ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಯೋಜನೆ ಹಾಕಿಕೊಳ್ಳುವುದರೊಂದಿಗೆ ಆಸಕ್ತಿ ಇರುವ ವಿಷಯ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷ ಹೇಳಿದರು.
ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಆಯೋಜಿಸಿದ್ದ2020-21ರ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್ ಶಿಬಿರಕ್ಕೆ ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶ್ವಾಸಾರ್ಹ ಪುಸ್ತಕಗಳ ಪರಾಮರ್ಶೆಯನ್ನು ವಿಸ್ತೃತವಾಗಿ ಮಾಡಬೇಕು.
ಕೋವಿಡ್ ವೇಳೆಯೂಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಹಲವಾರು ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ ಆಯೋಜಿಸಿರುವುದು ಅಭಿನಂದನಾರ್ಹ. ವಿದ್ಯಾರ್ಥಿಗಳು ಸಮಯದ ಮಿತಿ ಹಾಕಿಕೊಂಡು ಪ್ರಶ್ನೆ ರೂಪಿಸಿ ಅದಕ್ಕೆ ಉತ್ತರ ನೀಡಬೇಕು. ಆಗ ನೀವು ಕೊಟ್ಟ ಉತ್ತರ ಸರಿ ಇದೆಯೋ ಇಲ್ಲವೋ ಎಂದು ನೋಡಿಕೊಂಡಾಗ ಖಚಿತವಾಗುತ್ತಾ ಹೋಗುತ್ತೀರಿ, ಆನಂತರ ಗೊಂದಲ ಇರುವ ವಿಷಯಕ್ಕೆ ಕೊನೆಯ ಎರಡು ತಿಂಗಳು ಹೆಚ್ಚು ಒತ್ತು ಕೊಟ್ಟರೆ ಅದನ್ನು ಸರಿಪಡಿಸಿಕೊಳ್ಳಬಹುದು ಎಂದು ಹೇಳಿದರು.
ಇದೇ ವೇಳೆ ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ಎಸ್.ಬಿ. ರವಿಕುಮಾರ್ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಂ.ಬಿ.ಚೆನ್ನಕೇಶವ, ನಗರ ಸಭೆ ಅಧಿಕಾರಿ ಎಂ. ಮಾನಸ, ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ಕುಲಸಚಿವ ಪ್ರೊ. ಲಿಂಗರಾಜಗಾಂಧಿ, ಹಣಕಾಸು ಅಧಿಕಾರಿ ಡಾ.ಖಾದರ್‌ಪಾಷ, ಜೈನಹಳ್ಳಿ ಸತ್ಯ ನಾರಾಯಣಗೌಡ ಇತರರಿದ್ದರು.
ಕನಿಷ್ಠ ಒಂದೂವರೆ ವರ್ಷದ ತಯಾರಿ ಅಗತ್ಯ : ನಗರ ಪೊಲೀಸ್ ಉಪ ಆಯುಕ್ತ ಡಾ.ಎ.ಎನ್. ಪ್ರಕಾಶ್‌ಗೌಡ ಮಾತನಾಡಿ, ಯಾವುದೇ ಪರೀಕ್ಷೆ ಎದುರಿಸುವಾಗ ತಾಳ್ಮೆ ಎನ್ನುವುದುಕಡ್ಡಾಯವಾಗಿ ಇರಲೇಬೇಕು. ಯುಪಿಎಸ್ಸಿ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಾಗ ಕನಿಷ್ಠ ಒಂದೂವರೆ ವರ್ಷದ ತಯಾರಿ ಬೇಕಾಗು ತ್ತದೆ. ತಾಳ್ಮೆ ಜತೆಗೆ ನಿಖರ ತಯಾರಿ ಇದ್ದರೆ ಯಶಸ್ಸು ನಿಮ್ಮದಾಗುತ್ತದೆ ಎಂದರು.ಕೇವಲ ವೈದ್ಯಕೀಯ ಇಲ್ಲವೇ ಎಂಜಿನಿಯರಿಂಗ್ ಮುಗಿಸಿದವರು ಐಎಎಸ್ ಪಾಸಾಗಬಹುದು. ಬೇರೆ ವಿಷಯಗಳನ್ನು ವ್ಯಾಸಂಗ ಮಾಡಿದವರೆಲ್ಲ ದಡ್ಡರು ಎಂದು ಭಾವಿಸುವ ಅಗತ್ಯವೇ ಇಲ್ಲ. ನಿಮ್ಮಲ್ಲಿರುವ ಆಸಕ್ತಿ ಆಧರಿಸಿ, ಪದವಿ ಪಡೆದ ವಿಷಯಗಳನ್ನೆ ಅಲ್ಲದೆ ಇತರ ಮೂಲಗಳಿಂದ ವಿಷಯ ಸಂಗ್ರಹಣೆ ಮಾಡಿಕೊಂಡಾಗ ಪರೀಕ್ಷೆಗೆ ತಯಾರಿ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.