Advertisement

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

10:29 PM Oct 06, 2024 | Team Udayavani |

ಧಾರವಾಡ: ‘ವಿಪಕ್ಷ ನಾಯಕ ಆರ್. ಅಶೋಕ ಅವರ ಪ್ರಕರಣಕ್ಕೂ ಸಿಎಂ ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಈ ಎರಡೂ ಪ್ರಕರಣವನ್ನು ಪರಸ್ಪರ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಮಾಜಿ ಸಿಎಂ, ಬೆಳಗಾವಿಯ ಸಂಸದ ಜಗದೀಶ ಶೆಟ್ಟರ್ ಹೇಳಿದರು.

Advertisement

ನಗರದಲ್ಲಿ ರವಿವಾರ(ಅ6) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ಈಗಾಗಲೇ ಭೂ ವಂಚನೆ ಪ್ರಕರಣವು ಕೋರ್ಟ್‌ನಿಂದ ಎಲ್ಲವೂ ಬಗೆಹರಿದಿದೆ ಎಂಬುದಾಗಿ ಆರ್.ಅಶೋಕ ಅವರೇ ಸ್ಪಷ್ಟಪಡಿಸಿದ್ದಾರೆ. ಆದರೆ ಈಗ ಸಿದ್ದರಾಮಯ್ಯನವರು ತಮ್ಮ ಪ್ರಕರಣದ ಜತೆ ಇನ್ನೊಬ್ಬರ ಕೇಸ್‌ ಹೋಲಿಕೆ ಮಾಡಬಾರದು’ ಎಂದರು‌.

‘ಆರ್. ಅಶೋಕ ಅವರು ತಮ್ಮ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ಸಹ ಕೊಟ್ಟಿದ್ದಾರೆ. ಕೋರ್ಟ್‌ನಲ್ಲೇ ಅಶೋಕ ಅವರ ತಪ್ಪಿಲ್ಲ ಎಂಬುದಾಗಿ ಸಾಬೀತಾಗಿದೆ. ಈಗ ಮುಡಾ ಹಗರಣ ಎದ್ದಿದೆ. ತನಿಖೆಗೆ ಆದೇಶ ಕೂಡ ಆಗಿದೆ. ಇದರ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಸಹ ಕೊಡಲಿಲ್ಲ. ಈ ಬಗ್ಗೆಯ ಚರ್ಚೆಯ ಪ್ರಸ್ತಾಪವನ್ನೇ ತಿರಸ್ಕಾರ ಮಾಡಿಸಿದರು.ಎಲ್ಲೋ ಒಂದು ಕಡೆ ಈ ಪ್ರಕರಣದಿಂದ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಧರ್ಮ ಪತ್ನಿಯ ಹೆಸರನ್ನು ಬೀದಿಗೆ ತರುವ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂಬುದಾಗಿ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಅವರೇ ಪತ್ನಿಯ ಹೆಸರನ್ನು ಬೀದಿಗೆ ತಂದವರು’ ಎಂದರು.

‘ಕಾನೂನಿನಲ್ಲಿರುವ 50:50 ನಿಯಮ ಮೀರಿ 14 ಸೈಟ್ ತೆಗೆದುಕೊಂಡಿದ್ದಾರೆ. ರಾಜಕೀಯವಾಗಿ ಮಾತ್ರ ಮಾತನಾಡುತ್ತಿದ್ದಾರೆ. ಆ ನಿವೇಶನಗಳ ಬಗ್ಗೆ ವಿವರಣೆಯನ್ನೇ ಕೊಟ್ಟಿಲ್ಲ. ತಪ್ಪುಗಳ ಮೇಲೆ ತಪ್ಪು ಆಗಿವೆ. ಆದರೆ ಇವರು ತಾವು ಅಮಾಯಕರೆಂದು ಹೇಳಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರು ಮೇಲ್ನೋಟಕ್ಕೆ ಭಾಗಿಯಾಗಿದ್ದಾರೆ ಎಂದೆನಿಸುತ್ತಿದೆ’ ಎಂದರು.

Advertisement

‘ಸಿದ್ದರಾಮಯ್ಯ ಅವರ ಮೇಲಿನ ಆರೋಪ ರದ್ದಾಗಲು ಸಾಧ್ಯವೇ ಇಲ್ಲ. ತಪ್ಪು ಮಾಡಿಲ್ಲ ಎಂದಾದ ಮೇಲೆ ನಿವೇಶನ ಯಾಕೆ ವಾಪಸ್ ಕೊಟ್ಟರು? ಕಳ್ಳ ಮಾಲು ವಾಪಸ್ ಕೊಡುತ್ತಾರೆ ಎಂದಾದರೆ ಅವರ ಮೇಲಿನ ಆಪಾದನೆ ಹೋಗುವುದಿಲ್ಲ. ಶಿಕ್ಷೆ ಆಗಿಯೇ ಆಗುತ್ತದೆ. ಸಿದ್ದರಾಮಯ್ಯ ನಿರಪರಾಧಿಯಾಗಿ ಮತ್ತೊಮ್ಮೆ ಸಿಎಂ ಆಗಲಿ ಬೇಡ ಎಂದವರಾರು? ಆದರೆ, ಅಲ್ಲಿಯವರೆಗೆ ಅವರು ರಾಜೀನಾಮೆ ಕೊಡಬೇಕು’ ಎಂದರು.

