Advertisement

ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ದೂರು ದಾಖಲು

12:35 AM Jan 23, 2019 | Team Udayavani |

ಬೆಂಗಳೂರು: ಶೋಕಾಚರಣೆ ನಡುವೆಯೂ ಸಮಾಜ ಕಲ್ಯಾಣ ಇಲಾಖೆ ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ” ಸಂವಿಧಾನದ ಸಂಭಾಷಣೆಗಳು’ ಕುರಿತ ಸಂವಾದ ಕಾರ್ಯಕ್ರಮ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಇದೀಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ.

Advertisement

 ಶ್ರೀ ಶಿವಕುಮಾರ ಸ್ವಾಮೀಜಿ ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದು, ಇದನ್ನು ಧಿಕ್ಕರಿಸಿ ಸಮಾಜಕಲ್ಯಾಣ ಇಲಾಖೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸಂವಾದ ಕಾರ್ಯಕ್ರಮ ನಡೆಸಿರುವುದು, ಕನ್ನಡಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ. ಈ ಸಂಬಂಧ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ.ಹರೀಶ್‌ ಕುಮಾರ್‌ ಎಂಬುವರು ಕಾರ್ಯಕ್ರಮದ ಆಯೋಜಕರಾಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಇಲಾಖೆಯ ಕಾರ್ಯದರ್ಶಿಗಳ ವಿರುದ್ಧ ನಗರದ ಹೈಗ್ರೌಂಡ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇಲಾಖೆ ನಡೆ ನ್ಯಾಯಸಮ್ಮತವಾಗಿಲ್ಲ
 ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಇದ್ದರೂ, ಸಮಾಜ ಕಲ್ಯಾಣ ಇಲಾಖೆಯೇ ಇದನ್ನು ಧಿಕ್ಕರಿಸಿ ಕಾರ್ಯಕ್ರಮ ಮಾಡಿರುವ ಕ್ರಮ ನ್ಯಾಯಸಮ್ಮತವಲ್ಲ. ಇದು ಸರ್ಕಾರಿ ಆದೇಶದ ಸಂಪೂರ್ಣ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ “ಸಂವಿಧಾನದ ಸಂಭಾಷಣೆಗಳು’ ಸಂವಾದ ಕಾರ್ಯಕ್ರಮದ ಆಯೋಜಕರಾಗಿರುವ ಸಚಿವ ಪ್ರಿಯಾಂಕ ಖರ್ಗೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಚರ್ಚೆಗೆ ಗ್ರಾಸವಾದ ಇಲಾಖೆ  “ಸಂವಿಧಾನದ ಸಂಭಾಷಣೆಗಳು’ ಸಂವಾದ ಕಾರ್ಯಕ್ರಮ ನಡೆಯುತ್ತಿದೆ ಎಂಬುದನ್ನು ಅರಿತ ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಬಿ.ಹರೀಶ್‌ ಕುಮಾರ್‌, ಕಾರ್ಯಕರ್ತರ ಒಡಗೂಡಿ ಸಮಾರಂಭ ನಡೆಯುತ್ತಿದ್ದ ಖಾಸಗಿ ಹೋಟೆಲ್‌ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಏತನ್ಮಧ್ಯೆ, ಸರ್ಕಾರಿ ಆದೇಶವನ್ನು ಧಿಕ್ಕರಿಸಿ ಸರ್ಕಾರದ ಇಲಾಖೆಯೇ ಕಾರ್ಯಕ್ರಮ ನಡೆಸಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next