Advertisement

ಕಂಪೆನಿಗಳೇ ಹೊಣೆ

01:15 AM Jan 15, 2021 | Team Udayavani |

ಹೊಸದಿಲ್ಲಿ: “ಕೋವಿಡ್ ಲಸಿಕೆಯಿಂದ ಯಾವುದೇ ಪ್ರತಿಕೂಲ ಪರಿಣಾಮ ಉಂಟಾದರೂ ಅದರ ಹಾನಿಯನ್ನು ನೀವೇ ಭರಿಸಬೇಕು.’ ಇಂಥದ್ದೊಂದು ಸೂಚನೆಯನ್ನು ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಹಾಗೂ ಭಾರತ್‌ ಬಯೋಟೆಕ್‌ ಸಂಸ್ಥೆಗಳಿಗೆ ಕೇಂದ್ರ ಸರಕಾರ ನೀಡಿದೆ. ಕೊವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಲಸಿಕೆಗಳ ನಿರ್ಬಂಧಿತ ತುರ್ತು ಬಳಕೆಗೆ ಅನುಮತಿ ನೀಡಿರುವ ಸರಕಾರ, ಈ ಕಂಪೆನಿಗಳೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಇಂಥದ್ದೊಂದು ಅಂಶವನ್ನು ಉಲ್ಲೇಖೀಸಲಾಗಿದೆ ಎಂದು ನ್ಯೂಸ್‌ 18 ವರದಿ ಮಾಡಿದೆ.

Advertisement

ಶನಿವಾರದಿಂದ ದೇಶಾದ್ಯಂತ ಲಸಿಕೆ ವಿತರಣೆ ಆರಂಭವಾಗುವ ಹಿನ್ನೆಲೆಯಲ್ಲಿ ಈ ಮಾಹಿತಿ ಮಹತ್ವ ಪಡೆದಿದೆ. ಸಿಡಿಎಸ್‌ಸಿಒ/ ಡ್ರಗ್ಸ್‌ ಆ್ಯಂಡ್‌ ಕಾಸ್ಮೆಟಿಕ್ಸ್‌ ಆ್ಯಕ್ಟ್/ ಡಿಸಿಜಿಐ ನೀತಿಯ ಪ್ರಕಾರ, ಎಲ್ಲ ರೀತಿಯ ಪ್ರತಿಕೂಲ ಪರಿಣಾಮಗಳಿಗೂ ಕಂಪೆನಿಯೇ ಹೊಣೆಯಾಗುತ್ತದೆ ಎಂಬು ದನ್ನು ಲಸಿಕೆ ಖರೀದಿ ಒಪ್ಪಂದದಲ್ಲಿ ಉಲ್ಲೇ ಖೀಸಲಾಗಿದೆ. ಅಲ್ಲದೆ ಗಂಭೀರ ಪರಿಣಾಮವೇನಾದರೂ ಕಂಡುಬಂದರೆ, ಕೂಡಲೇ ಕಂಪೆನಿಯು ಸರಕಾರಕ್ಕೆ ಮಾಹಿತಿ ನೀಡಬೇಕು ಎಂದೂ ಸೂಚಿಸಲಾಗಿದೆ.ಈ ನಡುವೆ, ಬುಧವಾರದಿಂದ ಗುರುವಾರದವರೆಗೆ 24 ಗಂಟೆಗಳಲ್ಲಿ ದೇಶಾದ್ಯಂತ 16,946 ಮಂದಿಗೆ ಸೋಂಕು ದೃಢಪಟ್ಟಿದ್ದು, 198 ಮಂದಿ ಸಾವಿಗೀ ಡಾಗಿದ್ದಾರೆ.

