Advertisement

ಕನ್ನಡ ಪುಸ್ತಕಗಳ ರಿಯಾಯ್ತಿ ಮಾರಾಟಕ್ಕೆ ಪೈಪೋಟಿ

01:26 PM Nov 09, 2020 | Suhan S |

ಬೆಂಗಳೂರು: ಕೋವಿಡ್ ಲಾಕ್‌ಡೌನ್‌ ನಂತರ ಡಿಜಿಟಲ್‌ ಓದಿಗೆ ಶರಣಾಗಿದ್ದ ಓದುಗರನ್ನು ಮತ್ತೆ ಪುಸ್ತಕಗಳತ್ತ ಸೆಳೆಯಲು ಸರ್ಕಾರದ ವಿವಿಧ ಪ್ರಾಧಿಕಾರಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಖಾಸಗಿ ಪ್ರಕಾಶನಗಳು ಪುಸ್ತಕ ಖರೀದಿಗೆ ರಿಯಾಯ್ತಿ ಪ್ಯಾಕೇಜ್‌ಘೋಷಿಸುವಲ್ಲಿ ಪೈಪೋಟಿಗೆ ಇಳಿದಿವೆ.

Advertisement

ರಾಷ್ಟ್ರಕವಿ ಕುವೆಂಪು, ಜಿ.ಎಸ್‌.ಶಿವರುದ್ರಪ್ಪ, ಎಸ್‌.ಎಲ್‌.ಭೈರಪ್ಪ, ಯು.ಆರ್‌.ಅನಂತಮೂರ್ತಿ, ಪೂರ್ಣಚಂದ್ರತೇಜಸ್ವಿ ಸೇರಿದಂತೆ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ಹೆಸರಾಂತ ಸಾಹಿತಿ, ಕಾದಂಬರಿಕಾರರ ಜನಪ್ರಿಯ ಪುಸ್ತಕಗಳ ಗುತ್ಛವನ್ನು ಓದುಗರ ಮುಂದಿಟ್ಟಿವೆ. ಓದುಗರಿಗೆ ರಿಯಾಯ್ತಿ ಪ್ಯಾಕೇಜ್‌ ಘೋಷಿಸಲು ಕನ್ನಡ ರಾಜ್ಯೋತ್ಸವ ಸಂದರ್ಭವಾಗಿ ಒದಗಿಬಂದಿದ್ದು, ಕೊರೊನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ವೆಬ್‌ಸೈಟ್‌ ಮೂಲಕ ಆರ್ಡರ್‌ ಪಡೆದು ಮನೆ ಬಾಗಿಲಿಗೆ ಓದುಗರ ನೆಚ್ಚಿನ ಕೃತಿ ತಲುಪಿಸಲು ಮುಂದಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಗಳು ಕನ್ನಡ ಪುಸ್ತಕ ಪ್ರಿಯರಿಗಾಗಿ ಶೇ.50 ರಿಯಾಯ್ತಿ ಘೋಷಿಸಿದ್ದರೆ ಕನ್ನಡ ಸಾಹಿತ್ಯ ಪರಿಷತ್ತು ಶೇ.75ರಷ್ಟು ರಿಯಾಯ್ತಿ ಪ್ರಕಟಿಸಿದೆ.

ಖಾಸಗಿ ಪ್ರಕಾಶನಗಳೂ ಸಹ ತಾವೇನೂ ಕಡಿಮೆ ಇಲ್ಲ ಎಂಬಂತೆ ರಿಯಾಯ್ತಿ ಜೊತೆಗೆ ಕೋವಿಡ್ ಸುರಕ್ಷತೆ ಜಾಗೃತಿಗಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಸಹ ನೀಡುತ್ತಿವೆ. ಕನ್ನಡ ಭವನದ “ಸಿರಿಗನ್ನಡ ಪುಸ್ತಕ ಮಳಿಗೆ’ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮತ್ತುಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ಸೌಲಭ್ಯ ದೊರೆಯಲಿದೆ.

