ಬೆಂಗಳೂರು: ದುಬೈ(ಓಮನ್)ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದು, ಹುಡುಕಿಕೊಂಡುವಂತೆ ಆತನ ತಾಯಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ನಗರದ ಸಂಜೀವಿನಿ ನಗರದ ನಿವಾಸಿ ಮಂಜುಳಾ ಎಂಬುವರು ದೂರು ನೀಡಿದ್ದು, ಅವರ ಪುತ್ರ ಆರ್.ಪಿ.ದೀಪಕ್ (30) ನಾಪತ್ತೆಯಾದವರು. ಒಂದೂವರೆ ತಿಂಗಳಿಂದ ಪುತ್ರ ದೀಪಕ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಆತ ಕೆಲಸ ಮಾಡುತ್ತಿದ್ದ ಮಾಸ್ ಇಂಟರ್‌ನ್ಯಾಷನಲ್ ಹೈಪರ್ ಮಾರ್ಕೆಟಿಂಗ್ ಇನ್ ಓಮನ್ ಕಂಪನಿಯವರು ಕೂಡ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ.
ಹೀಗಾಗಿ ಪುತ್ರನ ಪತ್ತೆ ಮಾಡಿಕೊಡುವಂತೆ ಮಂಜುಳಾ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ನಾಪತ್ತೆಯಾಗಿರುವ ಯುವಕನ ಪತ್ತೆಗೆ ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಕೌಟುಂಬಿಕ ವಿಚಾರ ಸಂಬಂಧ ಪತಿಯಿಂದ ದೂರವಾಗಿರುವ ಮಂಜುಳಾ, ಪುತ್ರ ದೀಪಕ್ ಹಾಗೂ ಅಂಗವಿಕಲ ಪುತ್ರಿ ಜತೆ ಸಂಜೀವಿನಿ ನಗರದಲ್ಲಿ ವಾಸವಾಗಿದ್ದಾರೆ. ಬಿಬಿಎಂ ಪದವಿ ಪಡೆದ ಪುತ್ರ ದೀಪಕ್, ದುಬೈನಲ್ಲಿಯೇ ಎಂಬಿಎ ಸ್ನಾತಕೋತ್ತರ ಪದವಿ ಪಡೆದಿದ್ದು, ಏಳು ವರ್ಷಗಳಿಂದ ಮಾಸ್ ಇಂಟರ್ ನ್ಯಾಷನಲ್ ಹೈಪರ್ ಮಾರ್ಕೆಟಿಂಗ್ ಇನ್ ಓಮನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರತಿ ನಿತ್ಯ ಕರೆ ಮಾಡಿ ತಾಯಿ ಮಂಜುಳಾ ಹಾಗೂ ಸಹೋದರಿಯ ಆರೋಗ್ಯ ವಿಚಾರಿಸುತ್ತಿದ್ದ ದೀಪಕ್, ಡಿ.10ರಂದು ತಾಯಿಗೆ ಕರೆ ಮಾಡಿ ಕಾರ್ಯನಿಮಿತ್ತ ಬೇರೆಡೆ ಹೋಗಬೇಕಿದ್ದು, ಮತ್ತೂಮ್ಮೆ ಸಂಪರ್ಕಿಸುವಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಬಳಿಕ ಸುಮಾರು 15 ದಿನಗಳು ಕಳೆದರೂ ಪುತ್ರನಿಂದ ಕರೆ ಬಂದಿಲ್ಲ. ಇದರಿಂದ ಆತಂಕಗೊಂಡ ತಾಯಿ ಮಂಜುಳಾ, ಕೂಡಲೇ ಆತ ಕೆಲಸ ಮಾಡುತ್ತಿದ್ದ ಕಂಪನಿಗೆ ಕರೆ ಹಾಗೂ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದರಿಂದ ಮತ್ತಷ್ಟು ಗಾಬರಿಗೊಂಡ ಮಂಜುಳಾ, ಡಿ.17ರಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ. ಅಲ್ಲದೆ, ನಗರದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಇಂಟರ್‌ಪೋಲ್‌ಗೂ ದೂರು ನೀಡಿದ್ದಾರೆ. ಬಳಿಕ ಇಂಟರ್‌ಪೋಲ್ ಅಧಿಕಾರಿಗಳು ಓಮನ್‌ನಲ್ಲಿರುವ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ಇದುವರೆಗೂ ಪುತ್ರನ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಮಂಜುಳಾ ಅವರು ತಿಳಿಸಿದರು.
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌ಗೂ ಟ್ವಿಟ್: ಪುತ್ರ ದೀಪಕ್ ನಿಗೂಢವಾಗಿ ನಾಪತ್ತೆಯಾಗಿರುವ ಕುರಿತು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೂ ಟ್ವಿಟರ್ ಮೂಲಕ ದೂರು ನೀಡಿದ್ದು, ಮಗನ ಪತ್ತೆಗೆ ಸಹಾಯ ಮಾಡುವಂತೆ ಕೋರಿದ್ದೇನೆ. ಆದರೆ, ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು.