ಬೆಂಗಳೂರು: ಕಾಂಗ್ರೆಸ್‌ನಲ್ಲಿ ಟಿಕೆಟ್ ಲಾಬಿ ಜೋರಾಗಿದೆ. ಸುಮಾರು ಅರ್ಧಕ್ಕೂ ಹೆಚ್ಚು ಹಾಲಿ ಶಾಸಕರ ಕ್ಷೇತ್ರಗಳಲ್ಲೂ ಇತರೆ ಆಕಾಂಕ್ಷಿಗಳು ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ.
ಕಿತ್ತೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಬಿ.ಇನಾಮ್‌ದಾರ್ ಜತೆಗೆ ಡಾ. ಮಹಾಂತೇಶ್ ಚರಂತಿಮs… ಆಕಾಂಕ್ಷಿಯಾಗಿದ್ದು ಸಂಸದ ಪ್ರಕಾಶ್ ಹುಕ್ಕೇರಿ ಅವರ ಪರ ಲಾಬಿ ಮಾಡುತ್ತಿದ್ದಾರೆ. ಬಳ್ಳಾರಿ ನಗರದಲ್ಲಿ ಹಾಲಿ ಶಾಸಕ ಅನಿಲ್ ಲಾಡ್ ಇದ್ದರೂ ದಿವಾಕರ ಬಾಬು ಪುತ್ರ ಹನುಮ ಬಾಬು, ಸೂರ್ಯ ನಾರಾಯಣ ರೆಡ್ಡಿ ಆಕಾಂಕ್ಷಿಗಳಾಗಿದ್ದು, ಸೂರ್ಯ ನಾರಾಯಣ ರೆಡ್ಡಿ ಪರ ಖುದ್ದು ಸಿಎಂ ಸಿದ್ದರಾಮಯ್ಯ ವಕಾಲತ್ತು ವಹಿಸಿದ್ದಾರೆ ಎನ್ನಲಾಗಿದೆ. ಹೂವಿನ ಹಡಗಲಿ ಕ್ಷೇತ್ರದಲ್ಲಿ ಹಾಲಿ ಶಾಸಕ ಪಿ. ಟಿ. ಪರಮೇಶ್ವರ್ ನಾಯ್ಕ ಜತೆಗೆ ಕೃಷ್ಣಾ ನಾಯಕ್ ಆಕಾಂಕ್ಷಿಯಾಗಿದ್ದು ಎಂ.ಪಿ.ರವೀಂದ್ರ ಅವರ ಪರ ಲಾಬಿ ಮಾಡುತ್ತಿದ್ದಾರೆ.
ಬಿ.ಬಿ.ಚಿಮ್ಮನಕಟ್ಟಿ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ನಾಗರಾಜ್ ಪಾಟೀಲ್ ಎಂಬುವರು ಆಕಾಂಕ್ಷಿಯಾಗಿದ್ದು ಸಿಎಂ ಅವರ ಆಪ್ತರಾಗಿದ್ದಾರೆ. ಕಾಗೋಡು ತಿಮ್ಮಪ್ಪ ಪ್ರತಿನಿಧಿಸುವ ಸಾಗರ ಕ್ಷೇತ್ರದಲ್ಲಿ ಕೆ.ದಿವಾಕರ್ ಆಕಾಂಕ್ಷಿಯಾಗಿದ್ದು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ.
ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ರಾಮಕೃಷ್ಣ ಹಾಲಿ ಶಾಸಕರಾಗಿದ್ದು ಅವರಿಗೆ ಅನಾರೋಗ್ಯ ಕಾರಣ ಪ್ರಿಯಾಂಕ್ ಖರ್ಗೆ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದು, ಹೈಕಮಾಂಡ್ ಒಪ್ಪಿದರೆ ಕ್ಷೇತ್ರ ಬದಲಾವಣೆ ಚಿಂತನೆಯಲ್ಲಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಅಂಬರೀಶ್ ಹಾಲಿ ಶಾಸಕರಾಗಿದ್ದರೂ ಮಾಜಿ ಸಚಿವ ಆತ್ಮಾನಂದ, ನಟಿ ರಮ್ಯಾ ತಾಯಿ ರಂಜಿತಾ ಆಕಾಂಕ್ಷಿಗಳಾಗಿದ್ದಾರೆ. ಮಾಯಕೊಂಡ ಕ್ಷೇತ್ರದಲ್ಲಿ ಶಿವಮೂರ್ತಿ ನಾಯಕ್ ಹಾಲಿ ಶಾಸಕರಾಗಿದ್ದರೂ ಹೀರಾ ನಾಯಕ್ ಆಕಾಂಕ್ಷಿಯಾಗಿದ್ದಾರೆ. ಶಾಂತಿ ನಗರ ಕ್ಷೇತ್ರದಲ್ಲಿ ಶಾಸಕ ಎನ್.ಎ. ಹ್ಯಾರಿಸ್‌ಗೆ ಟಿಕೆಟ್ ತಪ್ಪಲಿದೆ ಎಂಬ ಮಾತು ಇರುವುದರಿಂದ ಅಲ್ಲಿ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ, ಆರ್.ವಿ.ವೆಂಕಟೇಶ್ ಆಕಾಂಕ್ಷಿಯಾಗಿದ್ದು, ವೆಂಕಟೇಶ್ ಪರ ಬಿ.ಕೆ. ಹರಿಪ್ರಸಾದ್ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೂಡಬಿದರೆ ಕ್ಷೇತ್ರದಲ್ಲಿ ಅಭಯ ಚಂದ್ರ ಜೈನ್ ಹಾಲಿ ಶಾಸಕರಾಗಿದ್ದರೂ ಐವಾನ್ ಡಿಸೋಜಾ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ.
ಮೂರು ಹಂತದ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು: ಮಾಜಿ ಸಿಎಂ ವೀರಪ್ಪ ಮೊಯ್ಲಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಸಭೆ ಬುಧವಾರ ನಡೆದು 3 ಹಂತದ ಪ್ರಣಾಳಿಕೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲಾಮಟ್ಟದ ವಿಷಯಗಳ ಕುರಿತು ಪ್ರತಿ ಜಿಲ್ಲೆಗೊಂದು ಪ್ರಣಾಳಿಕೆ, ವಿಭಾಗವಾರು ಹಾಗೂ ರಾಜ್ಯಮಟ್ಟದ ಪ್ರಣಾಳಿಕೆಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಭಾನುವಾರ ಅಂತಿಮ ಸಭೆ ನಡೆಸಿ ರಾಹುಲ್ ಗಾಂಧಿ ಕೈಯಿಂದ ಪ್ರಣಾಳಿಕೆ ಬಿಡುಗಡೆ ಮಾಡಿಸಲು ನಿರ್ಧರಿಸಲಾಗಿದೆ.