Advertisement

ಕುಮಾರ-ಶಶಿಕಾಂತ ಬಣದ ಪೈಪೋಟಿ

12:15 PM Sep 18, 2018 | |

ವಿಜಯಪುರ: ರಾಜ್ಯದ ಪ್ರತಿಷ್ಠಿತ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಆಡಳಿತ ಮಂಡಳಿಯ 16 ಸ್ಥಾನಗಳ ಚುನಾವಣೆಗಾಗಿ ಸೆ. 18ರಂದು ಮತದಾನ ನಡೆಯಲಿದೆ. ಹಾಲಿ ಅಧ್ಯಕ್ಷ ಕುಮಾರ ದೇಸಾಯಿ ಹಾಗೂ ಮಾಜಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಶಿರಬೂರ ಬಣಗಳ ಮಧ್ಯೆ ಪೈಪೋಟಿ ಹೆಚ್ಚಿದೆ. ಎರಡು ಬಣಗಳು ಪರಸ್ಪರ ಭ್ರಷ್ಟಾಚಾರ, ಅವ್ಯವಹಾರದ ಆರೋಪ-ಪ್ರತ್ಯಾರೋಪ ಮಾಡುತ್ತ, ತಮ್ಮ ಬಣಕ್ಕೆ ಆಡಳಿತ ನಡೆಸುವ ಅಧಿಕಾರ ದೊರೆಯುವ
ವಿಶ್ವಾಸದಲ್ಲಿವೆ. 

Advertisement

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, 17 ಸ್ಥಾನಗಳಲ್ಲಿ 1 ಸ್ಥಾನ ಅವಿರೋಧ ಆಯ್ಕೆಯಾಗಿದೆ. ಹೀಗಾಗಿ 16 ಸ್ಥಾನಗಗಳಿಗೆ ಕಣದಲ್ಲಿರುವ 36 ಅಭ್ಯರ್ಥಿಗಳ ಹಣೆಬರಹ ಬರೆಯಲು ಸೆ. 18ರಂದು ಮತದಾನ ನಡೆಯಲಿದೆ.

ಚುನಾವಣೆ ಘೋಷಣೆ ಆಗುತ್ತಲೇ ಹಾಲಿ ಅಧ್ಯಕ್ಷ ಕುಮಾರ ದೇಸಾಯಿ ಹಾಗೂ ಮಾಜಿ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಬಣಗಳು ಮತದಾರರ ಮನೆ ಬಾಗಿಲಿಗೆ ತೆರಳಿ ಪ್ರಚಾರ ನಡೆಸಿದ್ದವು. ಆದರೆ ಮತದಾನಕ್ಕೆ 60 ಗಂಟೆ ಬಾಕಿ ಇರುವಾಗ ಎರಡೂ ಬಣಗಳು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. 

ಪರಸ್ಪರ ಎರಡೂ ಬಣಗಳ ನಾಯಕರು ಭ್ರಷ್ಟಾಚಾರ, ಅವ್ಯವಹಾರ ಅರೋಪ ಮಾಡುತ್ತ ಕೆಸರು ಎರಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ದೇಶದ ಸಹಕಾರಿ ಕಾರ್ಖಾನೆ ವಲಯದಲ್ಲಿ ಪ್ರತಿಷ್ಠಿಸಿತ ಸ್ಥಾನ ಹೊಂದಿರುವ ನಂದಿ ಸಹಕಾರಿ ಕಾರ್ಖಾನೆ ಆಡಳಿತ ಕೈಗೆ ಪಡೆಯಲು ಎರಡೂ ಬಣಗಳು ಪೈಪೋಟಿ ನಡೆಸುತ್ತಿರುವುದಕ್ಕೆ ಸಾಕ್ಷಿ ನೀಡಿವೆ.

ಸಹಕಾರಿ ಕಾರ್ಖಾನೆಯಲ್ಲಿ 10 ಸಾವಿರಕ್ಕೂ ಅಧಿಕ ಸದಸ್ಯರಿದ್ದರೂ, 2013ರ ಸಹಕಾರಿ ಕಾಯ್ದೆಯ ತಿದ್ದುಪಡಿ ಕಾರಣ ಸತತ 5 ಸಾಮಾನ್ಯ ಸಭೆಗೆ ಗೈರಾದ ನಿಯಮದಂತೆ ಸುಮಾರು 8 ಸಾವಿರ ಸದಸ್ಯರು ಮತದಾನದ ಅವಕಾಶ ವಂಚಿತರಾಗಿದ್ದಾರೆ. ಪರಿಣಾಮ ಈ ಬಾರಿ ಕೇವಲ 2017 ಸದಸ್ಯರಿಗೆ ಮಾತ್ರ ಮತದಾನ ಮಾಡುವ ಅವಕಾಶ ದಕ್ಕಿದೆ.

