Advertisement

ಬಳ್ಳಾರಿ ಜೈಲು ಹಕ್ಕಿಗಳಿಗೆ ಅಧ್ಯಾತ್ಮ ಬೋಧನೆ

06:00 AM Nov 28, 2018 | |

ಬಳ್ಳಾರಿ: ಕೆಟ್ಟ ಘಳಿಗೆಯಲ್ಲಿ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಜೈಲು ಸೇರಿರುವ ಕೈದಿಗಳಲ್ಲಿ ಮಾನಸಿಕ ಖನ್ನತೆ, ಒತ್ತಡ, ದ್ವೇಷ, ವೈಷಮ್ಯ ಸಹಜ. ಇವುಗಳಿಂದ ಕೈದಿಗಳನ್ನು ಹೊರತರಲು ಮುಂದಾಗಿರುವ ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕರು ಅಧ್ಯಾತ್ಮದ ಮೊರೆ ಹೋಗಿದ್ದಾರೆ. ಪಿರಮಿಡ್‌ ಧ್ಯಾನ ಕೇಂದ್ರದ ಸಹಾಯದಿಂದ ಪ್ರತಿ ನಿತ್ಯ ಧ್ಯಾನ ಮತ್ತು ಸತ್ಸಂಗ ಬೋಧನೆ ಮಾಡಿಸುವ ಮೂಲಕ ಸಾತ್ವಿಕ ಗುಣಗಳನ್ನು ತುಂಬುತ್ತಿದ್ದಾರೆ.

Advertisement

ನಗರದ ಕೇಂದ್ರ ಕಾರಾಗೃಹದಲ್ಲಿರುವ ಸಜಾಬಂಧಿ ಹಾಗೂ ವಿಚಾರಣಾಧೀನ ಕೈದಿಗಳು ಜೈಲಿಗೆ ಬರುತ್ತಿದ್ದಂತೆ ಕೆಲವರು ಒತ್ತಡಕ್ಕೆ ಒಳಗಾಗಿ ಮಾನಸಿಕ ಖನ್ನತೆಗೆ ಒಳಗಾಗುತ್ತಾರೆ. ಇನ್ನು ಕೆಲವರು ವಿಭಿನ್ನ ರೀತಿಯಲ್ಲಿ ವರ್ತಿಸಲು ಮುಂದಾಗುತ್ತಾರೆ. ಜೈಲು ಸಿಬ್ಬಂದಿಗೆ ಸಹಕರಿಸದೆ, ಸಹ ಕೈದಿಗಳೊಂದಿಗೆ ಉತ್ತಮವಾಗಿ ನಡೆದುಕೊಳ್ಳದಂತೆ ವರ್ತಿಸುತ್ತಿದ್ದಾರೆ. ಇದರಿಂದ ಇಂಥ ಕೈದಿಗಳನ್ನು ನಿಯಂತ್ರಿಸುವುದು ಮತ್ತು ಅವರನ್ನು ಪರಿವರ್ತಿಸಿ ಬದಲಾವಣೆ ಮೂಡಿಸುವುದು ಸುಲಭದ ಕೆಲಸವಲ್ಲ. ಹಾಗಾಗಿ ಕೈದಿಗಳನ್ನು
ಅಧ್ಯಾತ್ಮದತ್ತ ಕೊಂಡೊಯ್ದರೆ ಒಂದಷ್ಟು ಸುಧಾರಿಸಬಹುದೆಂಬ ಉದ್ದೇಶದಿಂದ ಕೇಂದ್ರ ಕಾರಾಗೃಹದ ಅಧೀಕ್ಷಕರು ಇಲ್ಲಿನ ಪಿರಮಿಡ್‌ ಧ್ಯಾನ ಕೇಂದ್ರದವರ ಮೊರೆ ಹೋಗಿದ್ದಾರೆ. 

