ಅಹಮದಾಬಾದ್: ಭಾನುವಾರ (ಏ.10) ಗುಜರಾತ್ ನ ಸಬರ್ ಕಾಂತ್ ಜಿಲ್ಲೆಯ ಹಿಮ್ಮತ್ ನಗರದಲ್ಲಿ ರಾಮನವಮಿ ಹಬ್ಬದ ವೇಳೆ ಘರ್ಷಣೆ ನಡೆದ ಬೆನ್ನಲ್ಲೇ ಸೋಮವಾರ (ಏ.11) ರಾತ್ರಿ ಕೂಡಾ ಕೋಮು ಘರ್ಷಣೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಉತ್ತರಪ್ರದೇಶ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು, ಆದರೆ ವಾರಣಾಸಿಯಲ್ಲಿ ಸೋಲು
ಭಾನುವಾರ ರಾತ್ರಿ ಗಲಭೆ ನಡೆದ ನಂತರ ಹಿಮ್ಮತ್ ನಗರಕ್ಕೆ ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಆದರೆ ಸೋಮವಾರ ಮತ್ತೆ ಕೋಮು ಘರ್ಷಣೆ ನಡೆದಿರುವುದಾಗಿ ವರದಿ ಹೇಳಿದೆ.
ಹಿಮ್ಮತ್ ನಗರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದ್ದು, ಪೆಟ್ರೋಲ್ ಬಾಂಬ್ ಬಳಕೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ಲಾಠಿಚಾರ್ಜ್ ನಡೆಸಿರುವುದಾಗಿ ವರದಿ ವಿವರಿಸಿದೆ.
ಕೋಮು ಘರ್ಷಣೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಮಂಗಳವಾರ (ಏ.12) ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಕೂಡಾ ಈ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಇಫ್ತಾರ್ ಕೂಟ ನಡೆಯುತ್ತಿದ್ದ ಸಂದರ್ಭದಲ್ಲಿ ಕಲ್ಲುತೂರಾಟ ನಡೆಸಿರುವ ಘಟನೆ ನಡೆದಿತ್ತು. ಕೂಡಲೇ ಈ ಬಗ್ಗೆ ಮಾಹಿತಿ ಬಂದಿದ್ದು, ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ವಾಘೇಲಾ ತಿಳಿಸಿದ್ದಾರೆ.
ಭಾನುವಾರ ಕೂಡಾ ಕೋಮು ಘರ್ಷಣೆ ನಡೆದ ಪರಿಣಾಮ ಹಲವಾರು ವಾಹನ ಮತ್ತು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದ ಸಂಬಂಧ 50 ಮಂದಿಯನ್ನು ವಶಕ್ಕೆ ಪಡೆದಿದ್ದು, ಮೂರು ಎಫ್ ಐಆರ್ ದಾಖಲಿಸಿದ್ದರು.