ಶಿರಸಿ: ಈ ಬಾರಿಯ ಕರ್ನಾಟಕದ ಅಡಕೆ, ಕಾಳು ಮೆಣಸು ಸೇರಿದಂತೆ ಇತರೆ ತೋಟಗಾರಿಕಾ ಬೆಳೆಯ ಬೆಳೆಗಾರರಿಗೆ ವಿಮೆ ದೊರಕುವುದು ಡೌಟು! ಏಕೆಂದರೆ, ಜೂನ್ ಮಾಸ ಅರ್ಧ ಭಾಗ ಉರುಳಿದರೂ ಈವರೆಗೂ ಯಾವುದೇ ವಿಮಾ ಕಂಪನಿ ಹೆಸರು ಅಧಿಕೃತವಾಗಿಲ್ಲ. ಬಹುತೇಕ ಬೆಳೆ ಸಾಲ ಪಡೆಯುವಾಗಲೇ ಭರಣ ಮಾಡಲಾಗುತ್ತಿದ್ದ ವಿಮಾ ಮೊತ್ತವನ್ನೂ ರೈತರು ಪಾವತಿಸಲು ಆಗುತ್ತಿಲ್ಲ.
ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗಳ ಮೂಲಕ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದ ಹವಾಮಾನ ಆಧಾರಿತ ಬೆಳೆ ವಿಮೆ ತೋಟಗಾರಿಕಾ ಬೆಳೆಗಳಿಗೆ ಇತ್ತು. ಕಳೆದ ನಾಲ್ಕೈದು ವರ್ಷದಿಂದ ಅತಿ ಮಳೆಗೆ ಅಡಕೆ, ಕಾಳು ಮೆಣಸು ಕೊಳೆಯ ರೋಗದಿಂದ ತತ್ತರಿಸುತ್ತಿದ್ದ ಬೆಳೆಗಾರರಿಗೆ ಕೊಂಚಾಶ್ರಯವೂ, ಧೈರ್ಯವೂ ಆಗುತ್ತಿದ್ದವು. ಕೋವಿಡ್ ವೈರಸ್ ಕಾರಣದಿಂದ ಕಂಗಾಲಾಗಿದ್ದ ಕರಾವಳಿ, ಮಲೆನಾಡು ಸೀಮೆಯ ತೋಟಿಗರಿಗೆ ಈ ವರ್ಷದ ಮಳೆಗಾಲದ ಹಂಗಾಮು ಹೇಗೆ ಎಂಬ ಚಿಂತೆ ಕಾಡತೊಡಗಿದೆ.
ಕಳೆದ ಬಿಸಿಲಿಗೆ ಅಡಕೆ ಮುಗಡು ಉದುರಿದೆ. ಕಳೆದ ವರ್ಷ ಅತಿ ಮಳೆಗೆ ಅಡಕೆ, ಕಾಳು ಮೆಣಸಿಗೆ ರೋಗ ಬಂದಿತ್ತು. ಕಳೆದ ಬಾರಿ ವರ್ಷಕ್ಕೆ ಅಡಕೆಗೆ ಎಕರೆಗೆ ವಿಮಾ ಮೊತ್ತದ ಶೇ.5ರಷ್ಟನ್ನು ಕಟ್ಟಿಸಿಕೊಳ್ಳಲಾಗಿತ್ತು. ಉಳಿದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಭರಿಸಿಕೊಳ್ಳುತ್ತಿತ್ತು. ಅತಿ ಮಳೆಯ ಆಧಾರದಲ್ಲಿ ಇಂತಿಷ್ಟು ಮಳೆ ಬಿದ್ದಿದೆ ಎಂದು ಪಂಚಾಯತದಲ್ಲಿ ದಾಖಲಾದರೆ ಅದರ ಆಧಾರದಲ್ಲಿ ಬೆಳೆ ವಿಮೆ ಹಣ ಪಾವತಿಸಲಾಗುತ್ತಿತ್ತು. ಕಳೆದ ಬಾರಿಯ ಅಡಕೆ, ಕಾಳು ಮೆಣಸಿನ ವಿಮಾ ಹಣ ಬಂದಿಲ್ಲ. ಜುಲೈ ವೇಳೆಗೆ ಬರಬಹುದು, ವಿಮೆ ಹಣ ಕಟ್ಟಿಸಿಕೊಂಡ ರಿಲಯನ್ಸ್ ಕಂಪನಿಗೆ ಈ ಬಾರಿ ವಿಮೆ ಹಣ ಪಾವತಿಸಲು ದೊಡ್ಡ ಮೊತ್ತವನ್ನೇ ನೀಡಬೇಕಾಗಿದೆ ಎಂದೂ ವರದಿಯೊಂದು ಹೇಳಿದೆ.
