ಗದಗ: ಕಾಂಗ್ರೆಸ್‌ನ ಆಂತರಿಕ ಒಪ್ಪಂದಂತೆ ನಗರಸಭೆ ಅಧ್ಯಕ್ಷ ಬಿ.ಬಿ. ಅಸೂಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ಇನ್ನುಳಿದ ಅವಧಿಗೆ ಅಧ್ಯಕ್ಷ ಗಾದಿಗೇರಲು ಆಕಾಂಕ್ಷಿಗಳ ತೆರೆಮರೆ ಕಸರತ್ತು ಜೋರಾಗಿದೆ. ಒಟ್ಟು 35 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ 21 ಸ್ಥಾನದೊಂದಿಗೆ ಅಧಿಕಾರ ಹಿಡಿದಿದೆ. ಇನ್ನುಳಿದಂತೆ ಬಿಜೆಪಿ 12 ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಆದರೆ ಪಕ್ಷೇತರ ಸದಸ್ಯರೂ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರಿಂದ ಆಡಳಿತಾರೂಢ ಪಕ್ಷದ ಸದಸ್ಯ ಬಲ 23ಕ್ಕೆ ಹೆಚ್ಚಿದೆ.
ನಗರಸಭೆ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಅಧಿಕಾರ ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಅದರಂತೆ ಪಕ್ಷದಲ್ಲಿನ ಒಳಒಪ್ಪಂದಂತೆ ಮೊದಲ ಅವಧಿಯಲ್ಲಿ ರುದ್ರಮ್ಮ ಕರಿಕಲಮಟ್ಟಿ ಹಾಗೂ ಶಿವಲೀಲಾ ಅಕ್ಕಿ ಅಧಿಕಾರ ಅನುಭವಿಸಿದರು. ಬಳಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೀರಸಾಬ ಕೌತಾಳ ಹಾಗೂ ಬಿ.ಬಿ. ಅಸೂಟಿಗೆ ತಲಾ 10 ತಿಂಗಳ ಅಧಿಕಾರ ಹಂಚಿಕೆ ಮಾಡಲಾಯಿತು.
ಅದರಂತೆ ಕ್ರಮವಾಗಿ ಉಭಯ ಸದಸ್ಯರು ತಮ್ಮ ಅಧಿಕಾರವನ್ನು ಪೂರ್ಣಗೊಳಿಸಿದರು. ಸದ್ಯ ಹಾಲಿ ಅಧ್ಯಕ್ಷರಾಗಿರುವ ಬಿ.ಬಿ. ಅಸೂಟಿ ಪಕ್ಷದ ನಿರ್ಣಯದಂತೆ ಜೂ.17ಕ್ಕೆ ಅಧಿಕಾರ ಅವಧಿ ಪೂರ್ಣಗೊಂಡಿದೆ. ಹೀಗಾಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು, ಸಹಜವಾಗಿಯೇ ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಿಸಿದೆ.
ಆಕಾಂಕ್ಷಿಗಳು ಯಾರ್ಯಾರು?: ಬಿ.ಬಿ. ಅಸೂಟಿ ರಾಜೀನಾಮೆಯಿಂದ ತೆರವಾಗಲಿರುವ ಅಧ್ಯಕ್ಷ ಸ್ಥಾನಕ್ಕಾಗಿ ನಗರಸಭೆ ಹಿರಿಯ ಸದಸ್ಯರಾದ ಎಲ್ .ಡಿ. ಚಂದಾವರಿ, ಕೃಷ್ಣ ಪರಾಪುರ, ಮಂಜುನಾಥ ಪೂಜಾರ, ಸುರೇಶ್ ಕಟ್ಟಿಮನಿ, ಎಂ.ಸಿ. ಶೇಖ್, ಬರ್ಕತ್ ಅಲಿ ಮುಲ್ಲಾ, ಮೇಘಾ ಮುದಗಲ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಎಲ್.ಡಿ. ಚಂದಾವರಿ ಈ ಹಿಂದೆಯೇ ನಗರಸಭೆ ಅಧ್ಯಕ್ಷರು. ಸದ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಮೇಘಾ ಮುದಗಲ್ ಹಾಗೂ ಎಂ.ಸಿ.ಶೇಖ್ ಅವರ ಅಧಿಕಾರ ಅವಧಿಯೂ(ಪಕ್ಷದ ಆಂತರಿಕ ಒಪ್ಪಂದ) ಇನ್ನೆರಡು ತಿಂಗಳಿದೆ. ಹೀಗಾಗಿ ಅವರಿಗೂ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಗಳು ವಿರಳ. ಮಂಜುನಾಥ ಪೂಜಾರ, ಸುರೇಶ್ ಕಟ್ಟಿಮನಿ ಅವರ ಹೆಸರು ಪ್ರಬಲವಾಗಿವೆ ಎಂಬುದು ಮೂಲಗಳ ಮಾಹಿತಿ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಗರ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಹೆಚ್ಚಾಗಿ ದುಡಿದವರನ್ನು ಪರಿಗಣಿಸಿದರೆ, ಕೃಷ್ಣಾ ಪರಾಪುರ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳೂ ಜಾಸ್ತಿ ಇವೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ನಗರಸಭೆ, ಪುರಸಭೆಗಳ ಜನಪ್ರತಿನಿಧಿ ಕಾಯ್ದೆ-2016ರ ತಿದ್ದುಪಡಿ ಪ್ರಕಾರ ಸದನದ ಪೂರ್ಣಾವಧಿ ಪೂರ್ಣಗೊಂಡ ಮರುದಿನವೇ ಹೊಸ ಅಧಿಕಾರ ವಹಿಸಿಕೊಳ್ಳಬೇಕು. ಹೀಗಾಗಿ ಹಾಲಿ ನಗರಸಭೆಯ ಪೂಣಾವಧಿ 2018ರ ಮಾರ್ಚ್‌ಗೆ ಅಂತ್ಯಗೊಳ್ಳಲಿದ್ದು, ಮುಂದಿನ ಜನವರಿಯಲ್ಲೇ ನಗರಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಯಾರೇ ಅಧಿಕಾರಕ್ಕೆ ಬಂದರೂ, 5-6 ತಿಂಗಳು ಮಾತ್ರ ಅಧ್ಯಕ್ಷ ಗಾದಿಯಲ್ಲಿರಲಿದ್ದಾರೆ. ಆದರೆ, ಆ ವೇಳೆಗೆ ಅಧ್ಯಕ್ಷರಾಗಿದ್ದರೆ, ಚುನಾವಣೆಯಲ್ಲಿ ವರ್ಚಸ್ಸೇ ಬೇರೆ ಎಂಬುದು ಆಕಾಂಕ್ಷಿಗಳ ಅಭಿಪ್ರಾಯವಾಗಿದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳು ವರಿಷ್ಠರ ಮನವೊಲಿಕೆಗೆ ಕಸರತ್ತು ಆರಂಭಿಸಿದ್ದಾರೆ.
ಇನ್ನುಳಿದ ಅವಧಿಗೆ ನನ್ನನ್ನೇ ಅಧಿಕಾರದಲ್ಲಿ ಮುಂದುವರಿಸುವಂತೆ ಶಾಸಕ ಎಚ್.ಕೆ. ಪಾಟೀಲ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ್ದೇವೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಹಿಂದುಳಿದ ವರ್ಗ ಹಾಗೂ ಅನ್ಯ ಮೀಸಲಾತಿಯಡಿ ಬರುವವರಿಗೆ ನೀಡದೇ, ಸಾಮಾನ್ಯ ವರ್ಗದಲ್ಲಿರುವ ನನ್ನನ್ನೇ ಇನ್ನೂ ಐದು ತಿಂಗಳು ಮುಂದುವರಿಸುವಂತೆ ಮನವಿ ಮಾಡಿದ್ದೇನೆ. ಆದರೆ, ಶಾಸಕರು ಒಪ್ಪಿಲ್ಲ. ಹೀಗಾಗಿ ಸದ್ಯದಲ್ಲೇ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ.
ಬಿ.ಬಿ. ಅಸೂಟಿ, ನಗರಸಭೆ ಅಧ್ಯಕ್ಷ
ಪಕ್ಷದ ಆಂತರಿಕ ಮಾತುಕತೆಯಂತೆ ನಗರಸಭೆ ಅಧ್ಯಕ್ಷ ಬಿ.ಬಿ. ಅಸೂಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಶ್ಚಿತ. ಅದರಂತೆ ಅವರು ನಡೆದುಕೊಳ್ಳುತ್ತಾರೆ. ಬಳಿಕ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಪಕ್ಷದ ಹಿರಿಯರಾದ ಡಿ.ಆರ್. ಪಾಟೀಲ, ಶಾಸಕ ಎಚ್.ಕೆ. ಪಾಟೀಲ ಹಾಗೂ ಹಿರಿಯರು ಸೇರಿ, ನಗರಸಭೆ ಕಾಂಗ್ರೆಸ್ ಸದಸ್ಯರ ಅಭಿಪ್ರಾಯ ಪಡೆದು, ನಿರ್ಧಾರ ಕೈಗೊಳ್ಳುತ್ತಾರೆ.
ಗುರಣ್ಣ ಬಳಗಾನೂರ,
ಕಾಂಗ್ರೆಸ್ ಶಹರ ಅಧ್ಯಕ್ಷ.
ವೀರೇಂದ್ರ ನಾಗಲದಿನ್ನಿ