ಬೆಂಗಳೂರು: ಬುದ್ಧಿಜೀವಿಗಳು ಎನ್ನಿಸಿಕೊಂಡವರೂ ರಾಷ್ಟ್ರೀಯತೆ ಕುರಿತು ಮಾತನಾಡಲು ಸಂಕೋಚ ಪಡುತ್ತಿದ್ದಾರೆ ಎಂದು ಹಿರಿಯ ಕವಿ ಎಚ್.ಎಸ್.ವೆಂಕಟೇಶ್‌ಮೂರ್ತಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬ್ರೈಲ್‌ಲಿಪಿ ಪುಸ್ತಕಗಳ ವಿತರಣೆ ಹಾಗೂ ಡಾ.ಅಕ್ಕಮಹಾದೇವಿ ಅವರ “ಸೋಮೇಶ್ವರ ಶತಕಂ’, ಡಾ.ಕೆ.ಆರ್.ಸಂಧ್ಯಾರೆಡ್ಡಿ ಅವರ “ಬರ್ಕ್‌ವೈಟ್ ಕಂಡ ಭಾರತ’ ಹಾಗೂ ಡಾ.ಆರಿಯಸ್ ಸುಂದರಂ ಅವರ “ಶ್ರೀವಿಜಯನ ಕವಿರಾಜಮಾರ್ಗಂ’ ಹಾಗೂ ಬಿ.ಶಿವಾನಂದ ಅವರ “ಮಾಲತಿಸರೋಜ್’ ಕೃತಿಗಳ ಬಿಡುಗಡೆಗೊಳಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ಸಂಸ್ಥೆಗಳಿಗೆ “ರಾಷ್ಟ್ರೀಯತೆ’, “ಭಾರತೀಯ’ ಎಂಬ ಹೆಸರು ಇಡುವುದು ಹೆಮ್ಮೆಯ ವಿಷಯವಾಗಿತ್ತು. ಆದರೆ, ಕಾಲೇಜು ಶಿಕ್ಷಣದಲ್ಲಿಂದು ನಾಡು, ನುಡಿಯ ಕುರಿತು ಜ್ಞಾನ ಹಾಗೂ ಅಭಿಮಾನ ಇಲ್ಲವಾಗಿದೆ. ಈ ಬಗ್ಗೆ ಬುದ್ಧಿಜೀವಿಗಳು ಪ್ರಶ್ನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಳೆಗನ್ನಡದ ಕಾವ್ಯಗಳನು ಇಂದಿನ ದಿನಗಳಲ್ಲಿ ಓದುವವರೇ ಇಲ್ಲವಾಗಿದೆ. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಕೂಡ ಇವುಗಳನ್ನು ಸಲೀಸಾಗಿ ಓದಿ ಅರ್ಥ ಮಾಡಿಕೊಳ್ಳಲು ತಿಣುಕಾಡುತ್ತಿದ್ದಾರೆ. ಇಂತಹ ವೇಳೆ ಹಳೆಗನ್ನಡ ಕಾವ್ಯಗಳನ್ನು ಆಧುನಿಕ ಕನ್ನಡ ಭಾಷೆಗೆ ಅನುವಾದಿಸುವಂತಹ ಕಾರ್ಯಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಿರುವುದು ಅಭಿನಂದನಾರ್ಹ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ದೇಶವನ್ನು ಸುಭದ್ರವಾಗಿ ಕಟ್ಟುವಲ್ಲಿ ಪುಸ್ತಕಗಳು ತನ್ನದೇ ಆದ ವಿಶಿಷ್ಟ ಪಾತ್ರ ವಹಿಸುತ್ತಿವೆ. ಆ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಜನತೆಯಲ್ಲಿ ಪುಸ್ತಕದ ಕುರಿತು ಆಸಕ್ತಿಯನ್ನು ಉಂಟು ಮಾಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಂಧಶಾಲೆಗಳಿಗೆ ಬ್ರೈಲ್ ಲಿಪಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೃಷ್ಣ ಹೊಂಬಳ್, ಕೃತಿಕಾರರಾದ ಡಾ.ಅಕ್ಕಮಹಾದೇವಿ, ಡಾ.ಅರಿÌಯಸ್ ಸುಂದರಂ, ಡಾ.ಕೆ.ಆರ್.ಸಂಧ್ಯಾರೆಡ್ಡಿ ಹಾಗೂ ಬಿ.ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.