ಬೆಂಗಳೂರು: 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಾಗೂ 2019ರ ಉಪ ಚುನಾವಣೆ ವೇಳೆ ಚುನಾವಣಾ ಪ್ರಮಾಣಪತ್ರದಲ್ಲಿ ಅಪೂರ್ಣ ಮಾಹಿತಿ ನೀಡಿದ್ದ ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ರಮೇಶ್ ಜಾರಕಿಹೊಳಿಯವರು ಚುನಾವಣಾ ನಾಮಪತ್ರದ ಜತೆಗೆ ಮೊದಲು 2018ರ ಏ.23ರಂದು ಪ್ರಮಾಣಪತ್ರ ಸಲ್ಲಿಸಿದ್ದರು. ನಂತರ 2019ರ ನ.18ರಂದು ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದಾಗ ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರು. ಈ ಎರಡೂ ಪ್ರಮಾಣ ಪತ್ರಗಳಲ್ಲಿ ಅಪೂರ್ಣ ಮಾಹಿತಿ ನೀಡುವುದರ ಜತೆಗೆ ದುರುದ್ದೇಶಪೂರ್ವಕವಾಗಿ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ರಮೇಶ್ ಜಾರಕಿಹೊಳಿ ಕುಟುಂಬದ ಸದಸ್ಯರು ನಿರ್ದೇಶಕರಾಗಿರುವ ಸೌಭಾಗ್ಯಲಕ್ಷ್ಮಿ ಶುಗರ್ ಕಾರ್ಖಾನೆ 578 ಕೋಟಿ ರೂ. ಸಾಲ ಮಾಡಿದ್ದು, ಇದರ ವಿವರಗಳನ್ನು ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ.
ರೈತರಿಗೆ ಸುಮಾರು 50 ಕೋಟಿ ರೂ. ಬಾಕಿ ನೀಡಬೇಕಾಗಿದ್ದು, ಅದರ ಮಾಹಿತಿಯೂ ಕೊಟ್ಟಿಲ್ಲ. ಆದಾಯ ತೆರಿಗೆ ಇಲಾಖೆಗೆ 150 ಕೋಟಿ ರೂ. ಪಾವತಿ ಮಾಡಬೇಕಿದ್ದು, ಅದರ ವಿವರಗಳನ್ನೂ ಮುಚ್ಚಿಟ್ಟಿದ್ದಾರೆ.
ಇದು ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 125-ಎ ಇದರ ಉಲ್ಲಂಘನೆಯಾಗಿದ್ದು, “ಸಂಜ್ಞೆ’ಯ (ಕಾಗ್ನಿಜೆಬಲ್) ಅಪರಾಧವಾಗಿದೆ. ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ.