ಸೈದಾಪುರ: ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ನೂತನ ಸದಸ್ಯರು ಅಧ್ಯಕ್ಷ ಗದ್ದುಗೆಗಾಗಿ ತೆರೆಮರೆಯ ಕಸರತ್ತು ಪ್ರಾರಂಭಿಸಿದ್ದಾರೆ. ಒಟ್ಟು 25 ಗ್ರಾಪಂ ಸ್ಥಾನಗಳು ಇದ್ದು, ಚುನಾವಣೆಯಲ್ಲಿ ಪಟ್ಟಣದ 9 ಸದಸ್ಯರು, ಸೈದಾಪುರ ಗ್ರಾಮದ 5 ಸದಸ್ಯರು, ಬಾಲಛೆಡ್ 6, ಕ್ಯಾತ್ನಾಳ್ 2, ರಾಚನಹಳ್ಳಿ, ರಾಂಪೂರ ಮತ್ತು ಶಟ್ಟಿಹಳ್ಳಿಯಿಂದ ತಲಾ ಓರ್ವ ಸದಸ್ಯರು ಗೆಲುವು ಸಾಧಿಸಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಎಸ್‌ಟಿ ಮಹಿಳೆ ಮೀಸಲಾತಿ ಪ್ರಕಟವಾಗಿದೆ.
ಕಳೆದ ಅವಧಿ ಯಲ್ಲಿ ಅಧ್ಯಕ್ಷ ಸ್ಥಾನವನ್ನು ಬಾಲಛೆಡ ಗ್ರಾಮಕ್ಕೆ ಆದ್ಯತೆ ನೀಡಿರುವುದರಿಂದ ಈ ಬಾರಿ ಸೈದಾಪುರಕ್ಕೆ ಅಧಕ್ಷ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ಇಲ್ಲಿರುವ 14 ಸದಸ್ಯರಲ್ಲಿ ಪೈಪೋಟಿ ಏರ್ಪಟ್ಟಂತೆ ಕಾಣುತ್ತಿದೆ. ಸೈದಾಪುರನ ಎಲ್ಲಾ ಸದಸ್ಯರು ಚಂದ್ರುಗೌಡನ
ಮನವೊಲಿಸಲು ಕಸರತ್ತು ನಡೆದಿದೆ. ಉಪಾಧ್ಯಕ್ಷ ಸ್ಥಾನವು ಎಸ್‌ಟಿ ಮಹಿಳೆಗೆ ಮೀಸಲಾಗಿದೆ.
ಇದರಿಂದ ಇಲ್ಲಿ 25 ಸದಸ್ಯರ ಪೈಕಿ ಓರ್ವ ಎಸ್‌ಟಿ ಮಹಿಳೆ ಇರುವುದರಿಂದ ನೇತ್ರಾವತಿ ತಿಮ್ಮಾರೆಡ್ಡಿ ದೊರೆಗೆ ಉಪಾಧ್ಯಕ್ಷ ಸ್ಥಾನ ಖಚಿತವಾಗಿದೆ.
ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಪಕ್ಷಗಳಿಗಿಂತ ವ್ಯಕ್ತಿಯ ಪ್ರಭಾವ ಮೂಲಕ ಚುನಾವಣೆ ನಡೆದಿದೆ. ಆದ್ದರಿಂದ ಇಲ್ಲಿನ ಜೆಡಿಎಸ್ ಯುವ ಮುಖಂಡ ಚಂದ್ರುಗೌಡ ಮಾಲಿ ಪಾಟೀಲ್ ಅವರ ಪರಿಶ್ರಮದಿಂದ 9 ಸದಸ್ಯರನ್ನು ಅವಿರೋಧ ಮತ್ತು ಐವರು ಸದಸ್ಯರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಸಹಕರಿಸಿದ್ದಾರೆ.
ಆದ್ದರಿಂದ ಈ ಬಾರಿಯು ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಅವರನ್ನು ಅಧ್ಯಕ್ಷ ಗದ್ದುಗೆಗೆ ಏರಿಸಲು ಚಂದ್ರುಗೌಡ ಮುಂದಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಾತಿ ಲೆಕ್ಕಾಚಾರ ಪ್ರಾರಂಭ: ಸೈದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಕಬ್ಬಲಿಗ ಕೂಲಿ ಮತ್ತು ಕುರುಬ ಸಮಾಜದ ಮತಗಳು ಹೆಚ್ಚು ಇರುವುದರಿಂದ ಕಳೆದ ಅವಧಿ ಯಲ್ಲಿ ಕುರುಬ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡಿದ್ದು. ಈ ಬಾರಿ ಕಬ್ಬಲಿಗ ಕೂಲಿ ಸಮಾಜಕ್ಕೆ ಅಧ್ಯಕ್ಷ ಸ್ಥಾನ ದೊರಕಿಸಿ ಕೊಡಲು ಸಮಾಜದ ಮತ್ತು ಕೆಲ ರಾಜಕೀಯ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಆದರೆ, ಕೆಲ ಪ್ರಭಾವಿ ರಾಜಕಾರಣಿಗಳು ಲಿಂಗಾಯತ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಈಗಾಗಲೇ ಶರಣಗೌಡ
ಕಂದಕೂರ ಅವರಿಗೆ ಮನವಿ ಮಾಡಿದ್ದಾರೆ.