ಮಂಗಳೂರು: ನಗದರ ಕದ್ರಿಯಲ್ಲಿರುವ ಪುರಾಣ ಪ್ರಸಿದ್ಧ ಮಂಜುನಾಥ ದೇಗುಲದಲ್ಲಿ ವಿಶೇಷ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳ ವೇಳೆ ಬಳಸುವ ಧ್ವನಿವರ್ಧಕದಿಂದ ಆರೋಗ್ಯದ ಮೇಲೆ ತೊಂದರೆಯಾಗುತ್ತದೆ ಎಂದು ಸ್ಥಳೀಯರೊಬ್ಬರು ದೂರು ನೀಡಿರುವ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.
ದೇವಾಲಯದ ಸಮೀಪದ ನಿವಾಸಿ ಬ್ಲೇನಿ ಡಿ ಸೋಜಾ ಎನ್ನುವವರು 6 ತಿಂಗಳ ಹಿಂದೆ ಧ್ವನಿವರ್ಧಕದಿಂದ ತನಗಾಗುವ ತೊಂದರೆಗಳ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮತ್ತು ಮಂಗಳೂರು ಮೇಯರ್‌ಗೆ ಪತ್ರ ಬರೆದಿದ್ದರು.
ಇದೀಗ ಮುಜರಾಯಿ ಇಲಾಖೆ ದೂರಿನ ವಿರುದ್ಧ ಕ್ರಮ ಕೈಗೊಳ್ಳಲು ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿರುವುದು ಹಿಂದು ಸಂಘಟನೆಗಳು ಮತ್ತು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದು ಹಿಂದು ಧರ್ಮೀಯರನ್ನು ಹಳಿಯುವ ಸಂಚು ಎಂದು ಹಿಂದೂ ಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಲೇನಿ ಡಿ ಸೋಜಾ ಅವರು ರಾತ್ರಿಯೀಡಿ ನಡೆಯುವ ಯಕ್ಷಗಾನ, ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ವೇಳೆ ಮೊಳಗುವ ಏರು ಧ್ವನಿಯ ಭಕ್ತಿ ಗೀತೆಗಳಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ದೂರು ನೀಡಿದ್ದರು.