ಬೆಂಗಳೂರು: ರಮೀಳಾ ಉಮಾಂಶಕರ್ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನಕ್ಕೇರಲು ಜೆಡಿಎಸ್‌ನಲ್ಲಿ ಪೈಪೋಟಿ ಶುರುವಾಗಿದೆ.
ಸೆ.28ರ ಚುನಾವಣೆ ವೇಳೆ ಉಪಮೇಯರ್ ಸ್ಥಾನ ತಪ್ಪಿದ್ದಕ್ಕೆ ಅಸಮಧಾನಗೊಂಡು ನೇರವಾಗಿ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಹಾಗೂ ಚುನಾವಣೆಗೆ ಗೈರಾಗುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಬೆಂಬಲಿಸಿದ್ದ ಮೂವರು ಸದಸ್ಯರು ಇದೀಗ ನಿರಾಸೆಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪ ಇರುವುದರಿಂದ ಅವರು ಉಪ ಮೇಯರ್ ರೇಸ್‌ನಿಂದ ಹೊರಗುಳಿಯುವಂತಾಗಿದೆ.
ಉಪಮೇಯರ್ ಆಯ್ಕೆ ಸಂಬಂಧ ಪಕ್ಷದ ನಿರ್ಧಾರವನ್ನು ಬಹಿರಂಗವಾಗಿಯೇ ವಿರೋಧಿಸಿದ್ದ ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್, ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ಅದೇ ರೀತಿ ನಾಜಿಮಾ ಖಾನ್, ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿಯುವ ಮೂಲಕ ಬಂಡಾಯ ಸಾರಿದ್ದರು. ಮತದಾನದ ವೇಳೆ ದೇವದಾಸ್, ಪಕ್ಷದ ಅಭ್ಯರ್ಥಿ ಪರ ಕೈ ಎತ್ತಿದರೂ ಮಂಜುಳಾ ನಾರಾಯಣಸ್ವಾಮಿ ಸಭಾಂಗಣದಿಂದ ನಿರ್ಗಮಿಸಿದ್ದರು. ಹೀಗಾಗಿ, ಮಂಜುಳಾ ಹಾಗೂ ನಾಜಿಮಾ ಖಾನ್ ಅವರಿಗೆ ನೋಟಿಸ್ ಸಹ ನೀಡಲಾಗಿತ್ತು.
ಉಪ ಮೇಯರ್ ಸ್ಥಾನಕ್ಕೆ ಪ್ರಮುಖವಾಗಿ ಹಾಲಿ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಭದ್ರೇಗೌಡ, ಮಹಾದೇವ್ ಹಾಗೂ ರಾಜಶೇಖರ್ ಆಕಾಂಕ್ಷಿಗಳಾಗಿದ್ದಾರೆ. ಆ ಪೈಕಿ ರಾಜಶೇಖರ್ ಅವರಿಗೆ ಕಳೆದ ಮೂರು ಅವಧಿಯಲ್ಲಿ ಯಾವುದೇ ಅಧ್ಯಕ್ಷ ಸ್ಥಾನಮಾನ ಸಿಕ್ಕಿಲ್ಲ. ಜತೆಗೆ ಕುರುಬ ಸಮುದಾಯಕ್ಕೆ ಸೇರಿದವರು. ರಮೀಳಾ ಸಹ ಅದೇ ಸಮುದಾಯದವರು. ಹೀಗಾಗಿ ರಾಜಶೇಖರ್ ಅವರಿ ಉಪಮೇಯರ್ ಆಗುವ ಅವಕಾಶ ಹೆಚ್ಚು ಎಂದು ಹೇಳಲಾಗಿದೆ.
ಸ್ಥಾಯಿ ಸಮಿತಿ ನಂತರ ಚುನಾವಣೆ?: ಬಿಬಿಎಂಪಿ ಆಯುಕ್ತರು ಈಗಾಗಲೇ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸುವ ಕುರಿತಂತೆ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದು, ನವೆಂಬರ್ ಎರಡನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಆದರೆ, ತೆರವಾಗಿರುವ ಉಪಮೇಯರ್ ಸ್ಥಾನದ ಚುನಾವಣೆ ಕುರಿತಂತೆ ಈವರೆಗೆ ಪಾಲಿಕೆಯ ಆಯುಕ್ತರು ಯಾವುದೇ ಪತ್ರ ಬರೆದಿಲ್ಲ.
ಒಂದೊಮ್ಮೆ ಆಯುಕ್ತರು ಶೀಘ್ರ ಪತ್ರ ಬರೆದರೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರ ಚುನಾವಣೆ ದಿನವೇ ಉಪಮೇಯರ್ ಸ್ಥಾನಕ್ಕೂ ಚುನಾವಣೆ ನಡೆಯಬಹುದು. ಇಲ್ಲದಿದ್ದರೆ ಸ್ಥಾಯಿ ಸಮಿತಿ ಚುನಾವಣೆ ನಂತರ ಉಪಮೇಯರ್ ಚುನಾವಣೆ ನಡೆಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಿಜೆಪಿಯಿಂದಲೂ ಸ್ಪರ್ಧೆ: ರಮೀಳಾ ಅವರ ನಿಧನದಿಂದ ತೆರವಾಗಿರುವ ಉಪಮೇಯರ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದೆ. ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ನಗರದ ಶಾಸಕರು, ಸಂಸದರು ಚರ್ಚಿಸಿ ತೀರ್ಮಾನಿಸಲಿದ್ದಾರೆ ಎಂದು ಹೇಳಲಾಗಿದೆ.