ಬೆಂಗಳೂರು: ಲೋಕಾಯುಕ್ತ ಸಂಸ್ಥೆಯನ್ನು ಇನ್ನಷ್ಟು ಜನಸ್ನೇಹಿ, ಸಮಾಜಸ್ನೇಹಿ ಮಾಡುವ ಸದುದ್ದೇಶ ಹೊಂದಿದ್ದೇನೆ ಎಂದು ರಾಜ್ಯದ 9ನೇ ಲೋಕಾಯುಕ್ತರಾಗಿ ನೇಮಕಗೊಂಡಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹೇಳಿದ್ದಾರೆ.
ಕಳೆದ ಎರಡೂವರೆ ವರ್ಷದಿಂದ ಉಪ ಲೋಕಾಯುಕ್ತರಾಗಿಯೂ ಕಾರ್ಯನಿರ್ವಹಿಸುತ್ತಿರುವ ಹಾಗೂ ಇದೀಗ ಲೋಕಾಯುಕ್ತರಾಗಿ ನೇಮಕಗೊಂಡಿರುವ ನಿಮಿತ್ತ “
ಉದಯವಾಣಿ’ಗೆ ಕಿರು ಸಂದರ್ಶನ ನೀಡಿರುವ ನ್ಯಾ. ಪಾಟೀಲ್, ಕಳೆದ ಎರಡೂವರೆ ವರ್ಷಗಳಿಂದ ಉಪಲೋಕಾಯುಕ್ತನಾಗಿ ಕೆಲಸ ಮಾಡುತ್ತಿದ್ದೇನೆ. ಹಿಂದಿದ್ದ ಲೋಕಾಯುಕ್ತರ ಜೊತೆಗೆ ಕೆಲಸ ಮಾಡಿದ್ದೇನೆ.
ಸಾಕಷ್ಟು ಕಲಿತಿದ್ದೇನೆ, ಅನುಭವ ಪಡೆದುಕೊಂಡಿದ್ದೇನೆ. ಕೊರೊನಾದಂತಹ ಸಂಕಷ್ಟದ ಕಾಲದಲ್ಲೂ ಜಿಲ್ಲೆಗಳಿಗೆ ಪ್ರವಾಸ ಮಾಡಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಹಳ್ಳಿ ಜನ ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಅನೇಕ ಪಿಡುಗುಗಳನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ, ಬಯಲು ಶೌಚಾಲಯ, ಅಪೌಷ್ಟಿಕತೆ, ಬಾಲ್ಯ ವಿವಾಹದಂತಹ ಸಾಮಾಜಿಕ ಸಮಸ್ಯೆಗಳು, ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿ, ಕೆರೆಗಳು ಒತ್ತುವರಿ ಯಾಗಿವೇ ಹೀಗೆ ಅನೇಕ ವಿಚಾರಗಳಿದ್ದು, ಈ ನಿಟ್ಟಿನಲ್ಲಿ ಕಾನೂನುಗಳ ಅಡಿಯಲ್ಲಿ ಮತ್ತು ಲೋಕಾಯುಕ್ತದ ಅಧಿಕಾರ ವ್ಯಾಪ್ತಿಯಲ್ಲಿ ಏನೆಲ್ಲಾ ಸಾಧ್ಯವೂ ಅದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗಬೇಕು ಅನ್ನೋದೆ ನನ್ನ ಆದ್ಯತೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಜಿಲ್ಲೆಗಳ ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿಗಳಿಗೆ ಸುತ್ತೋಲೆ ಹೊರಡಿಸಿ ವಾರಕ್ಕೊಂದು ದಿನ ಪ್ರತಿ ತಾಲೂಕಿಗೆ ಭೇಟಿ ಕೊಟ್ಟು ಜನರ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ದೊರಕಿಸಿ ಕೊಡಬೇಕು ಎಂದು ಸೂಚನೆ ನೀಡಲಾಗಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇನೆ ಎಂದು ತಿಳಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆಯ ಮೇಲಿನ ಜನ ಸಾಮಾನ್ಯರ ವಿಶ್ವಾಸವನ್ನು ಇನ್ನಷ್ಟು ಹೆಚ್ಚು ಮಾಡಬೇಕು. ಲೋಕಾಯುಕ್ತ ಸಂಸ್ಥೆ ಹೆಚ್ಚು ಜನಸ್ನೇಹಿ, ಸಮಾಜಸ್ನೇಹಿ ಆಗಬೇಕು. ಜನರ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಶೀಘ್ರವಾಗಿ ಪರಿಹಾರ ದೊರಕಿಸಲು ಪ್ರಯತ್ನಿಸುತ್ತೇನೆ. ಜನ ಯಾವುದೇ ಹಿಂಜರಿಕೆ ಇಲ್ಲದೆ, ಮುಕ್ತವಾಗಿ ಲೋಕಾ ಯುಕ್ತ ಸಂಸ್ಥೆಗೆ ತಮ್ಮ ದೂರು-ದುಮ್ಮಾನಗಳನ್ನು ಹೇಳಿಕೊಳ್ಳಬೇಕು. ಲೋಕಾಯುಕ್ತ ಸಂಸ್ಥೆ ಜನರ ಸೇವೆ ಸದಾ ಸಿದ್ಧವಿದೆ ಎಂದು ಹೇಳಿದ್ದಾರೆ.
●ರಫಿಕ್ ಅಹ್ಮದ್