ಲಾಹೋರ್: ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಒಂದು ತಮಾಷೆಯ ಪ್ರಸಂಗ ನಡೆದಿದೆ. ವಾಸ್ತವವಾಗಿ ಇದನ್ನು ತಮಾಷೆಯ ಪ್ರಸಂಗ ಎನ್ನಲಾಗದು.ಸಿಟ್ಟು, ಆಕ್ರೋಶದ ಪ್ರಸಂಗ ಎಂದರೇ ಸರಿಯಾದೀತು!
ವಿಷಯ ಇಷ್ಟೇ:ಪಾಕಿಸ್ತಾನದ ಇಬ್ಬರು ಕ್ರಿಕೆಟಿಗರಾದ ಉಮರ್ ಅಕ್ಮಲ್ ಮತ್ತು ಅಹ್ಮದ್ ಶೆಹಜಾದ್‌ರನ್ನು ಭಾರತದ ವಿರಾಟ್ ಕೊಹ್ಲಿಗೆ ಹೋಲಿಸಲಾಗುತ್ತದೆ.
ಆದರೆ ಈ ಇಬ್ಬರೂ ಕೊಹ್ಲಿಗೆ ಸಮನಾದ ಬ್ಯಾಟಿಂಗನ್ನು ಯಾವತ್ತೂ ಪ್ರದರ್ಶಿಸಿಲ್ಲ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಕೊಹ್ಲಿ ನೋಡಿ ಕಲಿಯಿರಿ ಇಬ್ಬರಿಗೂ ಬೈಯುತ್ತಿದ್ದಾರೆ.
ಇದು ಉಮರ್ ಅಕ್ಮಲ್‌ಗೆ ಸಿಟ್ಟು ತರಿಸಿದೆ.ನನ್ನನ್ನು ಕೊಹ್ಲಿಗೆ ಹೋಲಿಸಲೇಬೇಡಿ. ನಾನು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಆದ್ದರಿಂದ ಹೋಲಿಕೆ ಸೂಕ್ತವಲ್ಲ. ಒಂದು ವೇಳೆ ನಾನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ,ಕೊಹ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್‌ಮಾಡಿದರೆ ಆಗ ನಮ್ಮನ್ನು ಹೋಲಿಸಿ ಎಂದು ಟೀಕಾಕಾರರಿಗೆ ಉತ್ತರಿಸಿದ್ದಾರೆ.
ಅದರ ಬದಲು ಅಜಮ್ ಮತ್ತು ಕೊಹ್ಲಿಯನ್ನು ಹೋಲಿಸಿ. ಇಬ್ಬರೂ ಬಹುತೇಕ ಒಂದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದರಿಂದ ಆ ಹೋಲಿಕೆ ಸೂಕ್ತವಾಗುತ್ತದೆ ಎಂದಿದ್ದಾರೆ. ಆದರೆ ಪಾಕ್ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಿದೆ. ಅಕ್ಮಲ್ ಇದುವರೆಗೆ 116 ಏಕದಿನ ಪಂದ್ಯವಾಡಿ ಬಾರಿಸಿದ್ದು ಕೇವಲ 2 ಶತಕ.ಅದೇ ಕೊಹ್ಲಿ 179 ಪಂದ್ಯವಾಡಿ 27 ಶತಕ ಬಾರಿಸಿದ್ದಾರೆ. ಈ ಪ್ರಮಾಣದ ಅಂತರ ಎಂತಹ ಅಭಿಮಾನಿಗಳನ್ನಾದರೂ ಸಿಟ್ಟಿಗೇಳಿಸುವುದು ಸಹಜವೇ ತಾನೇ?