Advertisement

ಹೆ. ಪ್ರಾಧಿಕಾರ, ನವಯುಗ ವಿರುದ್ಧ ಜಿಲ್ಲಾಡಳಿತ ಹೋರಾಟ! 

10:37 AM Jul 13, 2018 | |

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಪೂರ್ಣ ಮತ್ತು ಅಸಮರ್ಪಕ ಕಾಮಗಾರಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರ ಕಂಪೆನಿಯಾದ ನವಯುಗದ ವಿರುದ್ಧ ಉಡುಪಿ ಜಿಲ್ಲಾಡಳಿತ ಕಾನೂನು ಹೋರಾಟಕ್ಕೆ ಮುಂದಾಗಿದೆ. ರಾ. ಹೆದ್ದಾರಿ 66ರ ಮೂಳೂರಿನಲ್ಲಿ ಉಂಟಾಗಿರುವ ಬೃಹತ್‌ ಹೊಂಡದಿಂದಾಗಿ ಜು. 11ರಂದು ಸಂಭವಿಸಿರುವ ಅಪಘಾತಕ್ಕೆ ಗುತ್ತಿಗೆದಾರರು ಮತ್ತು ಪ್ರಾಧಿಕಾರದ ನಿರ್ಲಕ್ಷ್ಯವೇ ಕಾರಣ. ಹಾಗಾಗಿ ಈ ಎರಡೂ ಸಂಸ್ಥೆಗಳ ಯೋಜನಾ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸ್ಪಂದಿಸಿರುವ ಎಸ್‌ಪಿ, ಈ ಬಗ್ಗೆ ತಹಶೀಲ್ದಾರ್‌ ಅವರು ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಅದರಂತೆ ಪ್ರಕ್ರಿಯೆ ನಡೆಯಲಿದೆ.

Advertisement

ಕಾರ್ಯದರ್ಶಿಗೂ ದೂರು
ಹೆದ್ದಾರಿ ಕಾಮಗಾರಿ ತೀರಾ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಮುಖ್ಯ ಕಾರ್ಯದರ್ಶಿಗಳಿಗೂ ದೂರು ನೀಡಿದ್ದಾರೆ. 

ಕುಂದಾಪುರ ಎ.ಸಿ. ಆದೇಶ ಬಾಕಿ
ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಟೋಲ್‌ ಸಂಗ್ರಹ ಸ್ಥಗಿತಕ್ಕೆ ಯಾಕೆ ಆದೇಶ ನೀಡಬಾರದು ಎಂದು ಕುಂದಾಪುರ ಎ.ಸಿ. ಶೋಕಾಸ್‌ ನೋಟೀಸು ನೀಡಿ ಅನಂತರ ವಿಚಾರಣೆ ನಡೆಸಿದ್ದಾರೆ. ಎನ್‌ಐಟಿಕೆಯವರಿಂದ ವರದಿ ತರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಈ ಪ್ರಕ್ರಿಯೆಗಳು ನಡೆದು ಕುಂದಾಪುರ ಸಹಾಯ ಕಮಿಷನರ್‌ ಅವರು ಅಂತಿಮ ಆದೇಶ ನೀಡಲು ಮಾತ್ರ ಬಾಕಿ ಇದೆ. ಮಾತ್ರವಲ್ಲದೆ ಈ ಹಿಂದೆ ಒತ್ತಿನೆಣೆಯಲ್ಲಿ ಅಪಘಾತ ಉಂಟಾದಾಗಲೂ ನವಯುಗ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಪೊಲೀಸರಿಗೆ ದೂರು
ಕಾಪು: ಅಸಮರ್ಪಕ ಕಾಮಗಾರಿ ಮತ್ತು ಅದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಚತುಷ್ಪಥ ಕಾಮಗಾರಿ ನಿರ್ವಹಿಸಿದ ನವಯುಗ ಕಂಪೆನಿ ಮತ್ತು ರಾ. ಹೆದ್ದಾರಿ ಯೋಜನಾ ನಿರ್ದೇಶಕರ ವಿರುದ್ಧ ಕಾಪು ತಹಶೀಲ್ದಾರ್‌ ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾಕಾಗಿ ದೂರು?
ಅವೈಜ್ಞಾನಿಕ, ಕಳಪೆ ಕಾಮಗಾರಿ, ಸರ್ವೀಸ್‌ ರಸ್ತೆ, ಕ್ರಾಸಿಂಗ್‌ ವ್ಯವಸ್ಥೆಯ ಕೊರತೆಯಿಂದಾಗಿ ನಿರಂತರ ಅಪಘಾತಗಳು ಸಂಭವಿಸಿ, ನೂರಾರು ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಸಾರ್ವಜನಿಕರು, ಹೆದ್ದಾರಿ ಸಂಚಾರಿಗಳು ಹಲವು ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಹೀಗಾಗಿ ಪೊಲೀಸರಿಗೆ ದೂರು ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಕಾಪು ತಹಶೀಲ್ದಾರರಿಗೆ ಸೂಚನೆ ನೀಡಿದ್ದರು.

Advertisement

ದೂರಿನಲ್ಲೇನಿದೆ?
ಕಾಮಗಾರಿ ನಿರ್ವಹಣೆಯಲ್ಲಿ ವಿಳಂಬ ಧೋರಣೆ, ಅಸಮರ್ಪಕ ಕಾಮಗಾರಿ ಮತ್ತು ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಕಂಪೆನಿಯ ಅಸಮರ್ಪಕ, ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದಾಗಿ ಸಾರ್ವಜನಿಕ ಹಣ ದುರುಪಯೋಗವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮೂಳೂರು ಘಟನೆಯ ಬಗ್ಗೆ ಉಲ್ಲೇಖ
ಹೆದ್ದಾರಿ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದರೂ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪೆನಿ ನಿರ್ಲಕ್ಷ  ವಹಿಸುತ್ತಲೇ ಬಂದ ಪರಿಣಾಮ ಜು. 10ರಂದು ಮೂಳೂರಿನಲ್ಲಿ ಬೃಹತ್‌ ಹೊಂಡ ಸೃಷ್ಟಿಯಾಗಿತ‌ು¤. ಇದರಿಂದ ಅಪಘಾತ ಸಂಭವಿಸಿರುವುದನ್ನು ಉಲ್ಲೇಖೀಸಿ ದೂರು ದಾಖಲಿಸಲು ನಿರ್ಧರಿಸಲಾಗಿದೆ ಎಂದು ಕಾಪು ತಹಶೀಲಾªರ್‌ ಗುರುಸಿದ್ಧಯ್ಯ ತಿಳಿಸಿದ್ದಾರೆ.

ನವಯುಗ ಕಂಪೆನಿಯವರು ಮೊನ್ನೆಯ ವರೆಗೆ ಆರ್ಥಿಕ ತೊಂದರೆಯ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಈಗ ಮಳೆಗಾಲದ ಕಾರಣ ಹೇಳುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರಿಗೆ ವಿವರವಾಗಿ ಮಾಹಿತಿ ನೀಡಿದ್ದೇನೆ. ಕಂಪೆನಿ ಮತ್ತು ಪ್ರಾಧಿಕಾರ ವಿರುದ್ಧ ಎಫ್ಐಆರ್‌ಗೆ ಸೂಚನೆ ನೀಡಿದ್ದೇನೆ.
  -ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌
ಜಿಲ್ಲಾಧಿಕಾರಿ, ಉಡುಪಿ 

Advertisement

Udayavani is now on Telegram. Click here to join our channel and stay updated with the latest news.

Next