ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಈ ಭಾಗದ ಜನರು ಸರಿಯಾಗಿ ಚಿಕಿತ್ಸೆ ದೊರೆಯದೆ ಹೈರಾಣಾಗಿ ದಿಕ್ಕು ತೋಚದಂತೆ ಆಗಿದೆ ಎಂದು ಹಳ್ಳಿಮೈಸೂರು ಭಾಗದ ಜನರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಹಳ್ಳಿಮೈಸೂರು ಗ್ರಾಮದ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜ ನಿಕರು ಆಕ್ರೋಶ ವ್ಯಕ್ತ ಪಡಿಸಿದರು. ಆಸ್ಪತ್ರೆಯಲ್ಲಿ ಸಭಾಂಗಣದಲ್ಲಿ ನಡೆದ ದಂತ ವೈದ್ಯೆ ಬಿಂದೂಶ್ರೀ ಅವರನ್ನು ತರಾಟೆಗೆ ತಗೆದುಕೊಂಡರು.
ಅವ್ಯವಸ್ಥೆ ವಿರುದ್ಧ ಆಕ್ರೋಶ: ಸಭೆಯಲ್ಲಿ ಹಾಜರಿದ್ದ ತಾತನಹಳ್ಳಿ ಗ್ರಾಪಂ ಅಧ್ಯಕ್ಷ ಮಹೇಶ್, ಮಾಜಿ ಆಧ್ಯಕ್ಷ ಹೇಮಂತಗೌಡ, ಗ್ರಾಪಂ ಸದಸ್ಯರಾದ ವಿಶ್ವನಾಥ್, ರೇಣುಕಾ, ಪ್ರಶಾಂತ್, ತೇಜೂರ ರವಿ, ಸೋಮಶೇಖರ್, ರಜನಿ ಸೇರಿದಂತೆ ಗ್ರಾಮದ ದೀಪು, ಗಿರಿ, ಬಾಲಿ ಶರತ್ ಹಾಗೂ ಗುರು ಸೇರಿದಂತೆ ಹಳ್ಳಿಮೈಸೂರು ಜನ ಹಾಜರಿದ್ದು ಆಸ್ಪತ್ರೆ ಅವ್ಯವಸ್ಥೆಗೆ ತೀವ್ರವಾಗಿ ತರಾಟೆ ತಗೆದು ಕೊಂಡರು.
ಆರೋಗ್ಯ ಕೇಂದ್ರ ಸುಧಾರಿಸಿ: ಒಂದು ಹಂತದಲ್ಲಿ ತಾಲೂಕು ವೈದ್ಯಾಧಿಕಾರಿ ಎಚ್.ಎನ್.ರಾಜೇಶ್ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ಹಳ್ಳಿಮೈಸೂರು ಹೋಬಳಿ ಕೇಂದ್ರದಲ್ಲಿ ಆರೋಗ್ಯ ಕೇಂದ್ರ ದುಸ್ಥಿತಿಯಲ್ಲಿದೆ. ಈ ಆರೋಗ್ಯ ಕೇಂದ್ರಲ್ಲಿರುವ ಸಮಸ್ಯೆ ಬಗೆಹರಿಸುವಲ್ಲಿ ಕ್ಷೇತ್ರದ ಶಾಸಕರು ಮತ್ತು ಹಳ್ಳಿಮೈಸೂರು ಭಾಗದ ಜನರಪ್ರತಿನಿಧಿಗಳು ಮುಂದಾಗದೇ ಹೋ ದಲ್ಲಿ ಸಮುದಾಯ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವೈದ್ಯೆ ಪ್ರಭಾವ ಬಳಸಿ ಸಿಟಿಯಲ್ಲಿ ಸೇವೆ: ಒಂದು ಮಾಹಿತಿ ಪ್ರಕಾರ ಆಸ್ಪತ್ರೆಯಲ್ಲಿ ಐದು ವೈದ್ಯರ ತಂಡ ಇರಬೇಕಾಗಿದೆ. ಆದರೆ, ಕಾಯಂ ಆಗಿ ಇರುವುದು ಓರ್ವ ದಂತ ವೈದ್ಯೆ ಮಾತ್ರ. ಈ ಆಸ್ಪತ್ರೆ ನಿಯೋಜನೆಗೊಂಡಿರುವ ವೈದ್ಯೆ ರಮ್ಯಾ ಪ್ರಸ್ತುತ ಒಒಡಿ ಮೇಲೆ ಬೆಂಗಳೂರಿನ ಶಿವಾಜಿ ನಗರದ ಘೋಷಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾರೆ. ನಿಯೋಜನೆಗೊಂಡಿರುವುದು ಹಳ್ಳಿಮೈಸೂರಿನ ಸಮುದಾಯ ಆಸ್ಪತ್ರೆಗೆ. ಆದರೇ ತಮ್ಮ ಪ್ರಭಾವ ಬಳಸಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಈ ಭಾಗದ ರೋಗಿಗಳಿಗೆ ದೊರಕಬೇಕಾದ ಸೇವೆ ದೊರೆಯುತ್ತಿಲ್ಲ ಎಂಬುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಆಸ್ಪತ್ರೆಗೆ ಅವಶ್ಯವಾಗಿ ಬೇಕಾಗಿರುವ ಸ್ತ್ರೀರೋಗ ತಜ್ಞರು, ಅರವಳಿಕೆ, ಹಾಗೂ ಮಕ್ಕಳ ವೈದ್ಯರ ಭರ್ತಿ ಮಾಡಬೇಕಿದೆ. ತಾಲೂಕಿನ ಸೋಮನಹಳ್ಳಿ ಹಾಗು ಕೆರಗೋಡಿನ ವೈದ್ಯರಾದ ರಾಕೇಶ್ ಮತ್ತು ಚಂದ್ರಶೇಖರ್ ಅವರು ವಾರಕ್ಕೆ ಮೂರು ದಿನದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಆಯುಷ್ ವೈದ್ಯರಿದ್ದು ಕಳೆದ ಹದಿದನೈದು ದಿನಗಳಿಂದ ಅವರು ಸಹ ಕರ್ತವ್ಯ ನಿರ್ವಹಿಸುತ್ತಿಲ್ಲ. ಅವರು ಇಲಾಖೆಯಿಂದ ಬೆಂಗಳೂರು ನಗರದಲ್ಲಿ ನಡೆಯುತಿರುವ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಸಣ್ಣಪುಟ್ಟ ರೋಗಗಳಿಗೂ ಸಹ ತಮ್ಮಲ್ಲಿನ ಸಮುದಾಯ ಆಸ್ಪತ್ರೆ ಬಿಟ್ಟು ಹೊಳೆನರಸೀಪುರದ ಸಾರ್ವಜನಿಕ ಆಸ್ಪತ್ರೆಯನ್ನೇ ಅವಲವಂಬಿಸುವಂತೆ ಆಗಿರುವುದು ದುರ್ದೈವ ಎಂದು ಹೇಳಬಹು ದಾಗಿದೆ. ಈ ಸಮುದಾಯ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇಲ್ಲ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಕರೆದೊಯ್ಯೋದು ಸಹ ಕಷ್ಟ ಸಾಧ್ಯವಾಗಿದೆ. ಇದು ಈ ಭಾಗದ ಜನರ ದುರಂತವಷ್ಟೇ ಸರಿ.