Advertisement
ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಕಡಿಮೆ ಇಲ್ಲದಂತೆ ಮೇಳ ಆಯೋಜಿತವಾಗಿತ್ತು. ಲಡಾಯಿ ಪ್ರಕಾಶನ, ಕವಿ ಪ್ರಕಾಶನ, ಚಿತ್ತಾರ ಕಲಾ ಬಳಗ ಆಯೋಜಿಸಿದ್ದ ಎರಡು ದಿನಗಳ ಸಮ್ಮೇಳನದಲ್ಲಿ ಫ್ಯಾಸಿಸಂ ಚಹರೆಗಳು ಅಪಾಯ-ಪ್ರತಿರೋಧ ವಿಷಯ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಾದ ಮಂಡಿಸಿದರು.
Related Articles
Advertisement
ಮಧ್ಯಮ ಮಾರ್ಗವನ್ನು ಕೆಲ ಎಡಪಂಥಿಯರು ಸಂಶಯದಿಂದ ನೋಡಿದರೆ, ಇನ್ನು ಕೆಲವರು ಮಧ್ಯಮ ಮಾರ್ಗವನ್ನು ನೇರವಾಗಿ ಜರಿದರು. ಎಡವೂ ಅಲ್ಲದ್ದು, ಬಲವೂ ಅಲ್ಲದ್ದು ಯಾವುದೂ ಅಲ್ಲ ಎಂದು ಹೇಳಿದರೆ, ಕೆಲವರು ಇದರ ಪ್ರಾಮಾಣಿಕತೆ ತಿಳಿಯುವುದು ಅವಶ್ಯಕ ಎಂದರು.
ಮಧ್ಯಮ ಮಾರ್ಗಿಗಳ ಜಾತ್ಯತೀತ ಮನೋಭಾವ, ವಿಚಾರಧಾರೆ ತಿಳಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಬೇಕೆಂದು ಕೆಲ ಸಾಹಿತಿಗಳು ಅಭಿಪ್ರಾಯಪಟ್ಟರು. ಎಡಪಂಥಿಯ ವಿಚಾರಧಾರೆಯಲ್ಲಿ ಮಾತ್ರ ಬುದ್ಧಿಜೀವಿಗಳಿದ್ದಾರೆ,
ಬಲಪಂಥ ವಿಚಾರಧಾರೆಯಲ್ಲಿ ಬುದ್ಧಿಜೀವಿಗಳೇ ಇಲ್ಲ ಎಂಬ ಹೇಳಿಕೆ, ಗೋ ಸಂರಕ್ಷಣೆ ನೆಪದಲ್ಲಿ ದಾಳಿ, ಹಲ್ಲೆ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ದನದ ಮಾಂಸಕ್ಕಿಂತ ಮನುಷ್ಯನ ಮಾಂಸ ಸಸ್ತಾ ಆಗಿದೆ ಎಂಬ ಹೇಳಿಕೆ ಚರ್ಚೆಗೆ ಇಂಬು ನೀಡಿದವು.
ಪ್ರೊ| ಅರವಿಂದ ಮಾಲಗತ್ತಿ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಮಾತನಾಡಿ, ಎಡಪಂಥೀಯರ ಚಿತ್ತ ಸೆಳೆದರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಕನ್ನಡ ಭಾಷೆಯನ್ನೇ ಅಸ್ತ್ರವಾಗಿಸಿಕೊಳ್ಳಬೇಕು. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ರಚನೆ ಮೂಲಕ ಕೇಂದ್ರ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕೆಂದು ಭಾಷಾ ತಜ್ಞ ಪ್ರೊ| ಜಿ.ಎನ್. ದೇವಿ ಉತ್ತಮ ಸಲಹೆ ನೀಡಿದರು.
ಫ್ಯಾಸಿಸ್ಟ್ ಶಕ್ತಿಗಳು ಬಸವೇಶ್ವರ ಜಯಂತಿಯನ್ನು ಕೇಸರೀಕರಣ ಮಾಡುವ ಹುನ್ನಾರ ನಡೆಸಿದ್ದನ್ನು, ಜನರ ದಿಕ್ಕು ತಪ್ಪಿಸುತ್ತಿರುವುದನ್ನು ಹೇಳುವ ಮೂಲಕ ಗಂಭೀರ ಚರ್ಚೆಗೆ ಕಾರಣರಾದರು. ಯುವಕರಿಗೆ ಆದ್ಯತೆ ನೀಡುವ ಉದ್ದೇಶದಿಂದ ಕ್ಯಾಂಪಸ್ ಬ್ಲೂಸ್ ಗೋಷ್ಠಿ ಆಯೋಜಿತವಾಗಿತ್ತು.
ಮೇಳದಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಹಲವು ವಿಷಯಗಳ ಚರ್ಚೆ ಸಂಘಟಿಸಲಾಗಿತ್ತು. ಮೇಳದ ದ್ವಿತೀಯ ದಿನ ರಕ್ತದಾನ ಶಿಬಿರ ಆಯೋಜಿಸಿದ್ದು ವಿಶೇಷವೆನಿಸಿತು. ಮೇಳದಲ್ಲಿ ಸಮಯ ಪರಿಪಾಲನೆ ಇರಲಿಲ್ಲ. ಸಮಯಕ್ಕೆ ಸರಿಯಾಗಿ ಗೋಷ್ಠಿಗಳನ್ನು ಆರಂಭಿಸಲಿಲ್ಲ. ಎಲ್ಲ ಗೋಷ್ಠಿಗಳಲ್ಲಿಯೂ ಸಂವಾದಕ್ಕೆ ಇನ್ನಷ್ಟು ಸಮಯ ನೀಡಬೇಕಿತ್ತೆಂಬುದು ಹಲವರ ಅಭಿಪ್ರಾಯವಾಗಿತ್ತು.
* ವಿಶ್ವನಾಥ ಕೋಟಿ