ನವದೆಹಲಿ:ಗಾಜಿಯಾಬಾದ್ ನಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸ್ವರಾ ಭಾಸ್ಕರ್, ಟ್ವಿಟರ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಹಾಗೂ ಇತರರ ವಿರುದ್ಧ ದೆಹಲಿಯಲ್ಲಿ ದೂರು ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:‘ಅದ್ದೂರಿ’ ಬಳಿಕ ಮತ್ತೊಮ್ಮೆ ಕಮಾಲ್ ಮಾಡಲು ಧ್ರುವ- ಅರ್ಜುನ್ ಸಜ್ಜು ?
ವಕೀಲರೊಬ್ಬರು ಈ ದೂರನ್ನು ನೀಡಿದ್ದು, ಇನ್ನಷ್ಟೇ ಎಫ್ ಐಆರ್ ದಾಖಲಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ವೃದ್ಧರೊಬ್ಬರ ಮೇಲೆ ನಡೆದ ಘಟನೆಯ ಪೋಸ್ಟ್ ಅನ್ನು ಕೋಮು ಭಾವನೆಗಳನ್ನು ಪ್ರಚೋದಿಸುವ ನಿಟ್ಟಿನಲ್ಲಿ ಕೆಲವು ಪತ್ರಕರ್ತರು, ಕಾಂಗ್ರೆಸ್ ಮುಖಂಡರು ಹಂಚಿಕೊಂಡಿರುವುದಾಗಿ ಆರೋಪಿಸಿ ವಕೀಲರೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿರುವುದಾಗಿ ವರದಿ ವಿವರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ, ಮುಸ್ಲಿಂ ವ್ಯಕ್ತಿಯೊಬ್ಬರನ್ನು ನಾಲ್ವರು ಥಳಿಸಿ, ಗಡ್ಡವನ್ನು ಕತ್ತರಿಸಿದ್ದರು. ಅಲ್ಲದೇ ಜೈಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿರುವ ದೃಶ್ಯ ಸೆರೆಯಾಗಿತ್ತು. ಈ ಘಟನೆಯ ವಿಡಿಯೋವನ್ನು ಸ್ವರಾ ಭಾಸ್ಕರ್, ಪತ್ರಕರ್ತೆ ಅರ್ಫಾ ಖಾನುಮ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜನರಲ್ಲಿ ದ್ವೇಷ ಭಾವನೆ ಹುಟ್ಟುಹಾಕಲು ಮುಂದಾಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ ಎಂದು ವರದಿ ತಿಳಿಸಿದೆ.