ಪ್ರತಿದಿನ ಮಧ್ಯಾಹ್ನ 2ರಿಂದ 4ರವರೆಗೆ ಧ್ಯಾನ ಮಾಡಿಸಲಾಗುತ್ತಿದ್ದು, ಸಂಜೆ 4 ಗಂಟೆಯಿಂದ ಸತ್ಸಂಗ ಬೋಧನೆ ಮಾಡಲಾಗುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ಪಿರಮಿಡ್‌ ಧ್ಯಾನಕೇಂದ್ರದಿಂದ ಆರಂಭದಲ್ಲಿ ಕೇವಲ 41 ದಿನಗಳಿಗಷ್ಟೇ ಸೀಮಿತವಾಗಿದ್ದ ಧ್ಯಾನ ಶಿಬಿರವು ಕೈದಿಗಳಲ್ಲಿ ಕಂಡುಬರುತ್ತಿರುವ ಪರಿವರ್ತನೆಯಿಂದಾಗಿ ಇದೀಗ 70 ದಿನಗಳವರೆಗೆ ಮುಂದುವರಿದಿದೆ. ವಿಭಿನ್ನವಾಗಿ ವರ್ತಿಸುತ್ತಿದ್ದ
ಕೆಲವು ಕೈದಿಗಳು ಸ್ವಲ್ಪ ಶಾಂತಚಿತ್ತದಿಂದ ಇದ್ದಾರೆ.

ಅವರಲ್ಲಿನ ಖನ್ನತೆ, ಕೋಪ-ತಾಪಗಳೆಲ್ಲವೂ ಹತೋಟಿಗೆ ಬಂದಿವೆ. ಮೇಲಾಗಿ ಧ್ಯಾನ, ಸತ್ಸಂಗ ಬೋಧನೆಯಲ್ಲಿ ಕೈದಿಗಳು ಸಹ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಹಾಗಾಗಿ ಕಾರಾಗೃಹದಲ್ಲೇ ಕೊಠಡಿಯೊಂದರಲ್ಲಿ ಪಿರಮಿಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಆಧಾತ್ಮತೆಗೆ ಅಗತ್ಯವಾದ ಗೋಡೆ ಬರಹಗಳನ್ನು ಬಿಡಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಹ ಒದಗಿಸಲಾಗಿದೆ. ಅಲ್ಲದೇ, ಇದಕ್ಕಾಗಿ ಕಾರಾಗೃಹದ ಆವರಣದಲ್ಲಿ 20/20 ಅಳತೆಯಲ್ಲಿ ಪಿರಮಿಡ್‌ ಧ್ಯಾನ ಕೇಂದ್ರವನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗಿದ್ದು, ಅನುಮತಿಗಾಗಿ ಕಾರಾಗೃಹದ ಪ್ರಧಾನ ಕಚೇರಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಅಧೀಕ್ಷಕ ಪಿ.ರಂಗನಾಥ್‌.

ಧ್ಯಾನ ಶಿಬಿರ ಏಕೆ ಬೇಕು?
ಕಾರಾಗೃಹದ ಅಧೀಕ್ಷಕರು ಕೈದಿಗಳನ್ನು ಭೇಟಿ ಮಾಡಲು ಪ್ರತಿದಿನವೂ ತೆರಳಿದಾಗ ಬಹುತೇಕ ಕೈದಿಗಳ ಮಾನಸಿಕ ಖನ್ನತೆ, ಕ್ರೂರತ್ವ ಹಾಗೂ ಸಿಡಿಮಿಡಿಗೊಳ್ಳುವುದು ಸೇರಿ ಇತರೆ ಪ್ರಚೋದನಾತ್ಮಕ ಮನೋಭಾವ ಕಣ್ಣಾರೆ ಕಂಡಿದ್ದಾರಂತೆ. ಹಾಗಾಗಿ ಧ್ಯಾನ, ಸತ್ಸಂಗ ಮಾಡುವುದರಿಂದ ಆಧ್ಯಾತ್ಮಿಕತೆ ಬೆಳೆಯಲಿದೆ. ಖನ್ನತೆ ದೂರವಾಗಿ ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ. ನೈತಿಕ ಸ್ಥೆರ್ಯ ಹೆಚ್ಚಾಗಲಿದೆ. ಅಧ್ಯಾತ್ಮ ಜ್ಞಾನ, ಏಕಾಗ್ರತೆ ಹೆಚ್ಚಲಿದೆ. ಆದ್ದರಿಂದ ಕೈದಿಗಳನ್ನು ಮೊದಲು ಧ್ಯಾನ, ಸತ್ಸಂಗ ಬೋಧನೆಯಿಂದಾಗಿ ಅಧಾತ್ಮದತ್ತ ಕೊಂಡೊಯ್ಯಲಾಗುತ್ತಿದ್ದು, ರಾಜ್ಯದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಆರಂಭಿಸಿರುವುದು ವಿಶೇಷ. 

