ಬೆಂಗಳೂರು: ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಹಾಗೂ ಅವರ ಕುಟುಂಬ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಮತ್ತು ತನ್ನ ಕುಟುಂಬದವರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್‌ಗಳನ್ನು ಹಾಕಿ ಅಪಪ್ರಚಾರ ಮಾಡುವ ಮೂಲಕ ತಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆಕಾಶ್ ಶಂಕರ್ ಅವರ ಪತ್ನಿ ಡಾ. ವಂದನಾ ಕೋರ್ಟ್‌ಗೆ ಖಾಸಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆ ಮೇರೆಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಆಕಾಶ್ ಶಂಕರ್(33), ಸಹೋದರ ವಿಕಾಸ್ ಶಂಕರ್, ಚೇತನಾ ವಿಕಾಸ್, ಎಸ್.ಕೆ.ಚೇತನ್ ಮತ್ತು ಐಸಿರಿ ಶಿವಕುಮಾರ್ ಎಂಬುವರ ವಿರುದ್ಧ ಡಾ.ವಂದನಾ ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ?: ಮಾಜಿ ಐಪಿಎಸ್ ಅಧಿಕಾರಿ ಟಿ.ಆರ್.ಸುರೇಶ್ ಪುತ್ರಿಯಾಗಿರುವ ಡಾ.ವಂದನಾ ಕಳೆದ ವರ್ಷ ಜೂನ್‌ನಲ್ಲಿ ಆಕಾಶ್ ಶಂಕರ್ ಜತೆ ವಿವಾಹವಾಗಿತ್ತು. ಆದರೆ, ಮದುವೆಯಾದ ಒಂದು ವರ್ಷದೊಳಗೆ ವರದಕ್ಷಿಣೆ ಕಿರುಕುಳ ನೀಡಿದ್ದ ಆರೋಪ ಆಕಾಶ್ ವಿರುದ್ಧ ಕೇಳಿ ಬಂದಿತ್ತು.
ಈ ಸಂಬಂಧ ಮಾರ್ಚ್ 10 ರಂದು ಪತಿ ಆಕಾಶ್ ವಿರುದ್ಧ ಪತ್ನಿ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಇತ್ತೀಚಿಗೆ ಆಕಾಶ್ ಶಂಕರ್, ಅವರ ಸಹೋದರ ವಿಕಾಸ್ ಶಂಕರ್, ವಿಕಾಸ್ ಪತ್ನಿ ಚೇತನಾ, ಎಸ್.ಕೆ.ಚೇತನ್ ಹಾಗೂ ಐಸಿರಿ ಶಿವಕುಮಾರ್ ಎಂಬುವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ, ಅಸಂಬದ್ಧ ಪೋಸ್ಟ್‌ಗಳನ್ನು ಪ್ರಕಟಿಸುವುದು ಮತ್ತು ತಮ್ಮ ಸ್ನೇಹಿತರಿಗೆ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟ್ರಾಗ್ರಾಂಗಳಲ್ಲಿ ಸಂದೇಶ ಕಳುಹಿಸುವುದು ಮಾಡಿ ತೇಜೋವಧೆ ಮಾಡುತ್ತಿದ್ದರು ಎಂದು ವಂದನಾ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೇ “ಟ್ರಾಫಿಕಿಂಗ್ ಆಫ್ ಖಾಕೀಸ್ ಡಾಟರ್ ಮತ್ತು ಟ್ರಾಫಿಕರ್ ಡಾ.ವಂದನಾ” ಎಂದು ಬರೆದು ಸಾಮಾಜಿಕ ಜಾಲದಲ್ಲಿ ಹರಿಬಿಟ್ಟು ನಮ್ಮ ಕುಟುಂಬದ ವಿರುದ್ಧ ಪೋಸ್ಟ್ ಮಾಡಿದ್ದಾರೆ. ಅನಾನಿಮಸ್ ಐಪಿಎಸ್ ಎಂಬ ಹೆಸರಿನಲ್ಲಿ ಗೂಗಲ್ ಫೋರಂ ಖಾತೆ ತೆರೆದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ನನ್ನ ತಂದೆ ನಿವೃತ್ತ ಐಪಿಎಸ್ ಅಧಿಕಾರಿ ಟಿ.ಆರ್.ಸುರೇಶ್ ಹಾಗೂ ತನಗೆ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ವಂದನಾ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದು, ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.