ಮೋದಿ ಜತೆ ಸಂವಾದಕ್ಕೆ ರೆಡಿ: ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಆರಂಭವಾಗ ಲಿರುವ ಲಸಿಕೆ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಜತೆಗೆ ಆ ದಿನ ಲಸಿಕೆ ಪಡೆಯಲಿರುವ ಆರೋಗ್ಯಸೇವಾ ಕಾರ್ಯಕರ್ತರೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮೋದಿ ಸಂವಾದವನ್ನೂ ನಡೆಸಲಿದ್ದಾರೆ. 2,934 ಲಸಿಕೆ ವಿತರಣೆ ಕೇಂದ್ರಗಳ ಪೈಕಿ ಕೆಲವು ಕೇಂದ್ರಗ ಳನ್ನು ಈ ಸಂವಾದಕ್ಕಾಗಿ ಆಯ್ಕೆ ಮಾಡಲಾಗಿದ್ದು, ಅಲ್ಲಿ ಸೂಕ್ತ ಐಟಿ ಮೂಲಸೌಕರ್ಯಗಳನ್ನು ಅಳವಡಿಸಲಾ ಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಲವು ತಿಂಗಳ ಬಳಿಕ ಸಾವು: ಚೀನದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ ಮೆರೆಯುತ್ತಿದ್ದು, 8 ತಿಂಗಳ ಬಳಿಕ ಸೋಂಕಿತರ ದೈನಂದಿನ ಸಂಖ್ಯೆಯಲ್ಲಿ ಜಿಗಿತ ಕಂಡುಬಂದಿದೆ. ಗುರುವಾರ ಒಂದೇ ದಿನ 115 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಹಲವು ತಿಂಗಳುಗಳ ಬಳಿಕ ಮೊದಲ ಸಾವು ದಾಖಲಾಗಿದೆ. ದೇಶದ ಉತ್ತರ ಭಾಗದಲ್ಲಿ ಲಾಕ್‌ಡೌನ್‌ ಹೇರಲಾಗಿದ್ದು, 2.20 ಕೋಟಿ ಮಂದಿ ಮನೆಯಲ್ಲೇ ಬಂಧಿಯಾಗಿದ್ದಾರೆ.

ವುಹಾನ್‌ ತಲುಪಿದ ತಜ್ಞರ  ತಂಡ; ಇಬ್ಬರಿಗೆ ಪಾಸಿಟಿವ್‌! :

Advertisement

ಹಲವು ತಿಂಗಳ ಕಾಯುವಿಕೆ ಬಳಿಕ ಕೊನೆಗೂ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ ಚೀನದ ವುಹಾನ್‌ಗೆ ತಲುಪಿದೆ. ಕೋವಿಡ್ ಸೋಂಕಿನ ಮೂಲವನ್ನು ಪತ್ತೆಹಚ್ಚಲು 13 ಮಂದಿಯ ಈ ತಂಡ ವುಹಾನ್‌ಗೆ ತೆರಳಿದ್ದು, ಸಿಂಗಾಪುರದಲ್ಲಿ ಕೊರೊನಾ ಪರೀಕ್ಷೆಗೆ ಒಳಪಟ್ಟಾಗ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಚೀನ ಅಧಿಕಾರಿ ಗಳು ನಿರ್ಬಂಧಿಸಿದ್ದಾರೆ. ವುಹಾನ್‌ನಲ್ಲಿ 14 ದಿನ ಕ್ವಾರಂಟೈನ್‌ಗೆ ಒಳಪಟ್ಟ ಬಳಿಕವೇ ತಂಡ ತನ್ನ ಕಾರ್ಯ ಆರಂಭಿಸಲಿದೆ.

ಜ.31ಕ್ಕೆ ಪೋಲಿಯೋ ಲಸಿಕೆ : ಈ ವರ್ಷದ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಸರಕಾರ ಜ.31ಕ್ಕೆ ನಿಗದಿಪಡಿಸಿದೆ. ಈ ಹಿಂದೆ ಜ.17ಕ್ಕೆ ಈ ಕಾರ್ಯಕ್ರಮ ನಿಗದಿಯಾಗಿತ್ತಾದರೂ 16ರಿಂದ ಕೊರೊನಾ ಲಸಿಕೆ ಕಾರ್ಯ ಆರಂಭವಾಗುವ ಕಾರಣ ಪೋಲಿಯೋ ಅಭಿಯಾನವನ್ನು ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next