಿಯ ಜತೆ ಸೇರಿ ವಿಧಾನಮಂಡಲದ ಕಲಾಪದಿಂದ ದೂರ ಉಳಿಯಲು ತೀರ್ಮಾನಿಸಿತು. ಇದಕ್ಕೆ ಜೆಡಿಎಸ್‌ನ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದರೂ ಅಂತಿಮವಾಗಿ ಕಲಾಪದಿಂದ ಹೊರಗುಳಿಯುವುದೇ ಸೂಕ್ತ ಎಂದು ತೀರ್ಮಾನಿಸಿದರು.
ಹುದ್ದೆ ದುರುಪಯೋಗ
ಸ್ಪೀಕರ್ ನಡೆಯ ಜತೆಗೆ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ನೇತೃತ್ವದ ರಾಜಕೀಯ ಸಮಾವೇಶಕ್ಕೆ ಐಎಎಸ್ ಅಧಿಕಾರಿಗಳನ್ನು ಶಿಷ್ಟಾಚಾರ ನಿರ್ವಹಣೆಗಾಗಿ ನಿಯೋಜನೆ ಮಾಡಿ ಅಧಿಕಾರ ದುರುಪಯೋಗ ಮಾಡಿ ಕೊಂಡಿರುವ ಬಗ್ಗೆಯೂ ಬಿಜೆಪಿ-ಜೆಡಿಎಸ್ ದೂರು ನೀಡಿವೆ.