Advertisement

ಮನೆ ಮನೆಗೆ ಲಸಿಕೆ ನೀಡಲು 90 ತಂಡ ರಚನೆ : ಲಸಿಕಾ ಅಭಿಯಾನಕ್ಕೆ ಡೀಸಿ ಶ್ರೀನಿವಾಸ್‌ ಚಾಲನೆ

02:11 PM Dec 30, 2021 | Team Udayavani |

ದೇವನಹಳ್ಳಿ: ಒಮಿಕ್ರಾನ್‌ ಸೋಂಕು ತಡೆಗಟ್ಟುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಯೊಂದು ಹಳ್ಳಿಯ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌ ತಿಳಿಸಿದರು.

Advertisement

ತಾಲೂಕಿನ ಕುಂದಾಣ ಗ್ರಾಪಂ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮನೆ ಮನೆಗೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಜನರು ಕೊರೊನಾದಿಂದ ಮುಕ್ತರಾಗಬೇಕಾದರೆ ಮೊದಲು ಕೊರೊನಾ ಲಸಿಕೆಯನ್ನು ಪಡೆಯಬೇಕು ಎಂದರು.

ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯ: ಕಡ್ಡಾಯವಾಗಿ ಮೊದಲ ಮತ್ತು ಎರಡನೇ ಲಸಿಕೆಯನ್ನು ಪಡೆಯಬೇಕು. ಲಸಿಕೆ ಪಡೆಯಲು ಯಾರೂ ಸಹ ಹಿಂಜರಿಯಬಾರದು. ಸ್ವಯಂ
ಪ್ರೇರಿತರಾಗಿ ಲಸಿಕೆಯನ್ನು ಹಾಕಿಸಿ ಕೊಳ್ಳಬೇಕು. ಕೊರೊನಾ ಲಸಿಕೆ ಪಡೆಯುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ
ಎಂದು ಹೇಳಿದರು.

ಜಿಲ್ಲಾಡಳಿತದಿಂದ ಕ್ರಮ: ಜಿಲ್ಲಾದ್ಯಂತ 90 ತಂಡಗಳ ರಚನೆ ಮಾಡಿ ಮನೆ ಮನೆಗೆ ಲಸಿಕೆ ನೀಡಲು ಕಾರ್ಯಕ್ರಮವನ್ನು ರೂಪಿಸಿದೆ. ಮೊದಲ ಡೋಸ್‌ ಅಥವಾ ಎರಡನೇ ಡೋಸ್‌ ಪಡೆಯದವರನ್ನು ಹುಡುಕಿ ಹುಡುಕಿ ಲಸಿಕೆ ಹಾಕಿಸಲಾಗುತ್ತಿದೆ. ಒಂದು ವಾರಗಳ ಕಾಲ ಲಸಿಕಾ ಅಭಿಯಾನ ನಡೆಯಲಿದೆ. ಕೋವಿಡ್‌ ವೈರಾಣುವಿನ ಹೊಸ ರೂಪಾಂತರಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಅಭಿಯಾನಕ್ಕೆ ಸಹಕಾರ ನೀಡಿ: ಡಿ.30ರ ಗುರುವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮಗಳಿಗೆ ವೈದ್ಯಕೀಯ ತಂಡ ಭೇಟಿ ನೀಡಿ ಲಸಿಕೆ ನೀಡಲಿದೆ.
ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ಪಡೆಯದೆ ಬಾಕಿ ಉಳಿಸಿಕೊಂಡಿರುವ ಫ‌ಲಾನುಭವಿ ಕೋವಿಡ್‌ ಲಸಿಕಾಕರಣ ಮೇಳದಲ್ಲಿ ಭಾಗವಹಿಸಿ, ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವ ಮೂಲಕ ಶೇ.100ರಷ್ಟು ಲಸಿಕಾಕರಣ ಪ್ರಗತಿಯನ್ನು ಸಾಧಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ವಿಜಯಾ ಈ ರವಿಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್‌, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್‌, ಉಪ ತಹಶೀಲ್ದಾರ್‌ ಚೈತ್ರ, ರಾಜಸ್ವ ನಿರೀಕ್ಷಕ ಚಿದಾನಂದ್‌, ಗ್ರಾಪಂ ಸದಸ್ಯ ಕೆ.ವಿ.ಸ್ವಾಮಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.