ಬೆಂಗಳೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ರಾಜ್ಯ ಸರ್ಕಾರವು ನಿಯಮ ಬಾಹಿರವಾಗಿ ಬಿಬಿಎಂಪಿ ಬಜೆಟ್‌ಗೆ ಅನುಮೋದನೆ ನೀಡಿದೆ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ನೀತಿ ಸಂಹಿತೆ ಘೋಷಣೆಗೆ ಮೊದಲು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆದು ಅನುಮತಿಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿತ್ತು. ನಗರಾಭಿವೃದ್ಧಿ ಇಲಾಖೆ 12,958 ಕೋಟಿ ರೂ. ಮೊತ್ತದ ಬಜೆಟ್ ಗಾತ್ರವನ್ನು 11,649 ಕೋಟಿ ರೂ.ಗಳಿಗೆ ಇಳಿಸಿ ಮೇ 22ರಂದು ಅನುಮೋದನೆ ನೀಡಿದೆ.
ಇದು ಕಾನೂನು ಬಾಹಿರವಾಗಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಪದ್ಮನಾಭರೆಡ್ಡಿ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷ ನಾಯಕ ಅಬ್ದುಲ್ ವಾಜೀದ್, ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬಾರದು ಮತ್ತು ಜಾರಿಗೊಳಿಸಬಾರದು ಎಂಬ ನಿಯಮವಿದೆ.
ಆದರೆ, ಬಿಬಿಎಂಪಿ ಬಜೆಟ್ ಮಂಡಿಸಿದ್ದು, ಚುನಾವಣೆ ಘೋಷಣೆಯಾಗುವುದಕ್ಕೂ ಹಿಂದೆ. ಹೀಗಾಗಿ ಅದಕ್ಕೆ ಅನುಮೋದನೆ ನೀಡಿರುವುದು ಸಮಂಜಸವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.