ಬೆಳ್ತಂಗಡಿ: ಬೆಳ್ತಂಗಡಿ ಸ್ಕೌಟ್ಸ್- ಗೈಡ್ಸ್ ಸ್ಥಳೀಯ ಸಂಸ್ಥೆಯ ವಿದ್ಯಾರ್ಥಿಗಳು ಕೋವಿಡ್ ನಿರ್ಮೂಲನೆಗೆ “ಸಂಕಲ್ಪ’ ಎಂಬ ಧ್ಯೇಯದೊಂದಿಗೆ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಲೂಕಿನಲ್ಲಿ ಸ್ಕೌಟ್ಸ್ – ಗೈಡ್ಸ್‌ನ ವಿವಿಧ ಶಾಲೆಗಳ 1,500ಕ್ಕೂ ಅಧಿಕ ಮಕ್ಕಳಿದ್ದು ಇದರಲ್ಲಿ 50 ಅಧಿಕ ಮಕ್ಕಳು ಸ್ವಯಂಪ್ರೇರಿತ ರಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಎಪ್ರಿಲ್ ಮೊದಲ ವಾರದಿಂದಲೇ 10ಕ್ಕೂ ಅಧಿಕ ವಿಭಿನ್ನ ಜಾಗೃತಿ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ತಮ್ಮ ಮನೆಯ ಸುತ್ತಮುತ್ತ ಪರಿಸರದ ಮಂದಿಗೆ ತಾವೇ 1,000ಕ್ಕೂ ಅಧಿಕ ಬಟ್ಟೆ ಮಾಸ್ಕ್ ತಯಾರಿಸಿ ವಿತರಿಸುವ ಜತೆಗೆ ಹಿರಿಯರಿಗೆ ಮಾಸ್ಕ್ ಬಳಕೆಯ ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ. ಸ್ಯಾನಿಟೈಸರ್ ಬಳಕೆ, 20 ಸೆಕೆಂಡ್ ಕೈಗಳನ್ನು ತೊಳೆಯುವ ವಿಧಾನ ಸಹಿತ ಮರಗಳ-ಜಲ ಸಂರಕ್ಷಣೆ ಕುರಿತು ನೃತ್ಯ ಪ್ರದರ್ಶನ, ಪ್ರಾಣಿ ಪಕ್ಷಿಗಳಿಗೆ ಆಹಾರ ನೀರು ಒದಗಿಸುವುದು ಸೇರಿದಂತೆ ಹತ್ತು ಹಲವಾರು ಸಂದೇಶಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿಯೂ ಪ್ರಸಾರ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.
20 ಕ್ವಿಂಟಾಲ್ ಅಕ್ಕಿ ವಿತರಣೆ
ಸ್ಥಳೀಯ ಸಂಸ್ಥೆ ಮುಖ್ಯಸ್ಥರೊಂದಿಗೆ ಮಕ್ಕಳೆಲ್ಲ ಜತೆಗೂಡಿ, ತಾಲೂಕಿನ ಕೊರಗರ ಕಾಲನಿ ಸಹಿ ತ ಸಂಕಷ್ಟಕ್ಕೀಡಾದವರಿಗೆ ಒಟ್ಟು 20 ಕ್ವಿಂಟಾಲ್ ಅಕ್ಕಿ ವಿತರಿಸಿದ್ದಾರೆ. ಮಕ್ಕಳ ಈ ವಿಶೇಷ ಕಾರ್ಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೇವಾಕಾರ್ಯಗಳಿಂದಲೇ ಗುರುತಿಸಿ ಕೊಂಡಿರುವ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯು ಕಳೆದ ವರ್ಷ ಪ್ರವಾಹದ ಸಮಯದಲ್ಲಿ ಅಗತ್ಯ ಸೇವೆ ಒದಗಿಸಿತ್ತು. ಮುಂದಿನ ಹಂತದಲ್ಲಿ ಪೊಲೀಸ್, ಆರೋಗ್ಯ ಇಲಾಖೆ ಬಯಸಿದಲ್ಲಿ ಅಗತ್ಯ ತುರ್ತು ಸೇವೆ ಒದಗಿಸಲು ನಮ್ಮ ಸಂಸ್ಥೆ ಸಿದ್ಧವಾಗಿದೆ ಎಂದು ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪ್ರಮಿಳಾ ತಿಳಿಸಿದ್ದಾರೆ.