Advertisement

ಟಿಆರ್‌ಪಿ ತಿರುಚಾಟ ಮೊದಲಿನಿಂದಲೂ ಇದೆ ದೂರು!

12:45 AM Oct 14, 2020 | mahesh |

ಟಿಆರ್‌ಪಿ ತಿರುಚಿದ ಆರೋಪದಲ್ಲಿ ಮುಂಬಯಿ ಪೊಲೀಸರು ಮೂರು ವಾಹಿನಿಗಳ ವಿರುದ್ಧ ತನಿಖೆ ಕೈಗೊಳ್ಳುತ್ತಿರುವ ನಡುವೆಯೇ ಈ ರೀತಿಯ ದುರ್ವ್ಯವಹಾರಗಳು ಎಲ್ಲೆಡೆಯೂ, ಎಲ್ಲ ರೀತಿಯ ವಾಹಿನಿಗಳಲ್ಲೂ ಸಂಭವಿಸುತ್ತಿವೆಯೇ ಎನ್ನುವ ಪ್ರಶ್ನೆ ಎದುರಾಗುತ್ತಿದೆ.

Advertisement

ಚಿಪ್‌ ಅಳವಡಿಸುವ ಸಲಹೆ
ಎರಡು ವರ್ಷಗಳ‌ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೂರದರ್ಶನ ಚಾನೆಲ್‌ನ ವೀಕ್ಷಕರ ಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ ಎಂದು ಟಿಆರ್‌ಪಿ ರೇಟಿಂಗ್‌ಗಳ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಟಿಆರ್‌ಪಿಯನ್ನು ಬಿಡುಗಡೆ ಮಾಡುವ ಬ್ರಾಡ್‌ ಕಾಸ್ಟ್‌ ಆಡಿ ಯನ್ಸ್‌ ರಿಸರ್ಚ್‌ ಕೌನ್ಸಿಲ್‌(ಬಾರ್ಕ್‌) ಇದು ಸತ್ಯವಲ್ಲವೆಂದು ಹೇಳಿತು. ಆದರೆ ಮಾಹಿತಿ-ಪ್ರಸಾರ ಸಚಿವಾಲಯ ಎಲ್ಲ ಸೆಟ್‌-ಅಪ್‌ ಬಾಕ್ಸ್‌ಗಳಲ್ಲೂ ಚಿಪ್‌ ಆಧರಿತ ಲಾಗ್‌ಗಳನ್ನು ಅಳವಡಿಸುವ ಪ್ರಸ್ತಾವ‌ವನ್ನು ಸಿದ್ಧಪಡಿಸಿತಾದರೂ ಕೊನೆಗೆ ಈ ಚಿಂತನೆಯನ್ನು ಕೈಬಿಡಲಾಯಿತು.

ಪ್ರತ್ಯೇಕ ರಿಮೋಟ್‌ಗಳು
ಪೀಪಲ್ಸ್‌ ಮೀಟರ್‌ ಅಳವಡಿಸಲಾದ ಕುಟುಂಬಗಳಲ್ಲಿ ಎಷ್ಟು ಜನ ಇದ್ದಾರೆ, ಯಾವ ವಯೋಮಾನದವರಿದ್ದಾರೆ ಎನ್ನುವುದನ್ನು ಪರಿಗಣಿಸಿ ಪ್ರತ್ಯೇಕ ರಿಮೋಟ್‌ಗಳನ್ನು ಕೊಡಲಾಗುತ್ತದೆ. ಉದಾ-ಮಕ್ಕಳು ಟಿವಿ ನೋಡುತ್ತಾರೆಂದರೆ, ಅವರು ತಮಗೆ ಕೊಡಲಾದ ರಿಮೋಟ್‌ ಬಳಸಿ ಚಾನೆಲ್‌ ಬದಲಿಸಬೇಕು. ಆಗ ಆ ವಯೋಮಾನದವರು ಯಾವ ಕಾರ್ಯಕ್ರಮ, ಎಷ್ಟು ಹೊತ್ತು ನೋಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಜಾಹೀರಾತುದಾರರು ಇದನ್ನು ಆಧರಿಸಿ ಮಕ್ಕಳಿಗೆ ಸಂಬಂಧಿಸಿದ ಉತ್ಪನ್ನಗಳ ಜಾಹೀರಾತು ನೀಡಬಹುದು!

ಹಣ-ಹೊಸ ಟಿ.ವಿ.ಯ ಆಮಿಷ
ಕೇವಲ 45 ಸಾವಿರ ಮನೆಗಳೇ ಇಡೀ ದೇಶದ ವೀಕ್ಷಕರನ್ನು ಪ್ರತಿನಿಧಿಸುವುದರಿಂದಾಗಿ, ಈ ಕುಟುಂಬಗಳನ್ನು ಪತ್ತೆಹಚ್ಚಲು ಅಕ್ರಮ ಎಸಗುವವರು ಮುಂದಾಗಬಹುದು. ಕೆಲವು ಸಂದರ್ಭಗಳಲ್ಲಿ ಇಂಥ ಕುಟುಂಬಗಳಿಗೆ ಹೊಸ ಟಿ.ವಿ. ಕೊಡಿಸುವ ಆಮಿಷ ಒಡ್ಡಲಾಗುತ್ತದೆ. ಇದಕ್ಕಾಗಿ ಆ ಮನೆಯವರು ಪ್ರತೀ ದಿನ ನಿರ್ದಿಷ್ಟ ಚಾನೆಲ್‌ ಅನ್ನು 5-6 ಗಂಟೆಗಳವರೆಗೆ ಆನ್‌ ಮಾಡಿ ಇಡಬೇಕು ಎಂದು ಷರತ್ತು ವಿಧಿಸಲಾಗುತ್ತದೆ. ಒಂದು ಪೀಪಲ್ಸ್‌ ಮೀಟರ್‌ 20-25 ಸಾವಿರ ಜನರನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಿದರೆ, ಆ ನಿರ್ದಿಷ್ಟ ಚಾನೆಲ್‌ನ ಟಿಆರ್‌ಪಿಯಲ್ಲಿ ವಿಪರೀತ  ಏರಿಕೆ ಕಂಡುಬರುತ್ತದೆ.