ಈ ಮಧ್ಯೆ ಸಾಮಾನ್ಯವಾಗಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಜೂನ್ ವೇಳೆಯಲ್ಲಿ ಅತಿ ಹೆಚ್ಚು ಬೆಳೆ ಸಾಲ ವಿತರಣೆ ಮಾಡುತ್ತದೆ. ಈ ಬೆಳೆ ಸಾಲವನ್ನು ವಿತರಿಸುವ ವೇಳೆಯಲ್ಲೇ ವಿಮಾ ಕಂತನ್ನೂ ಪಾವತಿಸಿಕೊಳ್ಳಲಾಗುತ್ತಿತ್ತು. ಆದರೆ, ಈಗಾಗಲೇ ಶೇ.70ರಷ್ಟು ಬೆಳೆಗಾರರಿಗೆ ಬೆಳೆಸಾಲ ವಿತರಣೆಯ ಪ್ರಕ್ರಿಯೆ ಕೆಡಿಸಿಸಿ ಬ್ಯಾಂಕ್‌ನ ಮೂಲಕ ನಡೆದಿದೆ. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ವಿಮೆಯನ್ನು ಹತ್ತಿ, ಜೋಳ ಹಾಗೂ ಭತ್ತಕ್ಕೆ ಮಾತ್ರ ಕಟ್ಟಿಸಿಕೊಳ್ಳಲಾಗುತ್ತಿದೆ. ಬಜಾಜ್ ಇನ್ಸುರೆನ್ಸ್ ಕಂಪನಿಗೆ ಕೃಷಿ ಇಲಾಖೆ ಬೆಳೆಗಳಿಗೆ ವಿಮೆ ಕಟ್ಟಿಸಿಕೊಳ್ಳಲಾಗುತ್ತಿದೆ. ಆದರೆ, ತೋಟಗಾರಿಕಾ ಬೆಳೆಗಳಿಗೆ ಮಾತ್ರ ಈ ಬಾರಿ ವಿಮಾ ಕಂಪನಿಗಳ ಟೆಂಡರ್ ಆಗದೇ ಸಮಸ್ಯೆ ಉಂಟಾಗಿದೆ. ಈ ಇಲಾಖೆ ಸೂಚಿಸಬೇಕಿತ್ತು. ತೋಟಗಾರಿಕಾ ಇಲಾಖೆ ಅನುಷ್ಠಾನ, ಪ್ರಚಾರ ಮಾಡಬೇಕಿತ್ತು. ಜು.15ರೊಳಗೆ ಈ ವಿಮಾ ಕಂತು ಪಾವತಿಸುವ ಕಾರ್ಯಗಳೂ ಪೂರ್ಣವಾಗಬೇಕು ಎನ್ನುತ್ತದೆ ತೋಟಗಾರಿಕಾ ಇಲಾಖೆಯ ಮೂಲ. ಅಸಲಿಗೆ, ವಿಮಾ ಕಂಪನಿಗಳನ್ನು ನಿಯೋಜನೆ ಗೊಳಿಸುವಂತೆ ತೋಟಗಾರಿಕಾ ಇಲಾಖೆಗೆ ಅಧಿಸೂಚನೆ ಬಂದಿಲ್ಲ ಎನ್ನಲಾಗಿದೆ.
ಪ್ರತಿವರ್ಷ ನಡೆಸಲಾಗುವ ಪ್ರಕ್ರಿಯೆಗೆ ಅಧಿಸೂಚನೆ ಬೇಕಾ ಎಂಬ ಪ್ರಶ್ನೆ ಕೂಡ ಇದೆ. ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಅಡಕೆ, ಕಾಳು ಮೆಣಸು ಸೇರಿದಂತೆ ಇತರ ಬೆಳೆಗಳಿಗೆ ಕೊಳೆ ರೋಗ ಕಾಣಿಸುತ್ತವೆ. ಅತಿ ಮಳೆಗಾಲವೂ ಇದೇ ಅವಧಿಯಲ್ಲಿ ಕಾಣುತ್ತವೆ. ಸಾಮಾನ್ಯವಾಗಿ ಈ ಅವಧಿಯೊಳಗೆ ವಿಮಾ ಕಂಪನಿಗಳು ವಿಮಾ ಕಂತು ಪಾವತಿಸಿಕೊಳ್ಳಬೇಕಿತ್ತು. ಈ ಬಾರಿ ಅಧಿಸೂಚನೆ ಬಂದಿಲ್ಲ ಎಂದು ವಿಮಾ ಕಂಪನಿಯನ್ನು ಟೆಂಡರ್ ಮೂಲಕ ಬಿಡ್ ಕೂಡ ಮಾಡಿಕೊಳ್ಳದ ಇಲಾಖೆ ಕಾರಣದಿಂದ ವಿಮಾ ಕಂತನ್ನೂ ಪಾವತಿಸಿಕೊಳ್ಳಲು ಆಗಿಲ್ಲ. ಅದರ ದರ ಕೂಡ ನಿಗದಿಯಾಗಿಲ್ಲ ಎನ್ನಲಾಗಿದೆ.
ತೋಟಗಾರಿಕಾ ಬೆಳೆಗಳ ವಿಮಾ ಕಂತಿನ ಕುರಿತು ಉಂಟಾದ ಗೊಂದಲ ನಿವಾರಣೆಗೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡುತ್ತೇನೆ. ಸರ್ಕಾರ ರೈತರ ಪರವಾಗಿ ನಿಲುವುತೆಗೆದುಕೊಳ್ಳುವ ವಿಶ್ವಾಸವಿದೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಬೆಳೆ ಸಾಲ ಭರಣಕ್ಕೆ ನಬಾರ್ಡ್ ಅವಧಿ ವಿಸ್ತರಣೆ ಕೂಡ ಕಡೆಗೆ ಬಂತು. ಈಗ ತೋಟಗಾರಿಕಾ ಬೆಳೆಗೆ ವಿಮಾ ಕಂಪನಿ ಇನ್ನೂ ನಿಗದಿಯಾಗದೇ ಹೋದರೆ ಹೇಗೆ? ತಕ್ಷಣ ಸರ್ಕಾರ ವಿಮಾ ಕಂಪನಿ ಅಖೈರುಗೊಳಿಸಿ ರೈತರಿಗೆ ನೆರವಾಗಬೇಕು.
-ಭಾಸ್ಕರ ಹೆಗಡೆ, ರೈತ
–ರಾಘವೇಂದ್ರ ಬೆಟ್ಟಕೊಪ್ಪ