ಓದುಗರ ಆಯ್ಕೆ ಸಮೃದ್ಧ ಬೆಳೆ’ ಯೋಜನೆ: ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಓದುಗರನ್ನು ತನ್ನತ್ತ ಸೆಳೆಯುವ ಸಲುವಾಗಿ ಸಪ್ನ ಬುಕ್‌ ಹೌಸ್‌ ಶೇ.10ರಿಂದ 20ರ ವರೆಗೆ ರಿಯಾಯ್ತಿ ನೀಡಿದೆ. ಅಲ್ಲದೆ ಸಪ್ನ ಸದಸ್ಯರಕಾರ್ಡ್‌ ಸೌಲಭ್ಯವನ್ನು ಓದುಗರಿಗೆ ನೀಡಿದ್ದು, ಈ ಕಾರ್ಡ್‌ ಮೂಲಕ ಕನ್ನಡ ಪುಸ್ತಕಗಳ ಮೇಲೆ ಶೇ.10ರ ರಿಯಾಯ್ತಿ ಪಡೆಯಬಹುದಾಗಿದೆ. ಜತೆಗೆ “ಓದುಗರ ಆಯ್ಕೆ ಸಮೃದ್ಧ ಬೆಳೆ’ ಯೋಜನೆ ಜಾರಿಗೆ ತಂದಿದ್ದು ಪುಸ್ತಕ ಪ್ರದರ್ಶನದಲ್ಲಿರುವ ಕೃತಿಗಳನ್ನು ಶೇ.10 ರಿಯಾಯ್ತಿಯಲ್ಲಿ ಖರೀದಿಸ ಬಹುದಾಗಿದೆ. ನವ ಕರ್ನಾಟಕ ಪುಸ್ತಕ ಪುಸ್ತಕ ಪ್ರಕಾಶನ ತನ್ನ 60ನೇ ಸಂಭ್ರಮದ ಹಿನ್ನೆಲೆಯಲ್ಲಿ ಮತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾನು ಪ್ರಕಟಿಸಿದ 400 ಪುಸ್ತಕಗಳ ಮೇಲೆ ಶೇ.50 ರಿಯಾಯ್ತಿ ಘೋಷಿಸಿದೆ. ಅಲ್ಲದೆ ಬೇರೆ-ಬೇರೆ ಪ್ರಕಾರದ ಸಾಹಿತ್ಯ ಪುಸ್ತಕಗಳನ್ನು ಶೇ.20ರ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಿದೆ.

ರಿಯಾಯ್ತಿ ಆಕರ್ಷಣೆ: ಅಂಕಿತ ಪುಸ್ತಕ ಪ್ರಕಾಶನವು ಶೇ.10ರಿಂದ 20ರ ರಿಯಾಯ್ತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಿದೆ ಎಂದು ಪ್ರಕಾಶನದ ಮಾಲೀಕರಾದ ಪ್ರಕಾಶ ಕಂಬತ್ತಳ್ಳಿ ತಿಳಿಸಿದ್ದಾರೆ. ಇಂಟರ್‌ ನ್ಯಾಷನಲ್‌ ಬುಕ್‌ ಹೌಸ್‌ ಕೂಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶೇ.20ರ ರಿಯಾಯ್ತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲು ಮುಂದಾಗಿದೆ.

Advertisement

ಎಲ್ಲೆಲ್ಲಿ ಎನೇನು? ಎಷ್ಟೆಷ್ಟು? :

  • ಕನ್ನಡ ಪುಸ್ತಕ ಪ್ರಾಧಿಕಾರದ //www.kannadapustakapradhikara.com  ಗೆ ಭೇಟಿ ನೀಡಿದರೆ ಅಲ್ಲಿ ಓದುಗರು ತಮಗೆ ಬೇಕಾದ ಪುಸ್ತಕಗಳನ್ನು ಖರೀದಿಸ ಬಹುದಾಗಿದೆ.
  • ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕೂಡ 65ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶೇ.50ರಿಯಾಯ್ತಿ ದರದಲ್ಲಿ ತನ್ನೆಲ್ಲಾ ಪ್ರಕಟಿತ ಪುಸ್ತಕಗಳನ್ನು ಓದುಗರಿಗೆ ನೀಡಲಿದೆ. ಆಸಕ್ತರು, //kuvempubhashabharathi.org ಇಲ್ಲಿಗೆ ಭೇಟಿ ನೀಡಬಹುದಾಗಿದೆ.
  • ಸಾಹಿತ್ಯಅಕಾಡೆಮಿಯೂ ತನ್ನೆಲ್ಲ ಪುಸ್ತಕಗಳ ಮೇಲೆ ಶೇ.50ರ ರಿಯಾಯ್ತಿ ಘೋಷಣೆ ಮಾಡಿದ್ದು ಈ ತಿಂಗಳ ವರೆಗೂ ಈ ರಿಯಾಯ್ತಿ ಇರಲಿದೆ. ಪುಸ್ತಕಗಳ ಪಟ್ಟಿ ಅಕಾಡೆಮಿಯ ವೆಬ್‌ಸೈಟ್‌ www.karnatakasahithyaacademy.org   ನಲ್ಲಿ ಲಭ್ಯವಿದೆ
  • ಕನ್ನಡ ಸಾಹಿತ್ಯ ಪರಿಷತ್ತು ಕೂಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ತಾನು ಪ್ರಕಟಿಸಿದ ಪುಸ್ತಕಗಳ ಮೇಲೆ ಶೇ.10 ರಿಂದ 75ರ ವರೆಗೆ ರಿಯಾಯ್ತಿ ಪ್ರಕಟಿಸಿದೆ. ಆಸಕ್ತರು ಮಾಹಿತಿಗೆ //www.kasapa.in ಅನ್ನು ಸಂಪರ್ಕಿಸಬಹುದು. ಹಾಗೆಯೇ ಬೆಂಗಳೂರು ವಿವಿ ಕೂಡ ಶೇ.50ರ ದರದಲ್ಲಿ ತನ್ನೆಲ್ಲಾ ಪುಸ್ತಕಗಳನ್ನು ನೀಡಲು ಮುಂದಾಗಿದೆ.

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next