Advertisement

ಮೊದಲು 41 ದಿನಗಳಿಗೆ ಸೀಮಿತವಾಗಿದ್ದ ಶಿಬಿರ, ಇದೀಗ 70 ದಿನಗಳವರೆಗೆ ಮುಂದುವರಿದಿದೆ. ಕೈದಿಗಳು ನಿಧಾನವಾಗಿ ಧ್ಯಾನ, ಸತ್ಸಂಗಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಕೆಲವರು ಬದಲಾವಣೆಯೂ ಆಗಿದ್ದಾರೆ. ಹಾಗಾಗಿ ಕಾರಾಗೃಹದಲ್ಲಿ ಶಾಶ್ವತವಾಗಿ ಪಿರಮಿಡ್‌ ಧ್ಯಾನಕೇಂದ್ರವನ್ನು ನಿರ್ಮಿಸಲು ಅನುಮತಿ ಕೋರಿ ಕಾರಾಗೃಹ ಪ್ರಧಾನ ಕಚೇರಿಗೆ ಪತ್ರ ಬರೆಯಲಾಗಿದೆ.
● ಪಿ.ರಂಗನಾಥ್‌, ಅಧೀಕ್ಷಕ, ಕೇಂದ್ರ ಕಾರಾಗೃಹ, ಬಳ್ಳಾರಿ

ನಿರಂತರ ಧ್ಯಾನ ಶಿಬಿರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಹುತೇಕ ಕೈದಿಗಳು ಈಗ ನಿರಾಳಭಾವ ಹಾಗೂ ಮಾನಸಿಕ ಪ್ರಸನ್ನತೆಯಿಂದ ಇದ್ದಾರೆ. ಧ್ಯಾನದಿಂದ ಆರೋಗ್ಯ, ಜ್ಞಾಪಕಶಕ್ತಿ ವೃದಿಟಛಿಯಾಗಲಿದ್ದು, ಏಕಾಗ್ರತೆ, ಆತ್ಮವಿಶ್ವಾಸ ಹೆಚ್ಚಲಿದೆ. ಭಯ, ದುಃಖ, ಆತಂಕ, ನಿದ್ರಾಹೀನತೆ ದೂರವಾಗಲಿದೆ.
● ಪುರುಷೋತ್ತಮ, ಹನುಮಂತರಾವ್‌, ತರಬೇತುದಾರರು, ಪಿರಮಿಡ್‌ ಧ್ಯಾನಕೇಂದ್ರ, ಬಳ್ಳಾರಿ

ಶಿಬಿರದಲ್ಲಿ ಆಹಾರದ ಬಗ್ಗೆಯೂ ಹೇಳಿಕೊಡಲಾಗುತ್ತಿದೆ. ನೀತಿ ಕತೆಗಳನ್ನು ಹೇಳುವ ಮೂಲಕ ನಮ್ಮ ಮನಃ ಪರಿವರ್ತಿಸಲಾಗುತ್ತಿದೆ. ಈ ಹಿಂದೆ ಇದ್ದ ಮಾನಸಿಕ ಒತ್ತಡ ಇದೀಗ ನಿಯಂತ್ರಣಗೊಂಡಿದೆ. ಕೋಪ, ತಾಪಗಳೆಲ್ಲವೂ ಕಡಿಮೆಯಾಗಿವೆ.
● ಸಿದ್ಧಾರೂಢ, ಸಜಾಬಂಧಿ, ಕೇಂದ್ರ ಕಾರಾಗೃಹ, ಬಳ್ಳಾರಿ

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next