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಕತ್ತಿ ರಾಜೀನಾಮೆ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ‘ಅದರ ಬಗ್ಗೆ ನಾನು ಹೆಚ್ಚು ಅಧ್ಯಯನ ಮಾಡಿಲ್ಲ. ಅದರ ಬಗ್ಗೆ ಸಮಾಲೋಚನೆ ಮಾಡಿಲ್ಲ. ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.ಎಲ್ಲರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡುವೆ’ ಎಂದರು.

ನೈತಿಕತೆ ಇದ್ದರೆ ಸಿಎಂ ಈ ವೇಳೆಗೆ ರಾಜೀನಾಮೆ ಕೊಡಬೇಕಿತ್ತು

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ ಶೆಟ್ಟರ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿವಳಿಕೆ ಮತ್ತು ನೈತಿಕತೆ ಇದ್ದರೆ ಇಷ್ಟರೊಳಗಾಗಲೇ ರಾಜೀನಾಮೆ ಕೊಡಬೇಕಿತ್ತು ಎಂದರು.

ಯಾವುದೇ ಷರತ್ತು ಇಲ್ಲದೇ 14 ನಿವೇಶಗಳನ್ನೂ ಹಿಂದಿರುಗಿಸಿದ್ದಾರೆ. ಈ ಮೊದಲು 60 ಕೋಟಿ ರೂ. ಕೊಡಿ ನಿವೇಶನ ಕೊಡುತ್ತೇನೆ ಅಂತಿದ್ದರು. ಈಗ ಹಣ ಮತ್ತು ಬದಲಿ ನಿವೇಶನ ಯಾವುದನ್ನೂ ಕೇಳುತ್ತಿಲ್ಲ. ಈ ಹಗರಣದಿಂದ ಹೇಗಾದರೂ ಪಾರಾದರೆ ಸಾಕು ಅನ್ನೋ ಪರಿಸ್ಥಿತಿಗೆ ಅವರು ಬಂದಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಳಿಸಲು ಈಗ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಯತ್ನಗಳು ನಡೆದಿವೆ. ಇಳಿಸಬೇಕು ಅನ್ನೋ ತಂತ್ರದಿಂದಾಗಿ ಧ್ವನಿಗಳು ಏಳುತ್ತಿವೆ ಎಂದರು.

ಧರ್ಮಪತ್ನಿಯನ್ನು ಬೀದಿಗೆ ತರುವ ಕೆಲಸ ಮಾಡುತ್ತಿದ್ದಾರೆ’ ಅಂತ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಪಾಪ ಆ ಹೆಣ್ಣು ಮಗಳು ಯಾರ ಉಸಾಬರಿಯೂ ಇಲ್ಲದೇ ತಮ್ಮಷ್ಟಕ್ಕೆ ತಾವು ಇದ್ದರು. ಅವರ ಸಹೋದರನ ಹೆಸರಿನಲ್ಲಿ ಸೇಲ್‌ಡೀಡ್‌ ಮಾಡಿಸುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಕೆದಕುತ್ತ ಹೋದರೆ ಅದು ಮತ್ತೊಂದು ಹಗರಣವಾಗುತ್ತದೆ ಎಂದು ಹೇಳಿದರು.

ಸರ್ಕಾರ ಬಿದ್ದರೆ ಬೀಳಲಿ, ಜಾತಿಗಣತಿ ಬಿಡುಗಡೆ ಮಾಡಿ ಎನ್ನುವ ಬಿ.ಕೆ.ಹರಿಪ್ರಸಾದ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ತನ್ನನ್ನು ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಬಿ.ಕೆ.ಹರಿಪ್ರಸಾದ್‌ಗೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಭಯಂಕರ ಸಿಟ್ಟಿದೆ. ಈ ನೆಪದ ಮೇಲಾದರೂ ಸಿದ್ದರಾಮಯ್ಯ ಅವರನ್ನು ಮನೆಗೆ ಕಳುಹಿಸುವ ತಂತ್ರ ಹರಿಪ್ರಸಾದ್‌ ಮಾಡಿದ್ದಾರೆ ಎಂದು ಹೇಳಿದರು.

ಮುಡಾ ಹಗರಣ ಮುಚ್ಚಿ ಹಾಕಲು ಹಾಗೂ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಜಾತಿ ಗಣತಿ ವಿಷಯ ಮುನ್ನಲೆಗೆ ತಂದಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next