Advertisement

ಭಗವದ್ಗೀತೆ ಬಗ್ಗೆ ಹೇಳಿದ್ರೆ ಕೋಮುವಾದಕ್ಕೆ ಹೋಲಿಕೆ

11:56 AM Nov 22, 2017 | |

ಬೆಂಗಳೂರು: ಇಂದು ಭಗವದ್ಗೀತೆ ಕುರಿತು ಯಾರಾದರೂ ಮಾತನಾಡಿದರೆ ಕೋಮುವಾದಿ ಎಂದು ಕರೆಯುತ್ತಾರೆ. ಇದು ಮೂರ್ಖತನದ ಪರಮಾವಧಿ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದರು.

Advertisement

ದಿ ಮಿಥಿಕ್‌ ಸೊಸೈಟಿ ಮತ್ತು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್‌ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಮಂಗಳವಾರ ನಗರದ ಮಿಥಿಕ್‌ಸೊಸೈಟಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಲೂರು ವೆಂಕಟರಾಯರ “ಕರ್ನಾಟಕ ಗತವೈಭವ’ ಗ್ರಂಥದ ಶತಮಾನೋತ್ಸವದಲ್ಲಿ ಮಾತನಾಡಿ, ಗಾಂಧೀಜಿಯವರು, ಆಲೂರು ವೆಂಕಟರಾವ್‌ ಭಗವದ್ಗೀತೆ ಬಗ್ಗೆ ಮಾತನಾಡಿದ್ದಾರೆ.

ಸರ್ವಕಾಲಕ್ಕೂ ಸಲ್ಲುವ ಜೀವವಾಣಿ ಇದರಲ್ಲಿದೆ. ಆದರೆ, ಪ್ರಸ್ತುತ ಭಗವದ್ಗೀತೆ ಕುರಿತು ಮಾತನಾಡುವುದು ಕೋಮುವಾದಕ್ಕೆ ಹೋಲಿಕೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಆಲೂರು ವೆಂಕಟರಾಯರ ಬರಹ, ಬದುಕು ನೋಡಿದಾಗ ಕನ್ನಡಿಗರು ಹುಲಿಮರಿಗಳಂತಾಗುತ್ತಾರೆ. ಕನ್ನಡ ನಾಡಿನ ಗತವೈಭವದ ಕುರಿತು ಬೆಳಕು ಚೆಲ್ಲಿರುವ ಅವರ ಕೃತಿ ಅತ್ಯಾಮೂಲ್ಯ.

ಬೆಳಗಾವಿ ಕರ್ನಾಟಕದ ಭೌಗೋಳಿಕ ಮೂಲ ಕೇಂದ್ರದಲ್ಲಿದ್ದು, ರಾಜ್ಯದ ರಾಜಧಾನಿಯಾಗಬೇಕಿತ್ತು. ಆದರೆ, ಈಗ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜರ ಕಾಲದಿಂದಲೂ ಬೆಳಗಾವಿ ಕರುನಾಡಿನ ಕೇಂದ್ರದಲ್ಲಿರುವುದು ಸಂಶೋಧನೆಯಿಂದ ಗೊತ್ತಾಗಿರುವ ವಿಚಾರ ಎಂದು ಹೇಳಿದರು. 

ಶಾಸನ ತಜ್ಞ ಡಾ.ಕೆ.ಆರ್‌.ಗಣೇಶ್‌ ಮಾತನಾಡಿ, ಎಲ್ಲೆಲ್ಲಿ ವೀರಗಲ್ಲುಗಳು ನೋಡಲು ಸಿಗುತ್ತವೆಯೋ ಅದೆಲ್ಲವೂ ಕರುನಾಡಿನ ಭಾಗವಾಗಿತ್ತು. ಅಂದು ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ವೀರಗಲ್ಲು ಪರಿಕಲ್ಪನೆ ಇರಲೇಇಲ್ಲ. ಕರುನಾಡನ್ನು ಆಳ್ವಿಕೆ ಮಾಡಿದ ರಾಜರುಗಳು ರಾಜ್ಯ ವಿಸ್ತರಿಸಿದ ಕುರುಹುಗಳಾಗಿ ಉಳಿದಿವೆ ಎಂದರು.

Advertisement

ದಕ್ಷಿಣ ಪ್ರಾಂತ್ಯದ ಅತಿ ದೊಡ್ಡ ಸಾಮ್ರಾಜ್ಯದ ಅಧಿಪತಿ ವಿಕ್ರಮಾದಿತ್ಯ ಎಂಬುದನ್ನು ಕನ್ನಡಿಗರು ಮರೆತ್ತಿದ್ದಾರೆ. ಪಕ್ಕದ ರಾಜ್ಯದ ಶಿವಾಜಿ ಮಹಾರಾಜನನ್ನು ನೆನಪಿಸಿಕೊಂಡಷ್ಟು, ನಮ್ಮ ರಾಜ್ಯವನ್ನು ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಬೆಳೆಸಿದ ವಿಕ್ರಮಾದಿತ್ಯನ್ನು ಕನ್ನಡಿಗರು ನೆನಪಿಸದಿರುವುದು ವಿಪರ್ಯಾಸ ಎಂದರು.

ಆಲೂರು ವೆಂಕಟರಾಯರ ವಂಶದ ಡಾ.ದೀಪಕ ಆಲೂರು ಮಾತನಾಡಿ, ಆಲೂರರ ಸಾಹಿತ್ಯ ಸೇವೆಯನ್ನು ಕನ್ನಡಿಗರಿಗೆ ನೀಡುವ ಕೆಲಸವನ್ನು ಆಲೂರ ವೆಂಕಟರಾವ್‌ ಟ್ರಸ್ಟ್‌ ಮಾಡುತ್ತಿದೆ. ಸಮಗ್ರ ಕನ್ನಡ ನಾಡಿನ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಇದೀಗ ಎಲ್ಲೆಡೆ ಕೇಳಿಬರುತ್ತಿರುವ ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಎಲ್ಲರನ್ನು ಒಟ್ಟುಸೇರಿಸಿ ಸಮಾನಾಂತರ ಮನಸ್ಥಿತಿಗೆ ಪ್ರತ್ನಿಸುವ ಅಗತ್ಯವಿದೆ ಎಂದು ಹೇಳಿದರು.

ದಿ ಮಿಥಿಕ್‌ ಸೊಸೈಟಿ ಉಪಾಧ್ಯಕ್ಷ ಪ್ರೊ.ಕೃ.ನರಹರಿ, ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್‌ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸದಸ್ಯ ವೆಂಕಟೇಶ ದೇಸಾಯಿ, ಬೆಂಗಳೂರು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಚಿತ್ತಯ್ಯ ಪೂಜಾರ್‌, ತುಮಕೂರು ವಿವಿ ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next