Advertisement

ಹಣ್ಣು, ತರಕಾರಿ ಬೆಳೆ ನಷ್ಟಕ್ಕೆ ಪರಿಹಾರ ನೀಡಿ

02:29 PM Apr 23, 2020 | mahesh |

ಹಾಸನ: ಲಾಕ್‌ಡೌನ್‌ ಜಾರಿಯಾದ ನಂತರ ಜಿಲ್ಲೆಯಲ್ಲಿ ರೈತರು ಬೆಳೆದ ಹಣ್ಣು ಮತ್ತು ತರಕಾರಿ ಮಾರಾಟವಾಗದೆ 97.21 ಕೋಟಿ ರೂ. ನಷ್ಟ ಅನುಭವಿಸಿದ್ದು, ರೈತರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 3,256 ಹೆಕ್ಟೇರ್‌ನಲ್ಲಿ ಬೆಳೆದಿರುವ ತರಕಾರಿ ಮಾರಾಟವಾಗದೆ 70.91 ಕೋಟಿ ರೂ ನಷ್ಟವಾಗಿದೆ. 591 ಹೆಕ್ಟೇರ್‌ನಲ್ಲಿ ಬೆಳೆದಿರುವ ಹಣ್ಣುಗಳು ಮಾರಾಟವಾಗದೆ 20 ಕೋಟಿ ರೂ. ನಷ್ಟವಾಗಿದ್ದು, 135 ಹೆಕ್ಟೇರ್‌ ನಲ್ಲಿ ಬೆಳೆದ ಹೂವು ಮಾರಾಟವಾಗದೆ 6.30 ಕೋಟಿ ರೂ. ನಷ್ಟವನ್ನು ರೈತರು ಅನುಭವಿಸಿ ದ್ದಾರೆ. ಎನ್‌ಡಿಆರ್‌ಎಫ್ ಅಥವಾ ಎಸ್‌ ಡಿಆರ್‌ಎಫ್ ಮಾರ್ಗದರ್ಶಿ ಸೂತ್ರಗಳನ್ವಯ ಪರಿಹಾರವನ್ನು ಸರ್ಕಾರ ನೀಡುವ ಮೂಲಕ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.

Advertisement

ಕೆಎಂಎಫ್ ನಿಂದ ಮೆಕ್ಕೆ ಜೋಳ ಖರೀದಿಸಿ:  ಕ್ವಿಂಟಲ್‌ಗೆ 1,800 ರೂ. ನಿಂದ 1,900 ರೂ. ದರದಲ್ಲಿ ಮಾರಾಟವಾಗುತ್ತಿದ್ದ ಮೆಕ್ಕೆ ಜೋಳದ ಬೆಲೆ 1,100 ರೂ.ಗೆ ಕುಸಿದಿದೆ. ಕೇಂದ್ರ ಸರ್ಕಾರ ಕ್ವಿಂಟಲ್‌ಗೆ 1,780 ರೂ. ದರ ನಿಗದಿಪಡಿಸಿದೆ. ಕೆಎಂಎಫ್ ಪಶು ಆಹಾರ ತಯಾರಿಕೆಗೆ ಗುತ್ತಿಗೆದಾರರ ಮೂಲಕ ಕ್ವಿಂಟಲ್‌ಗೆ 2ಸಾವಿರ ರೂ. ದರದಲ್ಲಿ ಖರೀದಿ ಮಾಡುತ್ತಿದೆ. ರೈತರಿಂದಲೇ ಕೆಎಂಎಫ್ ನೇರವಾಗಿ 1,780 ರೂ. ದರದಲ್ಲಿ ಖರೀದಿಸಲು ಸರ್ಕಾರ ಅನುಮತಿ ನೀಡಲಿ ಎಂದೂ ರೇವಣ್ಣ ಒತ್ತಾಯಿಸಿದರು.

ರೈತರಿಂದ ಸರ್ಕಾರವೇ ಬೆಳೆ ಖರೀದಿಸಲಿ:
ಲಾಕ್‌ಡೌನ್‌ ಜಾರಿಯಾದ ನಂತರ ರೈತರು ಬೆಳೆದ ಹಣ್ಣು, ತರಕಾರಿ ಮಾರಾಟವಾಗದೇ ನಷ್ಟ ಅನುಭವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹಣ್ಣು , ತರಕಾರಿ ಬೆಲೆಗಳು ದುಪ್ಟಟ್ಟಾಗಿವೆ.
ದಿನಸಿ ಪದಾರ್ಥಗಳೂ ದುಬಾರಿಯಾಗಿದ್ದು, ಮಧ್ಯವರ್ತಿಗಳು, ವ್ಯಾಪಾರಿಗಳು ಭಾರೀ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಹೊಳೆನರಸೀಪುರ ತಾಲೂಕಿನಲ್ಲಿ ತಾವು ಸಗಟು ಮಾರಾಟಗಾರರಿಂದ ಈರುಳ್ಳಿ, ಬೆಳ್ಳುಳ್ಳಿ, ತೊಗರೀ ಬೇಳೆ ಸಕ್ಕರೆ, ಅಡುಗೆ ಎಣ್ಣೆಯನ್ನು ಖರೀದಿಸಿ ಹಾಲು ಉತ್ಪಾದಕರ ಸಂಘ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಮಾರಾಟ ಮಾಡುತ್ತಿದ್ದೇನೆ. ಸರ್ಕಾರ ಎಪಿಎಂಸಿಗಳ ಮೂಲಕ ರೈತರ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದರೆ ಜನರ ಶೋಷಣೆ ತಪ್ಪುತ್ತದೆ ಹಾಗೂ ರೈತರ ಹಿತ ಕಾಪಾಡಿದಂತಾಗುತ್ತದೆ ಎಂದರು.

ಕಾಮಗಾರಿಗಳಿಗೆ ಹಣ ಇದೆಯೇ?
ಕೃಷಿ ಉಪತ್ಪನ್ನಗಳನ್ನು ಸರ್ಕಾರ ನೇರವಾಗಿ ಖರೀದಿಸಿ ಸಹಕಾರ ಸಂಸ್ಥೆಗಳ ಮೂಲಕ ಗ್ರಾಹಕರಿಗೆ ನೇರ ಮಾರಾಟ ಮಾಡಿಸಲು ಸರ್ಕಾರಕ್ಕೇನಾದರೂ ಆರ್ಥಿಕ ತೊಂದರೆ ಇದೆಯೇ ಎಂದು ಪ್ರಶ್ನಿಸಿದ ಅವರು, ಆರ್ಥಿಕ ಸಂಕಷ್ಟವಿದ್ದರೆ ಹೊಸ ಕಾಮಗಾರಿಗಳನ್ನು ಏಕೆ ಸರ್ಕಾರ ತೆಗೆದುಕೊಳ್ಳಲು ಮುಂದಾಗಿದೆ? ಹಾಸನ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ನೆರವು ನೀಡಲು ಸರ್ಕಾರದ ಬಳಿ ಹಣವಿಲ್ಲ. ಬೇರೆ ಜಿಲ್ಲೆಗಳ ಕಾಮಗಾರಿಗಳಿಗೆ ಬಿಡುಗಡೆ ಮಾಡಲು ಹಣವಿದೆಯೇ ಎಂದು ರೇವಣ್ಣ ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next