ಇಂಡಿ: ಕಳೆದ ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದು ಕಳೆದ ಬಾರಿ ಕಬ್ಬು ನುರಿಸಲು ಪ್ರಾರಂಭಿಸಿದ ತಾಲೂಕಿನ ಮರಗೂರದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಫೆ. 24ರಂದು ಚುನಾವಣೆ ನಿಗದಿಯಾಗಿದ್ದು ಘಟಾನುಘಟಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟು 55 ನಾಮಪತ್ರ ಸಲ್ಲಿಕೆಯಾಗಿದ್ದು ಪರಿಶಿಷ್ಟ ಪಂಗಡದ ಕ್ಷೇತ್ರಕ್ಕೆ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದರೆ ನಾಮಪತ್ರ ತಪಾಸಣೆ ವೇಳೆ ಒಟ್ಟು 3 ನಾಮಪತ್ರ ತಿರಸ್ಕೃತವಾಗಿದ್ದು 53 ನಾಮಪತ್ರಗಳು ಕ್ರಮಬದ್ಧವಾಗಿವೆ. ಶಂಕ್ರಪ್ಪ ಹೂಗಾರ, ಹಾಜಿಮಲಂಗ ವಾಲೀಕಾರ, ಶ್ರೀಮಂತ
ಕಾಪ್ಸೆ ನಾಮಪತ್ರಗಳು ತಿರಸ್ಕೃತಗೊಂಡಿವೆ. ಫೆ. 18 ಮಧ್ಯಾಹ್ನ 3ರವರೆಗೆ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶವಿದೆ.
ಒಂದೆಡೆ ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ಸಕ್ಕರೆ ಕಾರ್ಖಾನೆಯಲ್ಲಿ ರಾಜಕೀಯ ಬೇಡ. ಅವಿರೋಧವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಹಕರಿಸಿ ಕಾರ್ಖಾನೆ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮಾಡಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡೋಣ. ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಮತದಾನದ ಮೇಲೆಯೇ ಅಭ್ಯರ್ಥಿಗಳ ಆಯ್ಕೆಯಾಗಲಿ ಎಂದು ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ ಹೇಳುತ್ತಿದ್ದಾರೆ.
ಚುನಾವಣೆಗೆ ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ, ಮಾಜಿ ಶಾಸಕ ರವಿಕಾಂತ ಪಾಟೀಲರ ಪತ್ನಿ ಭಾರತಿ ಪಾಟೀಲ, ಸಂಕೇತ ಬಗಲಿ, ಬಳ್ಳೊಳ್ಳಿಯ ಜೆಡಿಎಸ್ ಮುಖಂಡ ಎಂ.ಆರ್. ಪಾಟೀಲ ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಿದ್ದಾರೆ.
ಒಂದು ವೇಳೆ ಚುನಾವಣೆ ನಡೆದರೆ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಮಾಜಿ ಶಾಸಕ ಡಾ| ಸಾರ್ವಭೌಮ ಬಗಲಿ ನಡುವೆ ಪೈಪೋಟಿ ನಡೆಯಲಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟು 13 ನಿರ್ದೇಶಕ ಹುದ್ದೆಗಳಿದ್ದು ಅದರಲ್ಲಿ 1 ಸರ್ಕಾರ, 1 ಆರ್ಥಿಕ ಸಂಸ್ಥೆ ಇದೆ. ಇನ್ನು ಚುನಾಯಿತರಾಗುವವರು 11 ಜನರಲ್ಲಿ ಸಾಮಾನ್ಯ ಕ್ಷೇತ್ರಕ್ಕೆ 3, ಹಿಂದುಳಿದ ವರ್ಗ 2, ಎಸ್ .ಸಿ 1, ಎಸ್.ಟಿ, 1 ಮಹಿಳಾ 2, ಕಬ್ಬು ಬೆಳೆಗಾರರಲ್ಲದವರ 1, ಸಂಘ ಸಂಸ್ಥೆಗಳಿಂದ 1 ಹುದ್ದೆಗಳಿಗೆ ಚುನಾವಣೆ ನಡೆಯಬೇಕಿದೆ.
ಉಮೇಶ ಬಳಬಟ್ಟಿ