ಬೆಂಗಳೂರು: “ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಅವರನ್ನು ಗೌರವಿಸುವುದಕ್ಕಾಗಿ ನೋಟಾಕ್ಕೆ ಮತ ನೀಡಿ’ ಎಂದು ಬಿಜೆಪಿ ನಾಯಕರ ಭಾವಚಿತ್ರ ಸಹಿತ ಕರಪತ್ರಗಳು ವ್ಯಾಪಕವಾಗಿ ಹರಿದಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
“ಬೆಂಗಳೂರು ದಕ್ಷಿಣದಲ್ಲಿ “ನೋಟಾ’ ಗುಂಡಿ ಒತ್ತುವ ಮೂಲಕ ತೇಜಸ್ವಿನಿ ಅನಂತಕುಮಾರ್ ಅವರನ್ನು ಬೆಂಬಲಿಸಿ’ ಎಂದು ಕರೆ ನೀಡಿರುವ ಕರಪತ್ರದಲ್ಲಿ ದಿ.ಅನಂತಕುಮಾರ್, ಪ್ರಧಾನಿ ಮೋದಿಯವರ ಭಾವಚಿತ್ರದ ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಭಾವಚಿತ್ರವಿದ್ದು, ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಅಲ್ಲದೇ, ಇದೇ ಕರಪತ್ರದ ಕೆಳಭಾಗದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಕೈಯಲ್ಲಿ ಮೈಕ್ ಹಿಡಿದಿರುವ ದೊಡ್ಡ ಭಾವಚಿತ್ರವೂ ಇದೆ. ಈ ಕರಪತ್ರ ಸಾಮಾಜಿಕ ಜಾಲತಾಣ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೀಗ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ಸಂಬಂಧ
“ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿನಿ ಅನಂತಕುಮಾರ್, “ಇದು ವಿರೋಧಿಗಳ ಕೃತ್ಯ ಇರಬೇಕು. ಯಾರು, ಯಾಕೆ ಹೀಗೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಪಕ್ಷದ ಮುಖಂಡರ ಜತೆಗೆ ಚರ್ಚಿಸಿ ದೂರು ದಾಖಲಿಸಲಾಗುವುದು,’ ಎಂದು ಹೇಳಿದರು.
“ಭಾನುವಾರ ಸಂಜೆ ಒಂದು ಕಾರ್ಯಕ್ರಮದಲ್ಲಿದ್ದಾಗ ಇದು ನನ್ನ ಗಮನಕ್ಕೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲೂ ಇದು ಹರಿದಾಡುತ್ತಿರುವುದನ್ನು ತಿಳಿದುಕೊಂಡಿದ್ದೇನೆ. ಈ ರೀತಿ ನಮ್ಮೆಲ್ಲರ ಫೋಟೋ ಬಳಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಪಕ್ಷದ ಮೂಲಕವೇ ದೂರು ದಾಖಲಿಸಲಾಗುತ್ತದೆ,’ ಎಂದರು.