ಈ ಹಿಂದೆಯೂ ಸಲ್ಲಿಕೆಯಾಗಿತ್ತು ದೂರು
2017ರಲ್ಲಿ ದೇಶದ ಟಾಪ್‌ 5 ಆಂಗ್ಲ ನ್ಯೂಸ್‌ ಚಾನೆಲ್‌ನ ಸಂಪಾದಕರೊಬ್ಬರು ಗುಜರಾತ್‌ನಲ್ಲಿನ ಕೆಲವು ಮನೆಗಳು ಏಜೆಂಟರ ಜತೆಗೂಡಿ ಎದುರಾಳಿ ಚಾನೆಲ್‌ಗೆ ಹೆಚ್ಚು ಟಿಆರ್‌ಪಿ ಕೊಡುತ್ತಿದ್ದಾರೆ. ಇದರಿಂದಾಗಿ ತಮ್ಮ ಚಾನೆಲ್‌ ರೇಟಿಂಗ್‌ ಕಡಿಮೆಯಾಗುತ್ತಿದೆ ಎಂದು ಬಾರ್ಕ್‌ ಸಂಸ್ಥೆಗೆ ದೂರು ನೀಡಿದ್ದರು. ಇನ್ನು ಟಿಆರ್‌ಪಿ ಕಲೆಹಾಕುವ ಬಾರ್ಕ್‌ ಸಂಸ್ಥೆಯು ಸಹ ಕೆಲವು ಸಂದರ್ಭಗಳಲ್ಲಿ ದೂರು ದಾಖಲಿಸಿದ ಉದಾಹರಣೆಯಿದೆ. ಪೀಪಲ್ಸ್‌ ಮೀಟರ್‌ಗಳ ತಾಂತ್ರಿಕ ನಿರ್ವಹಣೆಗಾಗಿ ಬಾರ್ಕ್‌ ಹಲವು ಏಜೆನ್ಸಿಗಳನ್ನು ನೇಮಕ ಮಾಡಿಕೊಂಡಿದೆ. ಒಂದೇ ಏಜೆನ್ಸಿಯ ಕೈಯಲ್ಲಿ ಪೂರ್ಣ ಮಾಹಿತಿ ಸಿಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ. ಆದರೆ ಕೆಲವು ಏಜೆನ್ಸಿಗಳು ಪ್ರಸಾರಕರಿಗೆ ಯಾವ ಮನೆಯಲ್ಲಿ ಮೀಟರ್‌ ಇದೆ ಎನ್ನುವುದನ್ನು ತಿಳಿಸುವ ಅಪಾಯವೂ ಇರುತ್ತದೆ. ಈ ಹಿಂದೆ ಬಾರ್ಕ್‌ ಸಂಸ್ಥೆ ಹಲವು ಬಾರಿ ಅಸಹಜ ರೇಟಿಂಗ್‌ಗಳನ್ನು ಆಧರಿಸಿ ಕೆಲವು ಏಜೆನ್ಸಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿದೆ.

Advertisement

ವೀಕ್ಷಕರ ಮಾಪನಕ್ಕೆ ಸರಿಯಾದ ಮಾರ್ಗವೇ?
ಈ ಪ್ರಶ್ನೆಗೆ ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ. ಏಕೆಂದರೆ ದೇಶದಲ್ಲಿ ಕೇವಲ 45 ಸಾವಿರ ಮನೆಗಳಲ್ಲೇ ಪೀಪಲ್ಸ್‌ ಮೀಟರ್‌ ಇದ್ದು, ಆ ಕುಟುಂಬಗಳಲ್ಲಿ ಯಾವ ಚಾನೆಲ್‌ ನೋಡುತ್ತಾರೆ ಎನ್ನುವುದರ ಆಧಾರದಲ್ಲೇ ಟಿಆರ್‌ಪಿ ನಿರ್ಧರಿಸಲಾಗುತ್ತದೆ. ಒಂದು ಕುಟುಂಬ ಒಂದು ನ್ಯೂಸ್‌ ಚಾನೆಲ್‌ ನೋಡುತ್ತದೆ ಎಂದರೆ ಆ ಮೀಟರ್‌ನ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಕುಟುಂಬಗಳೂ ಅದೇ ಚಾನೆಲ್‌ ನೋಡುತ್ತವೆ ಎಂದು ಹೇಳಲು ಬರುವುದಿಲ್ಲ. ಆದರೂ ಜಾಹಿರಾತು ನೀಡುವವರು ಟಿಆರ್‌ಪಿಯನ್ನೇ ಪ್ರಮುಖ ಮಾನದಂಡವಾಗಿಸಿಕೊಂಡಿರುವುದರಿಂದ ಈ ಮಾಪನವೇ ಅನಿವಾರ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next