ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೆಲಸ ಅರಸಿ ದೂರದ ಊರುಗಳಿಂದ ಬರುವ ಕಾರ್ಮಿಕರಿಗೆ ಸಮರ್ಪಕ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು ಮಹಾನಗರದ ವಿವಿಧೆಡೆ ಹೆಚ್ಚುವರಿಯಾಗಿ ಏಳು ಕಡೆಗಳಲ್ಲಿ ಕೇಂದ್ರಗಳ ಆರಂಭಕ್ಕೆ ಪಾಲಿಕೆ ಮುಂದಾಗಿದೆ. ವಲಸೆ ಕಾರ್ಮಿಕರ ದಟ್ಟಣೆ ಕುರಿತು ನಡೆಸಿದ ಸಮಿಕ್ಷೆ ಪ್ರಕಾರ ಸ್ಥಳ ಗುರುತಿಸಿದ್ದು, ಪಾಳು ಬಿದ್ದಿದ್ದ ಪಾಲಿಕೆ ಸಮುದಾಯ ಭವನಗಳನ್ನು ಈ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ.
ವಿವಿಧ ಕೆಲಸಗಳನ್ನು ಹುಡುಕಿಕೊಂಡು ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಕಾರ್ಮಿಕರು ವಾಣಿಜ್ಯ ನಗರಿಗೆ ಆಗಮಿಸುತ್ತಾರೆ. ಆದರೆ ದೂರದಿಂದ ಬರುವ ಬಡ ಕಾರ್ಮಿಕರು ನಗರ ಪ್ರದೇಶಗಳಲ್ಲಿ ವಸತಿ ಸೌಲಭ್ಯ ಹೊಂದುವುದು ಕಷ್ಟ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಫುಟ್‌ಪಾತ್, ಪಾಲಿಕೆ ಉದ್ಯಾನಗಳದಂತಹ ಸ್ಥಳಗಳನ್ನು ಆಶ್ರಯಿಸಬೇಕಾಗುತ್ತದೆ. ಹೀಗಾಗಿ ಇಂತಹ ಕಾರ್ಮಿಕರ ಅನುಕೂಲಕ್ಕಾಗಿ ಮಹಾನಗರ ಪಾಲಿಕೆ ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ (ಡೇ-ನಲ್ಮ್) ಎರಡು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಯೋಜನೆ ನಿಯಮದ ಪ್ರಕಾರ ಮಹಾನಗರದ ಜನಸಂಖ್ಯೆಗೆ ಅನುಗುಣವಾಗಿ ಒಂದು ಲಕ್ಷ ಜನಸಂಖ್ಯೆಗೆ ಒಂದು ಕೇಂದ್ರ ಇರಬೇಕು. ಆದರೆ 2011 ಜನಸಂಖ್ಯೆಗೆ ತಕ್ಕಂತೆ ಇನ್ನೂ ಏಳು ಕೇಂದ್ರ ಆರಂಭಕ್ಕೆ ಮುಂದಾಗಿದೆ.
ಸಮುದಾಯ ಭವನಗಳ ಬಳಕೆ: ಈಗಾಗಲೇ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ತಲಾ ಒಂದು ವಸತಿ ಕೇಂದ್ರಗಳಿವೆ. ಇದರೊಂದಿಗೆ ಕೋರ್ಟ್ ನಿರ್ದೇಶನದ ಪ್ರಕಾರ ಏಳು ಕೇಂದ್ರಗಳ ಸ್ಥಾಪನೆಗೆ ಪಾಲಿಕೆ ಮುಂದಾಗಿದೆ. ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಹೊಸದಾಗಿ ಧಾರವಾಡದಲ್ಲಿ-2, ಹುಬ್ಬಳ್ಳಿಯಲ್ಲಿ-5 ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಪಾಲಿಕೆ ಒಡೆತನದ ಸಮುದಾಯ ಭವನಗಳನ್ನು ಗುರುತಿಸಲಾಗಿದೆ. ಪಾಳು ಬಿದ್ದಿರುವ, ಬಳಕೆಯಾಗದ ಭವನಗಳನ್ನು ಪ್ರಮುಖವಾಗಿ ಕೇಂದ್ರೀಕರಿಸಲಾಗಿದೆ.
ವಲಯ ಕಚೇರಿ-1,2,6,7,8,10,11ರಲ್ಲಿ ಸಮುದಾಯ ಭವನಗಳನ್ನು ಗುರುತಿಸಲಾಗಿದೆ. ಏಳು ಕೇಂದ್ರಗಳಲ್ಲಿ 164 ಕಾರ್ಮಿಕರಿಗೆ ತಾತ್ಕಾಲಿಕ ವಸತಿ ನೀಡಬಹುದಾಗಿದೆ. ಸರಕಾರದಿಂದ ಏಳು ಕೇಂದ್ರ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಲಾಗಿದ್ದು, ಕೆಲ ಸಮುದಾಯ ಭವನಗಳ ದುರಸ್ತಿ ಸೇರಿದಂತೆ ಸುಣ್ಣ, ಬಣ್ಣ, ಕಾಯಂ ವ್ಯವಸ್ಥೆಗಳಾದ ಬೆಡ್, ಟೇಬಲ್ ಇನ್ನಿತರೆ ಸಾಮಗ್ರಿಗಳು ಹಾಗೂ ನಿರ್ವಹಣೆಗೆ ಎನ್‌ಜಿಓ ಸಂಸ್ಥೆಗಳನ್ನು ಗುರುತಿಸುವ ಕೆಲಸಕ್ಕೆ ಪಾಲಿಕೆ ಆಯುಕ್ತರು ಅನುಮೋದನೆ ನೀಡಿದ್ದಾರೆ. ಮೂರು ತಿಂಗಳಲ್ಲಿ ಈ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲಿವೆ. ಈ ಕಾರ್ಯಕ್ಕಾಗಿ 1 ಕೋಟಿರೂ.ಮೀಸಲಿರಿಸಲಾಗಿದೆ. ಪುರುಷ-ಮಹಿಳಾ ಕಾರ್ಮಿಕರ ಸಂಖ್ಯೆಗನುಗುಣವಾಗಿ ಪ್ರತ್ಯೇಕ ಕೇಂದ್ರದ ಚಿಂತನೆ ಅಧಿಕಾರಿಗಳಲ್ಲಿದೆ. ಯಾವುದಕ್ಕೂ ಬಳಕೆಯಾಗದೆ ಬಿದ್ದಿರುವ ಸಮುದಾಯ ಭವನಗಳು ಈ ಕೇಂದ್ರದ ಮೂಲಕವಾದರೂ ಸದ್ಬಳಕೆಯಾಗಲಿವೆ. ಈ ಕೇಂದ್ರಗಳಲ್ಲಿ ವಸತಿ ಪಡೆಯಲು ಒಂದಿಷ್ಟು ಮಾನದಂಡಗಳಿವೆ. ದೂರುದ ಊರುಗಳಿಂದ ಬಂದಿರಬೇಕು. ಇಲ್ಲಿ ಎಲ್ಲಿಯಾದರೂ ಕೆಲಸ ನಿರ್ವಹಿಸುವುದು ಪ್ರಮುಖವಾಗಿದೆ. ಓರ್ವ ಕಾರ್ಮಿಕ ಗರಿಷ್ಠ 6 ತಿಂಗಳವರೆಗೆ ವಸತಿ ಸೌಲಭ್ಯ ಪಡೆಯಹುದಾಗಿದೆ.