Advertisement

ಚುನಾವಣೆ ನಡೆಯುವ ಅ-ವರ್ಗ ಕಬ್ಬು ಬೆಳೆಗಾರರ ಸದಸ್ಯ ಮತಕ್ಷೇತ್ರದ 15 ಸ್ಥಾನಗಳಲ್ಲಿ ಸಾಮಾನ್ಯ 9 ಸ್ಥಾನಕ್ಕೆ 22 ಅಭ್ಯರ್ಥಿಗಳು, ಪರಿಶಿಷ್ಟ ಜಾತಿಗೆ ಮೀಸಲಾದ 1 ಸ್ಥಾನಕ್ಕೆ 2, ಪರಿಶಿಷ್ಟ ಪಂಗಡಕ್ಕೆ ಮೀಸಲಾದ 1 ಸ್ಥಾನಕ್ಕೆ 2, ಮಹಿಳಾ ಮೀಸಲಾದ 2 ಸ್ಥಾನಕ್ಕೆ 4, ಹಿಂದುಳಿದ-ಅ ವರ್ಗಕ್ಕೆ ಮೀಸಲಾಗಿರುವ 2 ಸ್ಥಾನಕ್ಕೆ 4, ಸದಸ್ಯ ಸಹಕಾರಿ ಸಂಘಗಳ ಮತಕ್ಷೇತ್ರ ಹಿಂದುಳಿದಬ-ವರ್ಗದ 1 ಸ್ಥಾನ ಇಬ್ಬರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, ಚುನವಣೆ ಎದುರಿಸುತ್ತಿದ್ದಾರೆ. ಕಬ್ಬು ಬೆಳೆಗಾರರಲ್ಲದವರ ಡ ವರ್ಗದ ಕ್ಷೇತ್ರದಿಂದ ಆನಂದ ಮಂಗಳವೇಡೆ ಅವಿರೋಧ ಆಯ್ಕೆಯಾಗಿದ್ದಾರೆ. ಕುಮಾರ ದೇಸಾಯಿ ಬಣದ ಬಸವರಾಜ ಜಂಬಗಿ ಹಾಗೂ ಬಣ ರಹಿತ ಅಭ್ಯರ್ಥಿ ಅರವಿಂದ ಮಂಗಳವೇಡೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆದ ಕಾರಣ ಆನಂದ ಮಂಗಳವೇಡೆ ಅವಿರೋಧ ಆಯ್ಕೆ ಆಗಿದ್ದಾರೆ.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಸಹಕಾರಿ ರಂಗದಲ್ಲೇ ಅತ್ಯಂತ ಆರ್ಥಿಕ ಬಲಿಷ್ಠ ಸಕ್ಕರೆ ಕಾರ್ಖಾನೆ ಎಂಬ ಹಿರಿಮೆ ಹೊಂದಿತ್ತು. ಆದರೆ ಆಡಳಿತ ನಿರ್ವಹಣೆಯ ಸ್ವತಂತ್ರ ಸಾಮರ್ಥ್ಯ ಇಲ್ಲದ ಹಾಲಿ ಅಧ್ಯಕ್ಷ ಕುಮಾರ ದೇಸಾಯಿ ಆಡಳಿತ 5 ವರ್ಷಗಳಲ್ಲಿ ಸಕ್ಕರ ಹಗರಣ, 100 ಕೋಟಿ ರೂ. ಮೀರಿದ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಆಡಳಿತ ಮಂಡಳಿ ಬದಲಿಸಿ ತಮ್ಮ ಬಣಕ್ಕೆ ಮತದಾರ ಬೆಂಬಲ ನೀಡುವ ವಿಶ್ವಾಸವಿದೆ.
ಶಶಿಕಾಂತಗೌಡ ಪಾಟೀಲ ಶಿರಬೂರು, ಮಾಜಿ ಅಧ್ಯಕ್ಷ

ಶಶಿಕಾಂತಗೌಡ ಅವರು ಮಾಡಿದ್ದ ಸಾಲದಿಂದ ತತ್ತರಿಸಿದ್ದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸುಧಾರಣೆ ಮಾಡಿದ್ದಲ್ಲದೇ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದೇವೆ. ಕಬ್ಬು ನುರಿಸುವ ಸಾಮರ್ಥ್ಯ ವೃದ್ಧಿಸಲು ಯೋಜನೆ ರೂಪಿಸಿದ್ದು,
ಹಲವು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಹೀಗಾಗಿ ಪ್ರಜ್ಞಾವಂತ ಮತದಾರರು ನಮ್ಮ ಬಣವನ್ನು ಆಯ್ಕೆ ಮಾಡಿ ವಿರೋಧಿಬಣ ಮಾಡುತ್ತಿರುವ ಆರೋಪಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ.
ಕುಮಾರ ದೇಸಾಯಿ, ಹಾಲಿ ಅಧ್ಯಕ್ಷ

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next