ಪುಣೆ: ಪುಣೆಯಿಂದ ಮಧ್ಯಪ್ರದೇಶ ಮತ್ತು ಉತ್ತರಾಖಂಡಕ್ಕೆ ತೆರಳಲು ಶ್ರಮಿಕ್ ವಿಶೇಷ ರೈಲುಗಳಿಗೆ ಅರ್ಜಿ ಸಲ್ಲಿಸಿದ್ದರೂ ಕೂಡಾ 380 ವಲಸೆ ಕಾರ್ಮಿಕರು ರವಿವಾರ ರೈಲು ಹಿಡಿಯಲಿಲ್ಲ. ಈ ಪ್ರದೇಶದಲ್ಲಿ ಅನೇಕ ಕೈಗಾರಿಕೆಗಳನ್ನು ಪುನಃ ತೆರೆದಿರುವುದರಿಂದ ಕಾರ್ಮಿಕರು ರೈಲು ಹಿಡಿಯಲು ಹಿಂದೇಟು ಹಾಕಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
1172 ಜನರಿಗೆ ಮಧ್ಯಪ್ರದೇಶಕ್ಕೆ ಹೋಗಲು ಅನುಮತಿ ನೀಡಲಾಗಿದೆ. ಆದರೆ ರೈಲು ಹೊರಡುವ ಹೊತ್ತಿಗೆ 300 ಕಾರ್ಮಿಕರು ದೌಂಡ್ ನಿಲ್ದಾಣವನ್ನು ತಲುಪಿಲ್ಲ ಅವರಲ್ಲಿ ಹೆಚ್ಚಿನವರು ಎಂಐಡಿಸಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ದೌಂಡ್‌ನ ತಹಶೀಲ್ದಾರ್ ಸಂಜಯ್ ಪಾಟೀಲ್, ಈ ಜನರು ಇಲ್ಲಿನ ಎಂಐಡಿಸಿ ಪ್ರದೇಶದಲ್ಲಿ ಕೆಲಸ ಪಡೆಯುತ್ತಿರುವುದರಿಂದ ತಾವು ಪ್ರಯಾಣಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕಾರ್ಮಿಕರು ಹೊರಹೋಗುವುದರಿಂದ ಅವರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಕಂಪೆನಿಗಳಿಗೆ ತಿಳಿದಿದೆ. ಆದ್ದರಿಂದ ಅವರಿಗೆ ಕೆಲವು ಪ್ರೋತ್ಸಾಹಧನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸೋಮವಾರ ಉತ್ತರಾಖಂಡಕ್ಕೆ ತೆರಳಿದ ರೈಲು ಹತ್ತಲು 80 ಕಾರ್ಮಿಕರು ಬಂದಿಲ್ಲ. ಅವರೆಲ್ಲರೂ ಇಲ್ಲಿ ಕೆಲಸ ಪ್ರಾರಂಭಿಸಿದ್ದಾರೆ. ಆದ್ದರಿಂದ ಅವರು ತಮ್ಮ ಗ್ರಾಮಗಳಿಗೆ ತೆರಳಲು ಮನಸ್ಸು ಮಾಡಿಲ್ಲ ಎಂದು ಪಾಟೀಲ್ ತಿಳಿಸಿದ್ದಾರೆ. ಪುಣೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇವಲ್ ಕಿಶೋರ್ ರಾಮ್, ವಾಸ್ತವವಾಗಿ ಇದು ಸಕಾರಾತ್ಮಕ ಸಂಕೇತವಾಗಿದೆ. ಎಂಐಡಿಸಿ ಪ್ರದೇಶದಲ್ಲಿ ಕೈಗಾರಿಕೆಗಳನ್ನು ತೆರೆಯುವುದು ಮತ್ತು ನಿಷೇಧಿತ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳಿಗೆ ಅವಕಾಶ ನೀಡುವುದು ಕಾರ್ಮಿಕರಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಿದೆ. ಅದಕ್ಕಾಗಿಯೇ ಅವರು ಇಲ್ಲೇ ನಿಲ್ಲಲು ಆದ್ಯತೆ ನೀಡುತ್ತಿ ದ್ದಾರೆ ಎಂದು ತಿಳಿಸಿದ್ದಾರೆ. ಮಂಜೂರಾದ ಸಾಮರ್ಥ್ಯಕ್ಕಿಂತ ಕಡಿಮೆ ರೈಲುಗಳು ಓಡದಂತೆ ನೋಡಿಕೊಳ್ಳಲು ಅಧಿಕಾರಿಗಳು ಕಾರ್ಮಿಕರಿಗಾಗಿ ಕಾಯುವ ಪರಿಸ್ಥಿತಿ ಉಂಟಾಗಿದೆ ಎಂದು ಪಾಟೀಲ್ ಹೇಳಿದರು.
ಮಧ್ಯ ಪ್ರದೇಶದ ರೈಲು ಹತ್ತದ 300 ಕಾರ್ಮಿಕರಲ್ಲಿ ಒಬ್ಬರಾದ ಜ್ವಾಲಾ ಪ್ರಸಾದ್, ಅವರು ಕೆಲಸ ಮಾಡುತ್ತಿದ್ದ ಕುರ್ಮುಖ್ ಎಂಐಡಿಸಿ ಸ್ಥಾವರದಲ್ಲಿ ಕೆಲಸ ಪ್ರಾರಂಭವಾದ ಕಾರಣ ಅವರು ಹೊರಡಲಿಲ್ಲ ಎಂದು ಹೇಳಿದ್ದಾರೆ. ನಾನು ನನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಹತ್ತು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ನಾವು ಕಾರ್ಮಿಕರ ವಿಶೇಷ ರೈಲಿಗಾಗಿ ಫಾರ್ಮ್ ಅನ್ನು ಸಹ ಭರ್ತಿ ಮಾಡಿದ್ದೇವೆ. ಆದರೆ ನನ್ನ ಕಂಪೆನಿಯಲ್ಲಿ ಕೆಲಸದ ಪ್ರಾರಂಭವಾಗಿರುವುದರಿಂದ ಮರಳುವ ಯೋಜನೆಯನ್ನು ಕೈಬಿಟ್ಟೆವು ಎಂದು ಸ್ಪಷ್ಟಪಡಿಸಿದ್ದಾರೆ.