ಜೈಪುರ: ಏಳನೇ ಆವೃತಿಯ ಪ್ರೊ ಕಬಡ್ಡಿ ಲೀಗ್ ಅಂತಿಮ ಹಂತಕ್ಕೆ ತಲುಪಿದ್ದು ದಬಾಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ಗೆ ಪ್ರವೇಶಿಸಿದೆ. ಪ್ಲೇ ಆಫ್ನಲ್ಲಿ ಅಗ್ರ ಆರು ತಂಡಗಳು ಕಾದಾಟ ನಡೆಸಲಿವೆ. ಪ್ಲೇ ಆಫ್ಗೆ ಇನ್ನುಳಿದ 4 ಸ್ಥಾನಗಳಿಗಾಗಿ 6 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹರ್ಯಾಣ ಮತ್ತು ಯುಪಿ ಯೋಧಾಗಳಿಗೆ ತವರಿನಲ್ಲಿ ಪಂದ್ಯಗಳಿರುವ ಕಾರಣ ತವರಿನ ಲಾಭವೆತ್ತುವ ಅವಕಾಶವೊಂದಿದೆ.
ಸದ್ಯದ ಅಂಕಪಟ್ಟಿಯಂತೆ ಮೊದಲೆ ರಡು ಸ್ಥಾನದಲ್ಲಿರುವ ಡೆಲ್ಲಿ (72), ಬೆಂಗಾಲ್ (68) ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆಯಾಗಿವೆ. ಹರ್ಯಾಣ (59), ಮುಂಬಾ (53), ಬುಲ್ಸ್ (53) ಮತ್ತು ಯೋಧಾ (53) ಅನಂತರದ ಸ್ಥಾನಗಳಲ್ಲಿ ಇವೆ. ಇವುಗಳ ಜತೆ ಜೈಪುರ, ಪುನೇರಿ ಮತ್ತು ಪಾಟ್ನಾ ತಂಡಗಳಿಗೂ ಪ್ಲೇ ಆಫ್ಗೆ ತೇರ್ಗಡೆಯಾಗುವ ಅವ ಕಾಶವಿದೆ. ಆದರೆ ಮುಂದಿನ ಎಲ್ಲ ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ದಾಖಲಿಸುವ ಅಗತ್ಯವಿದೆ. ಹೀಗಾಗಿ ಮುಂದಿನೆಲ್ಲ ಪಂದ್ಯಗಳು ತೀವ್ರ ಪೈಪೋಟಿಯಿಂದ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್, ಮೂರು ಬಾರಿಯ ಚಾಂಪಿ ಯನ್ ಪಾಟ್ನಾ ಪ್ಲೇ ಆಫ್ಗೆ ಪ್ರವೇಶಿಸಲು ಕಠಿನ ಪ್ರಯತ್ನ ನಡೆಸಬೇಕಾಗಿದೆ. ಮುಂದಿನ ಪಂದ್ಯಗಳಲ್ಲಿ ಭರ್ಜರಿ ಆಟ ಪ್ರದರ್ಶಿಸಿದರೆ ಪ್ಲೇ ಆಫ್ ಕನಸು ನನಸಾಗಬಹುದು. ಕಳೆದ ಎರಡು ಲೀಗ್‌ಗಳಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದ ಗುಜರಾತ್ ಫಾರ್ಚೂನ್‌ಜೈಂಟ್ಸ್ ಈ ಬಾರಿ ನೀರಸ ಪ್ರದರ್ಶನ ನೀಡಿದೆ.
ತೆಲುಗು-ಬೆಂಗಾಲ್ ಸೆಣಸಾಟ
ಬುಧವಾರದ ಮೊದಲ ಪಂದ್ಯದಲ್ಲಿ ಪ್ಲೇ ಆಫ್ನಿಂದ ಅಧಿಕೃತವಾಗಿ ಹೊರ ಬಿದ್ದ ತೆಲುಗು ಟೈಟಾನ್ ಮತ್ತು ಪ್ಲೇ ಆಫ್ಗೇರಿದ ಬೆಂಗಾಲ್ ವಾರಿಯರ್ ಮುಖಾಮುಖೀಯಾಗಲಿವೆ. ತೆಲುಗು ಪಾಲಿಗೆ ಇದೊಂದು ಔಪಚಾರಿಕ ಪಂದ್ಯವಾಗಿದೆ.
ಆದರೆ ದಿನದ 2ನೇ ಪಂದ್ಯ ಜೈಪುರ ಮತ್ತು ಪುನೇರಿ ನಡುವೆ ನಡೆಯಲಿದ್ದು ಕುತೂಹಲಕಾರಿಯಾಗಿದೆ. ಇತ್ತಂಡ ಗಳಿಗೂ ಪ್ಲೇ ಆಫ್ಗೇರಲು ಗೆಲುವು ಅನಿವಾರ್ಯ. ಹೀಗಾಗಿ ಶಕ್ತಿಮೀರಿ ಪ್ರದರ್ಶನ ನೀಡಲು ಇತ್ತಂಡಗಳು ಸಜ್ಜಾಗಿವೆ. ಜೈಪುರಕ್ಕೆ ಇದು ತವರಿನ ಪಂದ್ಯವಾದ್ದರಿಂದ ಹೆಚ್ಚಿನ ಅವಕಾಶ ಎನ್ನಲಡ್ಡಿಯಿಲ್ಲ ಆದರೆ ಪುನೇರಿಯನ್ನು ಕಡೆಗಣಿಸುವಂತಿಲ್ಲ. ಅನುಪ್ ಕುಮಾರ್ ಅವರ ಕೋಚಿಂಗ್ ಪುನೇರಿ ತಂಡಕ್ಕೆ ಹೆಚ್ಚಿನ ಬಲ ತರಲಿದೆ.