Advertisement

ಎಂಆರ್‌ಪಿ ಮುದ್ರಿಸದಿದ್ದರೆ 1 ಲಕ್ಷ ರೂ. ದಂಡ, ಜೈಲು ಶಿಕ್ಷೆ

03:50 AM Jul 08, 2017 | Karthik A |

ಹೊಸದಿಲ್ಲಿ: ಮಾರಾಟವಾಗದ ವಸ್ತುಗಳ ಮೇಲೆ ಜಿಎಸ್‌ಟಿ ಜಾರಿ ಬಳಿಕದ ಪರಿಷ್ಕೃತ ಎಂಆರ್‌ಪಿ ಮುದ್ರಿಸದಿದ್ದರೆ 1 ಲಕ್ಷ ರೂ. ದಂಡ ಮತ್ತು ಜೈಲು ಶಿಕ್ಷೆ ಎದುರಿಸಬೇಕಾದೀತು. ಹೀಗೆಂದು ಸ್ವತಃ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರೇ ಮಾಹಿತಿ ನೀಡಿದ್ದಾರೆ. ಮಾರಾಟವಾಗದ ಸರಕು ಗಳನ್ನು ಹೊಸ ಎಂಆರ್‌ಪಿ ಪ್ರಕಟಿಸಿ ಸೆಪ್ಟಂಬರ್‌ ಒಳಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದೂ ಪಾಸ್ವಾನ್‌ ತಿಳಿಸಿದ್ದಾರೆ.

Advertisement

‘ಮಾರಾಟವಾಗದೆ ಉಳಿದ ವಸ್ತುಗಳ ಮೇಲೆ ಪರಿಷ್ಕೃತ ಎಂಆರ್‌ಪಿಯನ್ನು ಮುದ್ರಿಸುವಂತೆ ಕಂಪೆನಿಗಳಿಗೆ ಸೂಚಿಸಿದ್ದೇವೆ. ಹಳೆಯ ಎಂಆರ್‌ಪಿ ಜತೆಗೆ ಹೊಸ ಎಂಆರ್‌ಪಿಯ ಸ್ಟಿಕ್ಕರ್‌ಗಳನ್ನೂ ಅಂಟಿಸಬೇಕಾದ್ದು ಕಡ್ಡಾಯ. ಆಗ ಗ್ರಾಹಕರಿಗೆ ಜಿಎಸ್‌ಟಿ ಜಾರಿ ಬಳಿಕ ಬೆಲೆಯಲ್ಲಾದ ವ್ಯತ್ಯಾಸ ತಿಳಿಯಲು ಸಾಧ್ಯ. ಒಂದೊಮ್ಮೆ ಈ ನಿಯಮವನ್ನು ಪಾಲಿಸದೆ ಇದ್ದರೆ ಪ್ಯಾಕೇಜ್ಡ್ ಕಮಾಡಿಟೀಸ್‌ ರೂಲ್ಸ್‌ ಉಲ್ಲಂಘಿಸಿದ ಆರೋಪದ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದಿದ್ದಾರೆ.

ಶಿಕ್ಷೆಯೇನು?: ಒಂದು ಬಾರಿ ನಿಯಮ ಉಲ್ಲಂಘಿಸಿದರೆ ಅಂಥ ಉತ್ಪಾದಕರಿಗೆ 25 ಸಾವಿರ ರೂ. ದಂಡ, ಎರಡನೇ ಬಾರಿಗೆ ಅದೇ ತಪ್ಪು ಮಾಡಿದರೆ 50 ಸಾವಿರ ರೂ. ಮತ್ತು ಮೂರನೇ ಬಾರಿ ತಪ್ಪು ಮಾಡಿದರೆ 1 ಲಕ್ಷ ರೂ.ಗಳವರೆಗೆ ದಂಡ ಮತ್ತು 1 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. 

ಸಹಾಯವಾಣಿಗಳ ಸಂಖ್ಯೆ ಹೆಚ್ಚಳ: ಜಿಎಸ್‌ಟಿ ಕುರಿತು ಗ್ರಾಹಕರಿಗೆ ಎದುರಾಗಿರುವ ಸಂದೇಹಗಳ ಪರಿಹಾರಕ್ಕಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯವೇ ಒಂದು ಸಮಿತಿಯನ್ನು ರಚಿಸಿದೆ. ಅಷ್ಟೇ ಅಲ್ಲ, ತೆರಿಗೆ ಸಂಬಂಧಿ ಅನುಮಾನಗಳಿಗೆ ಪರಿಹಾರ ಹೇಳಲು ಸಹಾಯವಾಣಿಗಳ ಸಂಖ್ಯೆಯನ್ನು 14ರಿಂದ 60ಕ್ಕೆ ಏರಿಸಲಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಈವರೆಗೆ 700ಕ್ಕೂ ಹೆಚ್ಚು ಸಂದೇಹಗಳನ್ನು ಜನರು ತೋಡಿಕೊಂಡಿದ್ದು, ಪರಿಹಾರಕ್ಕೆ ತಜ್ಞರ ನೆರವು ಪಡೆಯಲಾಗಿದೆ ಎಂದೂ ಹೇಳಿದ್ದಾರೆ ಪಾಸ್ವಾನ್‌.

Advertisement

Udayavani is now on Telegram. Click here to join our channel and stay updated with the latest news.

Next